ಪ್ರತಿ ವರ್ಷ ಲಕ್ಷ ಕೋಟಿಗೂ ಅಧಿಕ ಕೃಷಿ ಉತ್ಪನ್ನ ಹಾನಿ
ಕ.ಪ್ರ.ವಾರ್ತೆ , ಅರಸೀಕೆರೆ , ಸೆ. 27
ಪ್ರಸ್ತುತ ಸನ್ನಿವೇಶದಲ್ಲಿ ಪ್ರತಿ ವರ್ಷ 1 ಲಕ್ಷ ಕೋಟಿಗೂ ಅಧಿಕ ಕೃಷಿ ಉತ್ಪನ್ನಗಳು ಯಾರ ಬಳಕೆಗೂ ಬಾರದಂತೆ ಹಾನಿಗೀಡಾಗುತ್ತಿರುವುದು ದುರದೃಷ್ಟಕರ ಸಂಗತಿ ಎಂದು ಭಾರತೀಯ ಉದ್ಯಮಶೀಲತಾ ಅಭಿವೃದ್ಧಿ ಸಂಸ್ಥೆ ಸಂಚಾಲಕ ಡಾ.ಎಂ.ಪಿ.ವರ್ಷ ಆತಂಕ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಸಿರುಕ್ರಾಂತಿಯ ಪರಿಣಾಮವಾಗಿ ನೀರಾವರಿ, ಮೂಲಭೂತ ಸೌಲಭ್ಯಗಳ ಅಭಿವೃದ್ಧಿಯೊಂದಿಗೆ ರೈತರಿಗೆ ಹೆಚ್ಚಿನ ಇಳುವರಿ ನೀಡುವ ದ್ವಿದಳ ಧಾನ್ಯಗಳು, ಹೈಬ್ರಿಡ್ ಧಾನ್ಯಗಳು, ಕೃತಕ ಗೊಬ್ಬರಗಳು, ಕ್ರಿಮಿನಾಶಕಗಳ ಬಳಕೆಯ ಬಗ್ಗೆ ಜಾಗೃತಿ ಉಂಟಾಗಿದೆ. ಇದರ ಪರಿಣಾಮ ದೇಶದ ಕೃಷಿ ಉತ್ಪನ್ನಗಳು ನಿರೀಕ್ಷೆಗೂ ಮೀರಿ ಹೆಚ್ಚಳಗೊಂಡಿವೆ ಎಂದು ಹೇಳಿದರು.
ಇದರ ಪರಿಣಾಮವಾಗಿ 105 ಮಿಲಿಯನ್ ಟನ್‌ಗಳಷ್ಟು ಹಾಲು, 150 ಮಿಲಿಯನ್ ಟನ್‌ಗಳಷ್ಟು ಹಣ್ಣು-ತರಕಾರಿ, 485 ಮಿಲಿಯನ್ ಟನ್‌ಗಳಷ್ಟು ಜಾನುವಾರು, 7 ಮಿಲಿಯನ್ ಟನ್‌ಗಳಷ್ಟು ಮೀನು, 489 ಮಿಲಿಯನ್‌ಗಳಷ್ಟು ಕೋಳಿ, ಹಾಗೂ 45,200 ಮಿಲಿಯನ್‌ಗಳಷ್ಟು ಮೊಟ್ಟೆ ಉತ್ಪಾದನೆ ಮಾಡಲಾಗುತ್ತಿದೆ. ಆದರೆ ಕೇವಲ 2.2ರಷ್ಟು ಮಾತ್ರ ಸಂಸ್ಕರಣಾ ಘಟಕಗಳಿರುವುದರಿಂದ ಕೃಷಿ ಉತ್ಪನ್ನಗಳನ್ನು ಸಂರಕ್ಷಿಸಲು ಸಾಧ್ಯವಾಗುತ್ತಿಲ್ಲ ಎಂದು ವಿವರಿಸಿದರು.
ವಿವಿಧ ಕ್ಷೇತ್ರಗಳಲ್ಲಿ ಕೌಶಲ್ಯ ಹೊಂದಿರುವ ಮಾನವ ಸಂಪನ್ಮೂಲದ ಅಭಿವೃದ್ಧಿ ಕೃಷಿ ಉತ್ಪನ್ನಗಳ ನಾಶವನ್ನು ತಡೆಯುವಿಕೆ, ರೈತರ ಆದಾಯದಲ್ಲಿ ಹೆಚ್ಚಳ, ಉದ್ದಿಮೆಗಳನ್ನು ಗುರುತಿಸುವಿಕೆ, ಉದ್ದಿಮೆಯ ನಿರ್ವಹಣೆ, ತಾಂತ್ರಿಕ ಮಾಹಿತಿಗಳು, ಮಾರುಕಟ್ಟೆ ನಿರ್ವಹಣೆ, ಯಶಸ್ವಿ ಉದ್ದಿಮೆಗಳಿಗೆ ಭೇಟಿ ಹಾಗೂ ಇನ್ನಿತರೆ ಅಂಶಗಳನ್ನು ಗಮನದಲ್ಲಿಟ್ಟು ಈ ಶಿಬಿರ ಆಯೋಜಿಸಲಾಗಿದೆ.
ಶಿಬಿರದಲ್ಲಿ ಮೈಸೂರು, ಬೆಂಗಳೂರು ಸೇರಿದಂತೆ ನಾನಾ ಆಹಾರ ಉತ್ಪನ್ನ ಮತ್ತು ಸಂಸ್ಕರಣಾ ಘಟಕಗಳ ನುರಿತ ಅಧ್ಯಾಪಕರು ಹಾಗೂ ತಜ್ಞರನ್ನು ಒಳಗೊಂಡ ತಂಡ ಶಿಬಿರದಲ್ಲಿ ಪಾಲ್ಗೊಂಡು ಉಪನ್ಯಾಸ, ಪ್ರಾಯೋಗಿಕ ಪದ್ಧತಿಗಳ ಮೂಲಕ ವಿವರ ನೀಡುವರು. ಈ ಹಿನ್ನೆಲೆಯಲ್ಲಿ ಆಹಾರ ಸಂಸ್ಕರಣಾ ಉದ್ದಿಮೆಗಳಿಗೆ ಸಂಬಂಧಿಸಿದಂತೆ ಅರಸೀಕೆರೆಯಲ್ಲಿ ಅಕ್ಟೋಬರ್ 7ರಿಂದ 16ರವರೆಗೆ ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಕ್ರಮ ಆಯೋಜಿಸಲಾಗಿದೆ.
ದ್ವಿತೀಯ ಪಿ.ಯು.ಸಿ. ತೇರ್ಗಡೆಗೊಂಡ, ನಾನಾ ವೃತ್ತಿಪರ ಕೋರ್ಸ್‌ಗಳಲ್ಲಿ ತರಬೇತಿ ಹೊಂದಿದ ವಿದ್ಯಾರ್ಥ್ಥಿಗಳು, ರೈತರ ಮಕ್ಕಳು ಭಾಗವಹಿಸಬಹುದು. ಯಾವುದೇ ಶುಲ್ಕ ಇಲ್ಲ. ಆಸಕ್ತರು 9448988746 ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದರು.
ಕೆನರಾ ಬ್ಯಾಂಕ್ ಶಾಖಾ ವ್ಯವಸ್ಥಾಪಕ ಪಿ.ಮೋಹನ್ ಮಾತನಾಡಿ ಶಿಬಿರದಲ್ಲಿ ಭಾಗವಹಿಸಿ ತರಬೇತಿ ಪಡೆದ ಯುವಕ-ಯುವತಿಯರಿಗೆ ಸಾಲ ಸೌಲಭ್ಯ ಒದಗಿಸಲಾಗುವುದು. ಆಸಕ್ತರು ಇದರ ಪ್ರಯೋಜನ ಪಡೆದುಕೊಳ್ಳಬೇಕು. ಆ ಮೂಲಕ ನಿರುದ್ಯೋಗಿಗಳು ಸ್ವಯಂ ಉದ್ಯೋಗ ಆರಂಭಿಸಿ ಆರ್ಥಿಕವಾಗಿ ಪ್ರಗತಿ ಸಾಧಿಸಬೇಕೆಂದು ಮನವಿ ಮಾಡಿದರು. ಭಾರತೀಯ ಉದ್ಯಮಶೀಲತಾ ಅಭಿವೃದ್ಧಿ ಸಂಸ್ಥೆಯ ರಾಷ್ಟ್ರೀಯ ತರಬೇತುದಾರ ಕಾಳೇಗೌಡ ಪಾಲ್ಗೊಂಡಿದ್ದರು.