ನಿಸ್ವಾರ್ಥ ಭಾವನೆ ಬೆಳೆಸಿಕೊಳ್ಳಲು ಸಲಹೆ
ಹಾಸನ: ಯುದ್ಧದಲ್ಲಿ ಗಾಯಗೊಂಡವರು, ಸಾವು ನೋವಿಲ್ಲದ ಸೈನಿಕರನ್ನು ಉಳಿಸುವ ಕಾರಣದಿಂದ ರೆಡ್ ಕ್ರಾಸ್ ಸಂಸ್ಥೆಯನ್ನು 1860ರಲ್ಲಿ ಸರ್ ಹೆನ್ರಿ ಡ್ಯೂನಾಂಟ್ ಸ್ಥಾಪಿಸಿದರು. ಇಂತಹ ಸಂಸ್ಥೆಯನ್ನು ಕಾಲೇಜು ಗಳಲ್ಲಿಯೂ ಸ್ಥಾಪಿಸುತ್ತಿರುವುದು ಶ್ಲಾಘನೀಯ ಎಂದು ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಛೇರ್ಮನ್ ಎಚ್.ಪಿ.ಮೋಹನ್ ತಿಳಿಸಿದರು.
ನಗರದ ಎನ್‌ಡಿಆರ್‌ಕೆ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್ ಘಟಕ, ಹಾಸನಾಂಬ ಲಯನ್ಸ್ ಕ್ಲಬ್ ಆಶ್ರಯದಲ್ಲಿ ಏರ್ಪಡಿಸಿದ್ದ ಯುವ ರೆಡ್‌ಕ್ರಾಸ್ ಘಟಕ ಹಾಗೂ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲ ದಾನಕ್ಕಿಂತಲೂ ರಕ್ತದಾನ ಬಹಳ ಶ್ರೇಷ್ಠ. ಆದ್ದರಿಂದ ರಕ್ತದಾನ ಮಾಡಿ ಜೀವ ಉಳಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಕಾಲೇಜು ಪ್ರಾಂಶುಪಾಲ ಪ್ರೊ. ಕೆ.ಶಾಮ್‌ಭಟ್ ಅಧ್ಯಕ್ಷತೆ ವಹಿಸಿದ್ದು, ರೆಡ್‌ಕ್ರಾಸ್ ಸಂಸ್ಥೆಯು ರಾಷ್ಟ್ರೀಯ ಏಕತೆ ಹಾಗೂ ವಿಶ್ವ ಸ್ನೇಹತ್ವ ಭಾವನೆಯನ್ನು ಮೂಡಿಸುತ್ತವೆ. ವಿದ್ಯಾರ್ಥಿಗಳು ನೊಂದವರಿಗೆ ಸೇವೆ ಸಲ್ಲಿಸುವ ನಿಸ್ವಾರ್ಥ ಭಾವನೆಯನ್ನು ಬೆಳೆಸಿಕೊಳ್ಳಬೇಕೆಂದು ತಿಳಿಸಿದರು. ರೆಡ್‌ಕ್ರಾಸ್ ಕಾರ್ಯದರ್ಶಿ ಅನುಗನಾಳ್ ಕೃಷ್ಣಮೂರ್ತಿ, ಕೆ.ಪಿ.ವಿಜಯಕುಮಾರ್, ಡಾ. ಪುರುಷೋತ್ತಮ, ಯು.ಜೆ ಮಲ್ಲಿಕಾರ್ಜುನ್, ಸುರೇಶ್ ಗುರೂಜಿ , ಎಚ್.ಎಚ್. ದೇವರಾಜ್, ಎಚ್.ಡಿ. ಕುಮಾರ್ ಇತರರು ಇದ್ದರು. ಎಚ್.ಎಸ್.ಪರಮೇಶ್ವರಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಎಚ್.ಕೆ. ಜಯರಾಮ್ ಸ್ವಾಗತಿಸಿದರು. ಕೆ.ಸಿ.ನವೀನ್ ವಂದಿಸಿದರು.ಶಿಬಿರದಲ್ಲಿ ಸುಮಾರು 50 ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಕ್ತದಾನ ಮಾಡಿದರು.