ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ದಿನಗೂಲಿ ಕಾರ್ಮಿಕರಿಗೆ ಸಕಾಲಕ್ಕೆ ವೇತನ ಪಾವತಿಸಿ

Vishwanath S
Updated On : 28 Sept 2013, 12:21 pm

ಕ.ಪ್ರ.ವಾರ್ತೆ ,  ಹಾಸನ ,  ಸೆ. 27
ಜಿಲ್ಲೆಯಲ್ಲಿ ನಾನಾ ಇಲಾಖೆಗಳಲ್ಲಿ ಹಾಗೂ ನಗರಸಭೆ, ಪುರಸಭೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ದಿನಗೂಲಿ ನೌಕರರಿಗೆ ಸರ್ಕಾರ ನಿಗದಿಪಡಿಸಿರುವ ವೇತನವನ್ನು ಅವರ ಖಾತೆಗೆ ನಿಗದಿತ ದಿನಾಂಕದೊಳಗೆ ಜಮಾ ಮಾಡುವಂತೆ ಜಿಲ್ಲಾಧಿಕಾರಿ ವಿ.ಅನ್ಬುಕುಮಾರ್ ವಿವಿಧ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಮಿಕ ಇಲಾಖೆ ನಾನಾ ಇಲಾಖೆಗಳ ಅಧಿಕಾರಿಗಳು ಹಾಗೂ ಕಾರ್ಮಿಕ ಮುಖಂಡರನ್ನು ಒಳಗೊಂಡ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಾರ್ಮಿಕರ ವೇತನ ಹಾಗೂ ವಿವಿಧ ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಶೀಘ್ರ ಬಗೆಹರಿಸುವುದಾಗಿ ತಿಳಿಸಿದರು.
ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಕಚೇರಿಯ ದಿನಗೂಲಿ ಸಿಬ್ಬಂದಿ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಇಲಾಖೆ ಹಾಸ್ಟೆಲ್‌ಗಳಲ್ಲಿನ ದಿನಗೂಲಿ ಕಾರ್ಮಿಕರು, ಆರೋಗ್ಯ ಇಲಾಖೆಯಲ್ಲಿ, ಆಸ್ಪತ್ರೆಗಳಲ್ಲಿನ ಸ್ವಚ್ಛತಾ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತರ ಹಾಗೂ ಶಿಕ್ಷಣ ಇಲಾಖಾ ವ್ಯಾಪ್ತಿಯಲ್ಲಿ ಅಕ್ಷರ ದಾಸೋಹ ಕಾರ್ಯಕರ್ತರ ಸಮಸ್ಯೆಗಳ ಕುರಿತು ಸಭೆಯಲ್ಲಿ ಚರ್ಚಿಸಿದರು.
ಪ್ರತಿ ತಿಂಗಳು 5 ರೊಳಗೆ ವೇತನ:  ಪ್ರತಿ ತಿಂಗಳ 5ನೇ ದಿನಾಂಕದೊಳಗಾಗಿ ವೇತನವನ್ನು ಅವರ ಖಾತೆಗೆ ಜಮಾ ಮಾಡುವುದರೊಂದಿಗೆ ನಿಯಮಾನುಸಾರವಾಗಿ ಪಾವತಿಸಲಾಗಿರುವ ಪಿ.ಎಫ್.ಹಣವನ್ನು ಕೂಡ ಸಂಬಂಧಪಟ್ಟವರ ಖಾತೆಗೆ ಜಮಾ ಮಾಡುವಂತೆ ಹಾಗೂ ಅಗತ್ಯ ದಾಖಲೆಗಳನ್ನು ಕ್ರಮಬದ್ಧವಾಗಿ ಕಚೇರಿಯಲ್ಲಿ ಇಟ್ಟುಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿ, ಇದರಲ್ಲಿ ಆಗುವ ಯಾವುದೇ ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಿಗಳೇ ಎದುರಿಸ ಬೇಕಾಗುತ್ತದೆ ಎಂದು ತಿಳಿಸಿದರು.
ಪಿ.ಎಫ್. ಪಾವತಿ ಬಗ್ಗೆ ತಿಂಗಳಿಗೊಮ್ಮೆ ಪರಿಶೀಲನೆ:  ಜಿಲ್ಲೆಯಲ್ಲಿ ನಾನಾ ಇಲಾಖೆಗಳಲ್ಲಿನ ದಿನಗೂಲಿ ನೌಕರರು ಹಾಗೂ ಗುತ್ತಿಗೆ ಆಧಾರದ ಮೇಲೆ ಕೆಲಸ ಮಡುವ ಕಾರ್ಮಿಕರ ಸಮಸ್ಯೆಗಳನ್ನು ಬಗೆ ಹರಿಸುವ ನಿಟ್ಟಿನಲ್ಲಿ ಕಾರ್ಮಿಕ ಇಲಾಖಾ ಅಧಿಕಾರಿಗಳು ಎಲ್ಲಾ ಇಲಾಖೆ ಹಾಗೂ ಪುರಸಭೆಗಳಿಗೆ ತೆರಳಿ ಕಾರ್ಮಿಕರ ವೇತನ ಭತ್ಯೆಯನ್ನು ಪಿ.ಎಫ್. ಪಾವತಿಯ ಬಗ್ಗೆ ತಿಂಗಳಿಗೊಮ್ಮೆ ಪರಿಶೀಲನೆ ನಡೆಸುವಂತೆ ಕಾರ್ಮಿಕ ಇಲಾಖಾ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಯಾವುದೇ ಇಲಾಖೆಯ ದಿನಗೂಲಿ ನೌಕರರ ನಿಖರ ಮಾಹಿತಿಯನ್ನು ಕಾರ್ಮಿಕ ಸಂಘಟನೆಗಳು ನೀಡಿದಲ್ಲಿ ಅದನ್ನು ಸೂಕ್ತ ರೀತಿಯಲ್ಲಿ ಬಗೆಹರಿಸಲು ಪ್ರಯತ್ನಿಸುವುದಾಗಿ ಹಾಗೂ ಕಾರ್ಮಿಕರಿಗೆ ವಿವಿಧ ಸೌಲಭ್ಯಗಳನ್ನು ಒದಗಿಸಲು ಲೋಕಾಯುಕ್ತ ಅಧಿಕಾರಿಗಳ ರೀತ್ಯ ಕಾರ್ಯ ನಿರ್ವಹಿಸುವಂತೆ ಇಲಾಖೆ ಅಧಿಕಾರಿಗಳಿಗೆ ಹೇಳಿದರು.
ನಾನಾ ಇಲಾಖೆಗಳಲ್ಲಿ ಕಾರ್ಮಿಕ ಕಾಯ್ದೆಯಂತೆ ಕನಿಷ್ಠ ಕೂಲಿಗೆ ಸಂಬಂಧಪಟ್ಟ ದಿನಗೂಲಿ ನೌಕರರಿಗೆ ಪಾವತಿಯಾಗದಿರುವ ಬಗ್ಗೆ ಕಾರ್ಮಿಕ ಸಂಘಟನೆ ಮುಖಾಂತರ ಆರೋಪಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ ಸಂಬಂಧಪಟ್ಟ ಇಲಾಖಾಧಿಕಾರಿಗಳು ಸೂಕ್ತ ಗಮನ ಹರಿಸಿ ಕಾನೂನು ರೀತ್ಯ ಕ್ರಮ ಜರುಗಿಸುವಂತೆ ಹಾಗೂ ಜಿಲ್ಲೆಯಲ್ಲಿನ ನಾನಾ ತೋಟಗಳಲ್ಲಿ ಹಾಗೂ ಕಾಫಿ ಕ್ಯೂರಿಂಗ್‌ಗಳಲ್ಲಿನ ಕಾರ್ಮಿಕರ ಸಮಸ್ಯೆಗಳನ್ನು ಶೀಘ್ರ ಬಗೆಹರಿಸುವಂತೆ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
ಕುಂದು ಕೊರತೆ ಸಭೆಗೆ ದಾಖಲೆ ತನ್ನಿ:  ಜಿಲ್ಲೆಯಲ್ಲಿನ ಯಾವುದೇ ಇಲಾಖೆಗಳಲ್ಲಿನ ದಿನಗೂಲಿ ನೌಕರರ ಹಾಗೂ ಕೂಲಿ ಕಾರ್ಮಿಕರ ಸಮಸ್ಯೆಗಳನ್ನು 3 ತಿಂಗಳೊಳಗಾಗಿ ಬಗೆಹರಿಸಿ ವರದಿ ಸಲ್ಲಿಸುವಂತೆ ಹಾಗೂ ಸಮಸ್ಯೆಗಳು ಕ್ಲಿಷ್ಟವಾಗಿದ್ದಲ್ಲಿ ಕುಂದುಕೊರತೆ ಸಭೆಗೆ ದಾಖಲೆಗಳನ್ನು ತರುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು, ಕಾರ್ಮಿಕ ಸಂಘಟನೆಗಳು ಹೆಚ್ಚಿನ ಆಸಕ್ತಿ ವಹಿಸಿ, ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಿ ಕುಂದು ಕೊರತೆ ನಿವಾರಿಸಲು ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು.
ಸಭೆಯಲ್ಲಿ ಉಪಕಾರ್ಮಿಕ ಆಯುಕ್ತ ಬಾಲಕೃಷ್ಣ, ಸಹಾಯಕ ಕಾರ್ಮಿಕ ಆಯುಕ್ತರಾದ ಶ್ರೀವಲ್ಲಿ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಪುರುಷೋತ್ತಮ್, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಚಿದಾನಂದ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶಾಮಲಾದೇವಿ, ನಗರಸಭೆ ಆಯುಕ್ತ ನಾಗಭೂಷಣ್, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ತಾಪಂ ಕಾರ್ಯ ನಿರ್ವಾಹಕ ಅಧಿಕಾರಿಗಳು, ತಾಲೂಕುಗಳ ಆಸ್ಪತ್ರೆ ಆಡಳಿತಾಧಿಕಾರಿಗಳು, ಕಾರ್ಮಿಕ ಸಂಘಟನೆಯ ಮುಖಂಡ ಧಮೇಶ ಹಾಗೂ ನಾನಾ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿ ಅಗತ್ಯ ಮಾಹಿತಿ ನೀಡಿದರು. ಇಲಾಖೆಯ ಅಧಿಕಾರಿ ಪ್ರಹ್ಲಾದ್ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement