ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಪುರಸಭೆ ಕಾಮಗಾರಿ: ಗುಣಮಟ್ಟ ಪ್ರಶ್ನಿಸುವಂತಿಲ್ಲ

Vishwanath S
Updated On : 28 Sept 2013, 12:19 pm

ಹೊಳೆನರಸೀಪುರ: ಎಲ್ಲೋ ಸಿಮೆಂಟ್ ಜಾಸ್ತಿ ಹಾಕ್ಬುಟ್ಟು.. ಕ್ಯೂರಿಂಗ್ ಸರಿಯಾಗಿ ಮಾಡಿಲ್ವೇನೋ ಅದಕ್ಕೇ ಮುನ್ಸಿಪಾಲಿಟಿಯಿಂದ ಮಾಡ್ಸಿರೋ ಕೆಲ್ಸಗಳೆಲ್ಲಾ ಬೇಗ ಹಾಳಾಗ್ತಿರ್ಬೇಕು.
  ಇದು ಇಲ್ಲಿನ ನಾಗರಿಕರು ಕಂಡ ಕಂಡಲ್ಲಿ ಆಡಿಕೊಳ್ಳುವಷ್ಟರ ಮಟ್ಟಿಗೆ ಸ್ಥಳೀಯ ಪುರಸಭೆಯಿಂದ ಕೈಗೊಂಡ ಕಾಮಗಾರಿಗಳಿಗೆ ಖರ್ಚು ಮಾಡಿದ ಹಣವೆಲ್ಲಾ ಹೊಳೆಯಲ್ಲಿ ಹುಣಸೆ ಹಣ್ಣು ಕಿವುಚಿದಂತಾಗತೊಡಗಿದೆ ಎಂಬ ಅಸಮಾಧಾನ ವ್ಯಕ್ತವಾಗಿದೆ.
 ಹಿಂದಿನ ವರ್ಷಗಳಲ್ಲಿ ಇಲ್ಲಿನ ಪುರಸಭೆಗೆ ನಿರಂತರವಾಗಿ ಹರಿದುಬರುತ್ತಿರುವ ಕೋಟಿಗಟ್ಟಳೆ ಅನುದಾನ ಹಾಗೂ ಸಾರ್ವಜನಿಕರು ನೀಡುವ ತೆರಿಗೆ ಹಣಕ್ಕೆ ಪ್ರತಿಯಾಗಿ ಮೂಲಭೂತ ಸೌಕರ್ಯಗಳನ್ನು ಪ್ರಾಮಾಣಿಕವಾಗಿ ಹಾಗೂ ಗುಣಮಟ್ಟದಿಂದ ಕೂಡಿದ ಕಾಮಗಾರಿಗಳನ್ನು ನಡೆಸುವುದು ಪುರಸಭೆಯ ಕರ್ತವ್ಯವಾಗಿದೆ.
 ಆದರೆ ಇಲ್ಲಿನ ಪುರಸಭೆಯಲ್ಲಿ ಎಗ್ಗಿಲ್ಲದಷ್ಟು ಕಾಮಗಾರಿಗಳು ನಡೆಯುತ್ತಿದ್ದರೂ, ಕಾಮಗಾರಿಗಳ ಗುಣಮಟ್ಟವನ್ನು ಯಾರೂ ಪ್ರಶ್ನಿಸುವಂತಿಲ್ಲ ಎಂಬಂತಹ ಸ್ಥಿತಿ ನಿರ್ಮಾಣವಾಗಿರುವ ಕಾರಣದಿಂದಾಗಿಯೇ ಮಾಡಿರುವ ಕಾಮಗಾರಿಗಳು ಕೆಲವೇ ತಿಂಗಳು ಹಾಗೂ ವರ್ಷ ತುಂಬುವ ಮೊದಲೇ ಹಾಳಾಗುತ್ತಿವೆ.
 ಇದಕ್ಕೆ ಉದಾಹರಣೆಗಳು ಸಾಕಷ್ಟಿವೆ. ಪಟ್ಟಣದ ಕೋಟೆಯಲ್ಲಿನ 8ನೇ ವಾರ್ಡ್‌ನ  ಶ್ರೀ ಶಾರದಾಂಬ ಶಂಕರಾಚಾರ್ಯರ ಮಠದ ಪಕ್ಕದಲ್ಲಿ ವರ್ಷದ ಹಿಂದಷ್ಟೇ ಮಾಡಿದ ಸಿಮೆಂಟ್ ರಸ್ತೆಯನ್ನು ಈಗ ಹುಡುಕಬೇಕಾಗಿದೆ. ಮುಖ್ಯ ರಸ್ತೆಯ ಬದಿಯಲ್ಲಿನ ಚರಂಡಿಯ ಮೇಲೆ ನಿರ್ಮಿಸಲಾಗಿರುವ ಮೋರಿಯು ಮುರಿದು ಮೂರು ಹೋಳಾಗಿದೆ.
ಇನ್ನು ಇದರೊಟ್ಟಿಗೆ ಮಾಡಿದ ಬಾಕ್ಸ್ ಮಾದರಿಯ ಚರಂಡಿ ಈಗಾಗಲೇ ಬಾಯಿ ತೆರೆದು ನಿಂತಿದೆ. ಈ ಕಳಪೆ ಕಾಮಗಾರಿಗಳಿಂದಾಗಿ ಕೋಟೆ ಮುಖ್ಯ ರಸ್ತೆಯಿಂದ ಶಂಕರಮಠದ ಪಕ್ಕದಲ್ಲಿನ ಗಲ್ಲಿಗೆ ಆಟೋದಲ್ಲಿ ಕೂಡ ಹೋಗಲಾಗದ ಪರಿಸ್ಥಿತಿ ಇದ್ದು, ಜನರು ತಿರುಗಾಡಿದರೂ ಮುರಿದು ಬೀಳತೊಡಗಿದೆ ಎಂದರೆ ಈ ಕಾಮಗಾರಿ ಇನ್ನೆಷ್ಟು ಗುಣಮಟ್ಟದಿಂದ ಕೂಡಿದೆ ಎಂಬುದರ ಅರಿವಾಗುತ್ತದೆ.
 ಇದು ಕೇವಲ ಒಂದು ಕಾಮಗಾರಿಯ ಗೋಳಲ್ಲ, ಒಂದೇ ರಸ್ತೆಗೆ ವರ್ಷದಲ್ಲಿ ಎರಡೆರಡು ಬಾರಿ ಕಾಂಕ್ರೀಟ್‌ಹಾಕಿರುವ ಉದಾಹರಣೆಗಳಿವೆ. ಇನ್ನು ಚರಂಡಿಗಳ ಸ್ಥಿತಿಯಂತೂ ದೇವರಿಗೇ ಪ್ರೀತಿಯಾಗಬೇಕಿದ್ದು, ಈ ಚರಂಡಿಗಳಲ್ಲಿ ನೀರು ಹರಿದಿರುವುದಕ್ಕಿಂತಲೂ ನಿಂತಿರುವುದೇ ಹೆಚ್ಚು.
 ಇದ್ದ ಕಲ್ಲಿನ ಚಪ್ಪಡಿಗಳ ಚರಂಡಿಯನ್ನು ಕಿತ್ತುಕೊಂಡು ಹೊತ್ತೊಯ್ದು ಬಾಕ್ಸ್ ಮಾದರಿಯ ಚರಂಡಿ ನಿರ್ಮಿಸಲು ಮುಂದಾದ ಪುರಸಭೆಗೆ ಲಾಭವಾಯಿತೋ ಇಲ್ಲವೋ ಗೊತ್ತಿಲ್ಲ. ಆದರೆ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರುಗಳ ಜೇಬು ಮಾತ್ರ ತುಂಬಿಹೋಯಿತು. ಪುರಸಭೆ ಮಾಡಿಸಿರುವ ಯಾವೊಂದು ಸಿಮೆಂಟ್ ರಸ್ತೆಯೂ ಗುಣಮಟ್ಟದಿಂದ ಕೂಡಿಲ್ಲ ಎಂಬುದಕ್ಕೆ ಪಟ್ಟಣದಾದ್ಯಂತ ಈಗಾಗಲೇ ಕಿತ್ತುಬರುತ್ತಿರುವ ರಸ್ತೆಗಳನ್ನು ಕಂಡರೇ ತಿಳಿಯುತ್ತದೆ. ಪಟ್ಟಣದಾದ್ಯಂತ ನೂರಾರು ಕಾಮಗಾರಿಗಳು ನಡೆದರೂ ಪುರಸಭೆಯ ಜವಾಬ್ದಾರಿಯುತ ಇಂಜಿನಿಯರ್ ಸದರಿ ಕಾಮಗಾರಿಗಳನ್ನು ನೋಡಿ ಬಿಲ್ ಮಾಡಿದರೋ.. ಇಲ್ಲ ಕಣ್ಣು ಮುಚ್ಚಿ ಬಿಲ್ ಮಾಡಿದರೋ ತಿಳಿಯದು. ಆದರೆ ಯಾವೊಂದು ಕಾಮಗಾರಿಗಳೂ ವರ್ಷಗಟ್ಟಳೆ ಬಾಳಿಕೆ ಬಂದಿರುವ ಉದಾಹರಣೆ ಇಲ್ಲವಾಗಿದೆ.
 ಇಲ್ಲಿನ ಪುರಸಭೆಗೆ ನೂತನವಾಗಿ ಸದಸ್ಯರ ಆಯ್ಕೆಯಾಗಿದ್ದು, ಇನ್ನೂ ಮೊದಲ ಸಭೆ ಕೂಡ ನಡೆದಿಲ್ಲವಾದ ಕಾರಣದಿಂದಾಗಿ ಯಾವ ಸದಸ್ಯರಲ್ಲಿ ತಮ್ಮ ವಾರ್ಡ್ ಬಗ್ಗೆ ಎಷ್ಟು ಕಾಳಜಿ ವ್ಯಕ್ತವಾಗುತ್ತದೆ ಎಂಬುದನ್ನು ಇನ್ನಷ್ಟೇ ಕಾದು ನೋಡಬೇಕಿದೆ.
  ಆದರೆ ಇಡೀ ಪಟ್ಟಣದಲ್ಲಿ ತಾವು ಶ್ರಮ ವಹಿಸಿ ತಂದು ಹಾಕಿದ ಕೋಟಿಗಟ್ಟಳೆ ಅನುದಾನ ಹೇಗೆ ಬಳಕೆಯಾಗಿದೆ ಮತ್ತು ಬಳಕೆಯಾಗುತ್ತಿದೆ ಎಂಬುದನ್ನು ಶಾಸಕ ಎಚ್.ಡಿ.ರೇವಣ್ಣ ಅವರೇ ಖುದ್ದಾಗಿ ಒಮ್ಮೆ ಸ್ಥಳಪರಿಶೀಲನೆ ನಡೆಸಿದರೆ ತಿಳಿಯುತ್ತದೆ.
 ಆದರೆ ದಶಕಗಳಿಂದಲೂ ಪುರಸಭೆಯ ಕಾಮಗಾರಿಯನ್ನು ನಿರ್ವಹಿಸುತ್ತಿರುವವರು ಜೆಡಿಎಸ್‌ನ ಹಿಂಬಾಲಕ ಗುತ್ತಿಗೆದಾರರೇ ಹೊರತಾಗಿ ಬೇರಾರು ಇಲ್ಲದ ಕಾರಣದಿಂದಾಗಿಯೋ ಏನೋ, ಇಲ್ಲಿನ ಶಾಸಕರು ತಮ್ಮದೇ ಪಕ್ಷದ ಹಿಂಬಾಲಕ ಗುತ್ತಿಗೆದಾರರ ಮೇಲೆ ಇಟ್ಟಿರುವ ಅಮಿತವಾದ ಪ್ರೀತಿಯಿಂದಾಗಿಯೇ ಈ ಗುತ್ತಿಗೆದಾರರು ಮಾಡಿದ್ದೇ ಕಾಮಗಾರಿ... ಇಲ್ಲಿನ ಇಂಜಿನೀಯರುಗಳು ಬರೆದದ್ದೇ ಬಿಲ್ಲು ಎಂಬಂತಾಗಿ, ಎಲ್ಲವನ್ನೂ ನೋಡುತ್ತಿರುವ ಇಲ್ಲಿನ ನಿವಾಸಿಗಳು ಮಾತ್ರ ಏನೊಂದೂ ಮಾತನಾಡದ ಕಲ್ಲಂತಾಗಿದ್ದಾರೆ.

-ಎಚ್.ಡಿ.ಗುರುಪ್ರಸಾದ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement