ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಸಲು ಡಿವೈಎಫ್‌ಐ ಆಗ್ರಹ
ಕ.ಪ್ರ.ವಾರ್ತೆ , ಹಾಸನ , ಸೆ. 27
ಜಿಲ್ಲಾ ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಶೀಘ್ರವೇ ಈಡೇರಿಸುವಂತೆ ಡಿವೈಎಫ್‌ಐ ಒತ್ತಾಯಿಸಿದೆ.
ಜಿಲ್ಲಾಧಿಕಾರಿ ಮೂಲಕ ಉನ್ನತ ಶಿಕ್ಷಣ ಸಚಿವರಿಗೆ ನೀಡಿರುವ ಮನವಿ ಪತ್ರದಲ್ಲಿ ತಿಳಿಸಿರುವ ಡಿವೈಎಫ್‌ಐ ಕಾರ್ಯಕರ್ತರು, 362 ಸರ್ಕಾರಿ ಪದವಿ ಕಾಲೇಜುಗಳಲ್ಲಿ 10,600ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಅತಿಥಿ ಉಪನ್ಯಾಸಕರಾಗಿ, ಲಕ್ಷಾಂತರ ಬಡ ಪದವಿ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ದುಡಿಯುತ್ತಿದ್ದಾರೆ. 25-30 ವರ್ಷ ದೀರ್ಘಕಾಲ ವಿದ್ಯಾಭ್ಯಾಸ ಮಾಡಿ ಉನ್ನತ ಅಧ್ಯಯನ ಮಾಡಿರುವ ಈ ಅತಿಥಿ ಉಪನ್ಯಾಸಕರನ್ನು ವರ್ಷಕ್ಕೊಮ್ಮೆ ಅತ್ಯಂತ ಕಡಿಮೆ ವೇತನ ಪಡೆಯುವಂತಹ ಹೀನಾಯ ಮಟ್ಟಕ್ಕೆ ತಳ್ಳಿರುವುದು ನಾಗರಿಕ ಸಮಾಜದಲ್ಲಿ ತಲೆತಗ್ಗಿಸುವಂತಹ ವಿಚಾರವಾಗಿದೆ ಎಂದು ಡಿವೈಎಫ್‌ಐ ಜಿಲ್ಲಾಧ್ಯಕ್ಷ ಗಿರೀಶ್ ತಿಳಿಸಿದ್ದಾರೆ.
ವರ್ಷಕ್ಕೊಮ್ಮೆ ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ಮಾರ್ಪಾಡು ಮಾಡಿಕೊಂಡು ಬರುತ್ತಿರುವುದು ಕೊಡ ಅತ್ಯಂತ ಅಮಾನವೀಯವೂ ಆಗಿದೆ. ಈ ರೀತಿಯಲ್ಲಿ ಮಾರ್ಪಾಡುನಿಂದ ಲಕ್ಷಾಂತರ ಪದವಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ್ದ ಅತಿಥಿ ಉಪನ್ಯಾಸಕರಿಗೇನೇ ಭವಿಷ್ಯವಿಲ್ಲದಂತಾಗಿದೆ. ಇದರಿಂದ ಹತಾಶರಾಗಿ 4 ಜನ ಅತಿಥಿ ಉಪನ್ಯಾಸಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಇಂತಹ ಗಂಭೀರ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಹಲವಾರು ಬಾರಿ ಪ್ರತಿಭಟನೆ, ಮನವಿ ಪತ್ರಗಳನ್ನು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ ಏನೂ ಫಲ ಕಾಣಲಿಲ್ಲ. ಹಿಂದಿನ ಬಿಜೆಪಿ ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷಿಸಿತ್ತು. ಜತೆಗೆ ಸುಳ್ಳು ಭರವಸೆ ನೀಡಿ ಅತಿಥಿ ಉಪನ್ಯಾಸಕರಿಗೆ ವಂಚನೆ ಎಸಗಿತ್ತು. ಈಗ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಅತಿಥಿ ಉಪನ್ಯಾಸಕರ ಸಮಸ್ಯೆಗಳಿಗೆ ಸ್ಪಂದಿಸಿ ತಕ್ಷಣವೇ ಬೇಡಿಕೆಗಳನ್ನು ಈಡೇರಿಸಬೇಕೆಂದು ಮುಖಂಡ ಶಾವಲ್ ಹಮೀದ್, ರಾಘವೇಂದ್ರ, ರವಿ ಕೆಲವತ್ತಿ, ಪೃಥ್ವಿ ಮನವಿ ಮಾಡಿದ್ದಾರೆ.
ಬೇಡಿಕೆಗಳು
- ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಕಾಯಂ ಗೊಳಿಸಬೇಕು
- ಯುಜಿಸಿ ನಿಯಮದಂತೆ ತಿಂಗಳಿಗೆ 25 ಸಾವಿರ ವೇತನ ನಿಗದಿಗೊಳಿಸಬೇಕು.
- ತಿಂಗಳ ಮೊದಲ ವಾರದಲ್ಲೇ ವೇತನ ಬಿಡುಗಡೆಗೊಳಿಸಬೇಕು
- ವರ್ಷದ 12 ತಿಂಗಳೂ ವೇತನ ನೀಡಬೇಕು
- ಉಪನ್ಯಾಸಕರ ನೇಮಕಾತಿಯಲ್ಲಿ ಅತಿಥಿ ಉಪನ್ಯಾಸಕರಿಗೆ ಆದ್ಯತೆ ನೀಡಿ, ಕನಿಷ್ಠ 5 ವರ್ಷ ಸೇವಾನುಭವ ಆಧರಿಸಿ ವರ್ಷಕ್ಕೆ 5 ರಂತೆ ಕೃಪಾಂಕ ನೀಡಬೇಕು
- ಖಾಲಿ ಇರುವ 6 ಸಾವಿರ ಉಪನ್ಯಾಸಕ, 3 ಸಾವಿರ ಬೋಧಕೇತರ ಹುದ್ದೆಗಳು ಹಾಗೂ ಕಾಲೇಜು ಶಿಕ್ಷಣ ಇಲಾಖೆಯ ಖಾಲಿ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು