ಜೀತದಾಳುಗಳಂತೆ ನೋಡದಿರಿ
ಕ.ಪ್ರ.ವಾರ್ತೆ , ಹಾಸನ , ಸೆ. 27
ಸರಿಯಾಗಿ ವೇತನ ನೀಡುವುದು ಸೇರಿದಂತೆ ನಾನಾ ಬೇಡಿಕೆಗಳನ್ನು ಕೂಡಲೇ ಈಡೇರಿಸುವಂತೆ ನಗರಸಭೆ ಗುತ್ತಿಗೆ ಪೌರಕಾರ್ಮಿಕರು ಶುಕ್ರವಾರ ಆಗ್ರಹಿಸಿದರು.
ಕಳೆದ ಎರಡು ತಿಂಗಳಿನಿಂದ ವೇತನ ನೀಡದ ಕಾರಣ ಪೌರ ಕಾರ್ಮಿಕರು ಕುಟುಂಬ ನಿರ್ವಹಣೆ ಮಾಡಲು ಕಷ್ಟವಾಗುತ್ತಿದೆ. ನಗರಸಭೆ ಅಧಿಕಾರಿಗಳು ಪೌರ ಕಾರ್ಮಿಕರನ್ನು ಜೀತದಾಳುಗಳಂತೆ ನೋಡುತ್ತಿದ್ದು, ಯಾವುದೇ ಸಮಸ್ಯೆಗಳನ್ನು ಹೇಳಿಕೊಂಡರೂ ನಗರಸಭೆ ಅಧಿಕಾರಿಗಳು ಸರಿಯಾಗಿ ಉತ್ತರಿಸದೆ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.
ಇತ್ತೀಚಿಗೆ ನಡೆದ ಪೌರಕಾರ್ಮಿಕರ ದಿನಾಚರಣೆಯಂದು ಸಹ ಕಾರ್ಮಿಕರು ಕೆಲ ಸಮಯ ಕರ್ತವ್ಯ ನಿರ್ವಹಿಸಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯವ್ಯಕ್ತಿಗಳು ಕೇವಲ ಭಾಷಣ ಮಾಡಿದರು ಅಷ್ಟೆ. ಪೌರಕಾರ್ಮಿಕರ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಅವಕಾಶ ನೀಡಲಿಲ್ಲ ಎಂದ ಅವರು, ಗುತ್ತಿಗೆ ಪೌರಕಾರ್ಮಿಕರಿಗೆ ಯಾವುದೆ ಸವಲತ್ತುಗಳನ್ನು ನೀಡದೆ ವಂಚಿಸಲಾಗಿದೆ ಎಂದು ದೂರಿದರು.
ನಗರದ ಕಸವನ್ನು ಒಂದೆಡೆ ಸಂಗ್ರಹಿಸಿ ನಂತರ ಆ ಕಸವನ್ನು ವಿಂಗಡಿಸಲು ಪೌರ ಕಾರ್ಮಿಕರನ್ನು ಬಳಸಿಕೊಳ್ಳಲಾಗುತ್ತಿದ್ದು, ಕೆಲಸ ನಿರ್ವಹಿಸುವಾಗ ಕೈಗೆ ಕವಚ, ಕಾಲಿಗೆ ಶೂ, ಮಾಸ್ಕ್ ನೀಡದೆ ಇರುವುದರಿಂದ ಕರ್ತವ್ಯಕ್ಕೆ ಅಡಚಣೆ ಉಂಟಾಗುತ್ತಿದೆ. ನಗರದಲ್ಲಿ ಜನಸಂಖ್ಯೆ ಹೆಚ್ಚಿದಂತೆ ಕಸದ ರಾಶಿ ಹಾಗೂ ಸ್ವಚ್ಚತೆಯ ಕೆಲಸ ಕೂಡ ಹೆಚ್ಚಾಗುತ್ತಿದ್ದು, ಹೆಚ್ಚು ಪೌರ ಕಾರ್ಮಿಕರನ್ನು ನೇಮಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.
ವೇತನ ನೀಡುವ ಭರವಸೆ: ಸ್ಥಳಕ್ಕಾಗಮಿಸಿದ ಅಧ್ಯಕ್ಷೆ ಹಾಗೂ ನಗರಸಭೆ ಆಯುಕ್ತ ನಾಗಭೂಷಣ್ ಅವರು ಅ.2ರಂದು ಗುತ್ತಿಗೆ ಪೌರಕಾರ್ಮಿಕರಿಗೆ ವೇತನ ನೀಡವುದಾಗಿ ಭರವಸೆ ನೀಡಿದ ಅವರ, ಕೆಲಸ ನಿರ್ವಹಿಸುವಾಗ ಕಾರ್ಮಿಕರು ಅನುಕೂಲಕ್ಕಾಗಿ ಕೈ ಕವಚ, ಶೂ, ಮಾಸ್ಕ್‌ನ್ನು ಶೀಘ್ರದಲ್ಲಿಯೇ ನೀಡುವುದಾಗಿ ಹೇಳಿದರು.
ಅಧ್ಯಕ್ಷೆ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪೌರ ಕಾರ್ಮಿಕರು ವಾಪಸ್ ಕರ್ತವ್ಯಕ್ಕೆ ಹಾಜರಾದರು. ನಿಗದಿತ ಸಮಯದಲ್ಲಿ ಬೇಡಿಕೆ ಈಡೇರದಿದ್ದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು. ನಗರಸಭೆ ಉಪಾಧ್ಯಕ್ಷ ಇರ್ಶಾದ್‌ಪಾಷ, ಸದಸ್ಯ ರಮೇಶ್‌ಬಾಬು, ವಿಜಯಕುಮಾರ್, ಆರೋಗ್ಯಾಧಿಕಾರಿ ಕೃಷ್ಣಮೂರ್ತಿ, ಸಿಐಟಿಯು ಪ್ರಧಾನ ಕಾರ್ಯದರ್ಶಿ ಧರ್ಮೇಶ್ ಇದ್ದರು.