ಕಳಪೆ ಕಾಮಗಾರಿ: ಕಟ್ಟಡ ಹಾಳು
ಹಾಸನ: ಸರ್ಕಾರ ಸಾರ್ವಜನಿಕರ ಹಿತದೃಷ್ಟಿಯಿಂದ ಕೋಟ್ಯಂತರ ರುಪಾಯಿ ವೆಚ್ಚದಲ್ಲಿ ಕಟ್ಟಡಗಳನ್ನು ನಿರ್ಮಿಸಲು ಟೆಂಡರ್‌ನ್ನು ಗುತ್ತಿಗೆದಾರರಿಗೆ ನೀಡುತ್ತದೆ. ಆದರೆ ಗುತ್ತಿಗೆದಾರರ ಕಳಪೆ ಕಾಮಗಾರಿಯನ್ನು ಮಾತ್ರ ನಿಯಂತ್ರಿಸಲು ಇನ್ನೂ ಸಾಧ್ಯವಾಗುತ್ತಿಲ್ಲ.
ಒಮ್ಮೆ ಗುತ್ತಿಗೆದಾರರಿಗೆ ಟೆಂಡರ್ ನೀಡಿ ಕೈತೊಳೆದುಕೊಳ್ಳುವಂತಹ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕಾಮಗಾರಿ ಕಳಪೆಯಾಗಿ ನಿರ್ವಹಿಸಿ ಗುತ್ತಿಗೆದಾರರು ಹಣ ಮಾಡಿಕೊಳ್ಳುವುದನ್ನು ತಡೆಗಟ್ಟಲು ಸಾಧ್ಯವಾಗುತ್ತಿಲ್ಲ. ಈ ರೀತಿಯ ಕಳಪೆ ಕಾಮಗಾರಿಗಳು ಜಿಲ್ಲೆಯಲ್ಲಿ ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ.
ನಗರದ ಆರ್.ಸಿ.ರಸ್ತೆಯಲ್ಲಿರುವ ಗಂಧದ ಕೋಠಿ ಆವರಣದಲ್ಲಿ 5 ಕೋಟಿ ರು.ವೆಚ್ಚದಲ್ಲಿ ನಿರ್ಮಿಸಿದ ಎರಡು ಕಾಲೇಜು ಕಟ್ಟಡಗಳು ಕಳಪೆ ಗುಣಮಟ್ಟದ ಕಾಮಗಾರಿಯಿಂದ ಗೋಡೆಗಳು ಬಿರುಕು ಬಿಟ್ಟಿದ್ದು, ನಿತ್ಯ ಸಾವಿರಾರು ವಿದ್ಯಾರ್ಥಿಗಳು ಆತಂಕದಲ್ಲಿ ಕಲಿಯುವ ವಾತಾವರಣ ನಿರ್ಮಾಣವಾಗಿದೆ.
ಹಾಸನದಲ್ಲಿ ಸರ್ಕಾರಿ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕಾಗಿ ಆರ್.ಸಿ.ರಸ್ತೆಯ ಎಸ್ಪಿ ಕಚೇರಿ ಎದುರಿಗಿದ್ದ ಸರ್ಕಾರಿ ವಿಭಜಿತ ಮತ್ತು ಪದವಿ ಪೂರ್ವ ಕಾಲೇಜಿನ ಕಟ್ಟಡಗಳನ್ನು ಕೆಡವಿ ಹೊಸ ಕಟ್ಟಡಗಳನ್ನು ಗಂಧದ ಕೋಠಿ ಆವರಣದಲ್ಲಿ ನಿರ್ಮಿಸಲಾಯಿತು.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅಧಿಕಾರಾವಧಿಯಲ್ಲಿ ಐದು ಕೋಟಿ ರು. ವೆಚ್ಚದಲ್ಲಿ ಈ ಕಟ್ಟಡಗಳ ನಿರ್ಮಾಣಕ್ಕೆ ಮುಂಜೂರಾತಿ ದೊರೆಯಿತು. ಮೂರು ಅಂತಸ್ತಿನ ಎರಡು ಕಟ್ಟಡಗಳಿಗೆ ತಲಾ ಎರಡೂವರೆ ಕೋಟಿ ರು. ಖರ್ಚು ಮಾಡಲಾಗಿದೆ. ಕಾಮಗಾರಿ ಪೂರ್ಣಗೊಂಡು ಇನ್ನೂ ಎರಡು ವರ್ಷ ಮುಗಿದಿಲ್ಲ. ಆಗಲೇ ಗೋಡೆಗಳಲ್ಲಿ ಅಲ್ಲಲ್ಲೇ ಬಿರುಕು ಬಿಟ್ಟಿವೆ. ಕಟ್ಟಡ ಮೇಲ್ನೋಟಕ್ಕೆ ಹೊರಗಿನಿಂದ ಸುಂದರ ಹಾಗೂ ಬೃಹದಾಕಾರವಾಗಿ ಕಾಣುತ್ತದೆ. ಆದರೆ ಓಳ ಹೋದರೆ ಯಾವ ಮಟ್ಟದ ಕಳಪೆ ಕಾಮಗಾರಿ ನಿರ್ವಹಿಸಲಾಗಿದೆ ಎಂಬುದರ ಸತ್ಯ ದರ್ಶನವಾಗುತ್ತದೆ.
ಈ ಕಟ್ಟಡಗಳನ್ನು ನಿರ್ಮಿಸಲು ಗುಣಮಟ್ಟದ ಸಿಮೆಂಟ್ ಅಥವಾ ಬೇರೆ ಏನಾದರೂ ಬಳಕೆ ಮಾಡಿದ್ದಾರೆಯೇ ಎಂಬ ಅನುಮಾನ ಜನರಲ್ಲಿ ಮೂಡುತ್ತದೆ. ಈಗಾಗಲೇ ಕಟ್ಟಡದ ಮೆಟ್ಟಿಲುಗಳು ಕಿತ್ತು ಹೋಗಿವೆ. ಗುತ್ತಿಗೆಗಾರರು ಕಾಟಾಚಾರಕ್ಕೆ ಬಿಲ್ ಪಡೆಯುವ ಸಲುವಾಗಿಯಷ್ಟೇ ಕಾರ್ಯ ನಿರ್ವಹಿಸಿದ್ದಾರೆ ಎಂಬುದು ಕಾಮಗಾರಿಯ ಅತೀ ಕಳಪೆ ಗುಣಮಟ್ಟದಿಂದ ಎಂಥವರಿಗೂ ತಿಳಿಯುತ್ತದೆ.
ಹೆಚ್ಚಿನ ಕೊಠಡಿಗಳಲ್ಲಿ ಗೋಡೆಗಳು ಬಿರುಕು ಬಿಟ್ಟಿವೆ. 50 ವರ್ಷಗಳ ಹಿಂದೆ ನಿರ್ಮಿಸಿ ಇನ್ನೇನು ಬೀಳುವ ಹಂತದಲ್ಲಿರುವ ಕಟ್ಟಡವೇನೊ ಎಂಬಂತೆ ಕಾಣುತ್ತದೆ. ಎರಡು ಕಾಲೇಜುಗಳಲ್ಲಿ ನಿತ್ಯ ಸಾವಿರಾರು ವಿದ್ಯಾರ್ಥ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಅನಾಹುತವೇನಾದರೂ ಸಂಭವಿಸಿದರೆ ಯಾರು ಜವಾಬ್ದಾರಿ ಹೊರುತ್ತಾರೆ.
ಎರಡೂ ಕಟ್ಟಡಗಳ ಕಾಮಗಾರಿ ನಿರ್ವಹಿಸಿರುವ ಗುತ್ತಿಗೆದಾರನಿಗೆ ಹಣ ಸಂದಾಯವಾಗಿದ್ದು, ಕಳಪೆ ಕಾಮಗಾರಿ ನಿರ್ವಹಿಸಿರುವುದಕ್ಕೆ ಯಾರು ಹೊಣೆ?. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕಾಮಗಾರಿಯ ಪರಿಶೀಲನೆ ಮಾಡದೇ ಹಣ ಬಿಡುಗಡೆ ಮಾಡಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಈ ಕಟ್ಟಡದ ಕಾಮಗಾರಿಯನ್ನು ಈಗಲಾದರೂ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಅಗತ್ಯವಿದೆ.
ಪಿ.ರವಿಕುಮಾರ್