ಕ್ರೀಡೆಯಿಂದ ಉತ್ತಮ ಆರೋಗ್ಯ: ಅಂಬಿಕಾ
ಕನ್ನಡಪ್ರಭ ವಾರ್ತೆ ಹಾಸನ ಸೆ.17
ಮನುಷ್ಯ ಉತ್ತಮ ಆರೋಗ್ಯ ಹೊಂದಲು ಹಾಗೂ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಕ್ರೀಡೆ ಸಹಕಾರಿಯಾಗಿದೆ. ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಶಿಸ್ತು, ಒಗ್ಗಟ್ಟು ಸೌಹಾರ್ದತೆ ಬೆಳೆಯುತ್ತದೆ ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಡಿ.ಜಿ.ಅಂಬಿಕಾ ರಾಮಣ್ಣ ತಿಳಿಸಿದ್ದಾರೆ.
ಜಿಲ್ಲಾಡಳಿತ ಜಿಲ್ಲಾ ಪಂಚಾಯ್ತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ನವದೆಹಲಿಯ ಪೈಕಾ ಮಿಷನ್ ಸಹಯೋಗದೊಂದಿಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ದಸರಾ ಗ್ರಾಮೀಣ ಪೈಕಾ ಮತ್ತು ಮಹಿಳಾ ಪೈಕಾ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ಶಾಲಾ ಶಿಕ್ಷಕರು ಹಾಗೂ ಪೋಷಕರು ಮಕ್ಕಳಿಗೆ ಕ್ರೀಡೆಗಳಿಗೆ ಪ್ರೋತ್ಸಾಹ ನೀಡಬೇಕು. ಕ್ರೀಡಾಕೂಟದಲ್ಲಿ ಗೆಲುವಿಗಿಂತ ಸ್ಪರ್ಧಿಸುವುದು ಬಹುಮುಖ್ಯ. ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸುವಂತೆ ತಿಳಿಸಿದರು.
ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದಂತಹವರಿಗೆ ಉದ್ಯೋಗ ಪಡೆಯಲು ಮೀಸಲಾತಿ ದೊರೆಯಲಿದೆ ಎಂದರಲ್ಲದೆ, ಕ್ರೀಡೆಗಳಲ್ಲಿ ಉತ್ತಮ ಪ್ರದರ್ಶನ ಪ್ರದರ್ಶಿಸಿದವರಿಗೆ ಸರ್ಕಾರ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ನಮ ಜಿಲ್ಲೆಯವರಾದ ಗಿರೀಶ್ ಪ್ಯಾರಾಒಲಿಂಪಿಕ್ಸ್ನಲ್ಲಿ ವಿಜೇತರಾಗುವ ಮೂಲಕ ದೇಶಕ್ಕೆ ಕೀರ್ತಿ ತಂದಿದ್ದಾರೆ
ಇವರು ನಿಮಗೆ ಸ್ಫೂರ್ತಿಯಾಗಲಿ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ ಮಾತನಾಡಿ, ಕ್ರೀಡೆಗಳಲ್ಲಿ ಸಮಯ ಪ್ರಜ್ಞೆ ಬಹು ಮುಖ್ಯವಾಗಿದ್ದು, ಗೆಲುವಿಗೆ ಹೋರಾಟ ಸಹಜ ಸೋತರೆ ನಿರಾಶರಾಗದೆ, ಸಂತೋಷದಿಂದ ಸ್ವೀಕರಿಸಬೇಕು ಎಂದರಲ್ಲದೆ ತೀರ್ಪುಗಾರರು ನೀಡುವ ತೀರ್ಪಿಗೆ ಬದ್ಧರಾಗುವಂತೆ ತಿಳಿಸಿದರು.
ಗ್ರಾಮೀಣ ಜನತೆ ತಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಲು ಪೈಕಾ ಕ್ರೀಡಾ ಕೂಟ ಉತ್ತಮ ಅವಕಾಶ ಕಲ್ಪಿಸಿದೆ. ಇದರ ಸದುಪಯೋಗ ಪಡೆದುಕೊಂಡು ರಾಜ್ಯ, ರಾಷ್ಟ್ರ ಮಟ್ಟಗಳಲ್ಲಿ ಭಾಗವಹಿಸಿ ಜಿಲ್ಲೆಗೆ ಕೀರ್ತಿ ತರುವಂತೆ ಶುಭ ಕೋರಿದರು.
ನಗರಸಭೆ ನೂತನ ಅಧ್ಯಕ್ಷೆ ಶ್ರೀವಿದ್ಯಾ ಅಧ್ಯಕ್ಷತೆ ವಹಿಸಿದ್ದು, ಕ್ರೀಡಾ ಪಟುಗಳಿಗೆ ಶುಭ ಹಾರೈಸಿದರು. ಜಿಲ್ಲಾಧಿಕಾರಿ ವಿ.ಅನ್ಬುಕುಮಾರ್, ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಉಪೇಂದ್ರ ಪ್ರತಾಪ್ಸಿಂಗ್ ಇದ್ದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಶಿವಾನಂದ ಸ್ವಾಗತಿಸಿದರು. ರವೀಶ್ ವಂದಿಸಿದರು. ಆರ್.ಕೆ.ಸ್ವರೂಪ್ ನಿರೂಪಿಸಿದರು.