ವರ್ಷದೊಳಗೆ ಮಹಿಳಾ ಕಾಲೇಜು ಹಾಸ್ಟೆಲ್ ಆರಂಭ: ರುದ್ರೇಶಗೌಡ
ಜಾವಗಲ್: ವರ್ಷಾಂತ್ಯದೊಳಗೆ ಪಟ್ಟಣದಲ್ಲಿ ಕಾಲೇಜು ವಿದ್ಯಾರ್ಥಿನಿಯರ ಹಾಸ್ಟೆಲ್ ಪ್ರಾರಂಭಿಸುವುದಾಗಿ ಶಾಸಕ ವೈ.ಎನ್.ರುದ್ರೇಶಗೌಡ ಭರವಸೆ ನೀಡಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪಠ್ಯೇತರ ಚಟುವಟಿಕೆಗಳ ಸಾಂಸ್ಕೃತಿಕ, ಎನ್ಎಸ್ಎಸ್, ಸ್ಕೌಟ್ಸ್ ಗೈಡ್ಸ್, ಯುವ ರೆಡ್ ಕ್ರಾಸ್, ಕ್ರೀಡಾ ಚಟುವಟಿಕೆ ಕಾರ್ಯಕ್ರಮ ಉದ್ಘಾಟಸಿ ಮಾತನಾಡಿದರು. ಕಾಲೇಜಿಗೆ 75 ಲಕ್ಷ ರು. ವೆಚ್ಚದಲ್ಲಿ 3 ಹೆಚ್ಚುವರಿ ಕೊಠಡಿಗಳು ಮತ್ತು 5 ಲಕ್ಷ ರು ವೆಚ್ಚದ ಶೌಚಾಲಯ ಕಾಮಗಾರಿ ಮಂಜೂರು ಮಾಡಿಸಿದ್ದು, ಶೀಘ್ರವೇ ಕಾಮಗಾರಿ ಪ್ರಾರಂಭಿಸುವುದಾಗಿ ತಿಳಿಸಿದರು. ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಜಾವಗಲ್ ಶ್ರೀನಾಥ್ಕ್ರೀಡಾಂಗಣದ ಟ್ರಾಕ್ ನಿರ್ಮಾಣಕ್ಕೆ 5 ಲಕ್ಷ ರು. ಅನುದಾನ ನೀಡಿರುವುದಾಗಿ ತಿಳಿಸಿದರು. 2012-13 ಸಾಲಿನಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.ಖ್ಯಾತ ನಾಟಕಕಾರ ಬೇಲೂರು ಕೃಷ್ಣಮೂರ್ತಿ ಮಾತನಾಡಿ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸಕ್ಕೆ ಪಠ್ಯೇತರ ಚಟುವಟಿಕೆಗಳು ಪೂರಕವೆಂದರು.ತಾಪಂ ಸದಸ್ಯೆ ಲಕ್ಷ್ಮೀರವಿಶಂಕರ್, ಗ್ರಾಪಂ ಅಧ್ಯಕ್ಷೆ ಕವಿತಾ ಮಂಜುನಾಥ್, ಸಿಡಿಸಿ ಸದಸ್ಯ ಜೆ.ಆರ್.ವಸಂತಕುಮಾರ್, ಜಿ.ಎಂ.ಚಂದ್ರಶೇಖರ್, ಜಾತಿಸತ್ಯನಾರಾಯಣ, ಶಂಕರಲಿಂಗೇಗೌಡ, ಶಿವಕುಮಾರ್, ಸತೀಶ್, ಶಿವಶಂಕರ್ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಬಾಷಾ ಮಾತನಾಡಿದರು. ಬಂದೂರು ಗ್ರಾಪಂ ಅಧ್ಯಕ್ಷ ಕರಿಯಪ್ಪ, ಗ್ರಾಪಂ ಮಾಜಿ ಸದಸ್ಯ ಎಂ.ಬಿ ಕಾಳಪ್ಪ ಇತರರಿದ್ದರು.