ಪ್ರೌಢಶಾಲಾ ಶಿಕ್ಷಕರ ಇಂಗ್ಲಿಷ್ ಕಾರ್ಯಾಗಾರ ಉದ್ಘಾಟನೆ
ಹೊಳೆನರಸೀಪುರ: ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿ ವ್ಯಾಕರಣವನ್ನು ಸರಿಯಾಗಿ ಅರ್ಥ ಮಾಡಿಸುವಲ್ಲಿ ಇಂದಿನ ಶಿಕ್ಷಕರಲ್ಲಿ ಹೊಣೆಗಾರಿಕೆಯ ಕೊರತೆ ಎದ್ದು ಕಾಣುತ್ತಿದೆ. ಪರಿಣಾಮದಿಂದಾಗಿ ಉನ್ನತ ಶಿಕ್ಷಣಕ್ಕೆ ಬಂದ ಬಹುತೇಕ ವಿದ್ಯಾರ್ಥಿಗಳು ಆಂಗ್ಲ ಭಾಷೆಯಲ್ಲಿ ಹೆಚ್ಚಿನ ಅಂಕ ಗಳಿಸುವಲ್ಲಿ ಹಿನ್ನಡೆ ಅನುಭವಿಸುವಂತಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಯೋಗೇಶ್ ತಿಳಿಸಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರೌಢಶಾಲಾ ಶಿಕ್ಷಕರಿಗಾಗಿ ಆಯೋಜಿಸಿದ್ದ ಒಂದು ದಿನದ ಇಂಗ್ಲಿಷ್ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ ಬಹುತೇಕ ಮಕ್ಕಳು ಇಂಗ್ಲಿಷ್ ಹೊರತು ಪಡಿಸಿ ಇನ್ನುಳಿದ ಎಲ್ಲಾ ವಿಷಯಗಳಲ್ಲೂ ಉತ್ತಮ ಅಂಕ ಗಳಿಸುವಲ್ಲಿ ಯಶ ಕಂಡಿದ್ದರೂ, ಮೂಲಭೂತವಾಗಿ ಮಕ್ಕಳಿಗೆ ಭಾಷೆ ವ್ಯಾಕರಣದಲ್ಲಿನ ನ್ಯೂನತೆಯಿಂದ ಪಟ್ಟಣದ ಮಕ್ಕಳಂತೆ ಹೆಚ್ಚಿನ ಅಂಕಗಳನ್ನು ಗಳಿಸಲು ಸಾಧ್ಯವಾಗುತ್ತಿಲ್ಲ ಎಂಬ ಕೊರಗು ಇದೆ. ಇದನ್ನು ನಿವಾರಿಸಬೇಕಾದ ಶಿಕ್ಷಕರು ವಿದ್ಯಾರ್ಥಿಗಳ ಕಲಿಕೆ ವೇಳೆ ಚೆನ್ನಾಗಿ ವ್ಯಾಕರಣ ಕಲಿಸಬೇಕಾಗಿದೆ ಎಂದು ಕಿವಿಮಾತು ಹೇಳಿದರು.
ಸಂಪನ್ಮೂಲ ವ್ಯಕ್ತಿ ಹಾಸನದ ಕೇಂದ್ರೀಯ ವಿದ್ಯಾಲಯದ ನಾಗೇಶ್ ಮಾತನಾಡಿ ಉನ್ನತ ಶಿಕ್ಷಣದ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಲು ಆಂಗ್ಲ ಭಾಷೆ ಪ್ರಭುತ್ವದ ಅವಶ್ಯಕತೆ ಇದೆ ಎಂದು ನುಡಿದರು. ಇತಿಹಾಸ ವಿಭಾಗದ ಮುಖ್ಯಸ್ಥ ಹಾಗೂ ಪ್ರಾಂಶುಪಾಲ ಪ್ರೊ.ಎಂ.ಬಿ.ಇರ್ಷಾದ್ ಅಧ್ಯಕ್ಷತೆ ವಹಿಸಿದ್ದರು. ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ನಯನತಾರಾಮಣಿ, ಪ್ರಾಧ್ಯಾಪಕಿ ಪಿ.ಆರ್.ಶಾಂತ, ಕನ್ನಡ ವಿಭಾಗದ ಮುಖ್ಯಸ್ಥ ಡಾ.ಬಿ.ಸಿ.ಮಲ್ಲೇಶ್ ಇದ್ದರು.