ಪ್ರವಾಸಿ ತಾಣಗಳಲ್ಲಿ ಸೌಕರ್ಯ ಕೊರತೆ
ಕ.ಪ್ರ.ವಾರ್ತೆ , ಹಾಸನ , ಸೆ. 27
ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಮೂಲಭೂತ ಸೌಕರ್ಯದ ಕೊರತೆ ಎದ್ದು ಕಾಣುತ್ತಿದೆ ಎಂದು ಆಲೂರು-ಸಕಲೇಶಪುರ ಕ್ಷೇತ್ರ ಶಾಸಕ ಎಚ್.ಕೆ. ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಪ್ರವಾಸೋದ್ಯಮದಲ್ಲಿ ತೊಡಗಿರುವ ನಾನಾ ಸಂಘ-ಸಂಸ್ಥೆಗಳು ಹಾಗೂ ಎವಿಕೆ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ನಡೆದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ವಿದೇಶಗಳಲ್ಲಿನ ಪ್ರವಾಸೋದ್ಯಮ ಸ್ಥಳಗಳಲ್ಲಿ ಮೂಲಭೂತ ಸೌಕರ್ಯವಿದ್ದು ಆ ತಾಣಗಳು ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತವೆ. ಆದರೆ ನಮ್ಮ ದೇಶದಲ್ಲಿನ ಪ್ರವಾಸಿ ತಾಣಗಳಲ್ಲಿ ಮೂಲಭೂತ ಸೌಕರ್ಯಗಳೇ ಕಾಣದಾಗಿದೆ ಎಂದು ಹೇಳಿದರು.
ಪ್ರವಾಸೋದ್ಯಮದಲ್ಲಿ ದೇಶದ ಇತಿಹಾಸ ಪ್ರಪಂಚಕ್ಕೆ ಮಾದರಿಯಾಗಿದೆ. ವಿಶ್ವದ ಇತಿಹಾಸ ತಿಳಿಯಬೇಕಾದರೆ ಭಾರತವನ್ನು ಅರಿಯಬೇಕು ಎಂದ ಅವರು, ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ಇನ್ನೂ ಹೆಚ್ಚಿನ ಉತ್ತೇಜನ ನೀಡಬೇಕು. ಬೇಲೂರು, ಹಳೇಬೀಡು, ಸಕಲೇಶಪುರ, ಹಂಪೆ ಸೇರಿದಂತೆ ಸಾಕಷ್ಟು ಪ್ರವಾಸಿ ತಾಣಗಳಿದ್ದು, ಇಲ್ಲೆಲ್ಲಾ ಮೂಲಭೂತ ಸೌಕರ್ಯಗಳನ್ನು ಸರ್ಕಾರ ಹಾಗೂ ಪ್ರವಾಸೋದ್ಯಮ ಇಲಾಖೆ ಕೈಗೊಳ್ಳಬೇಕು ಎಂದು ಅಭಿಪ್ರಾಯ ಪಟ್ಟರು.
ರಜಾ ದಿನಗಳಲ್ಲಿ ಜನರು ಮನರಂಜನೆಗಾಗಿ ಪ್ರವಾಸ ಹೋಗುವ ಉದ್ದೇಶ ಹೊಂದಿರುತ್ತಾರೆ. ಪ್ರವಾಸೋದ್ಯಮ ಬೆಳೆದರೆ ಯುವ ಪೀಳಿಗೆಗೆ ಹೊಸ ಹೊಸ ಉದ್ಯೋಗ ಸೃಷ್ಟಿಸಬಹುದಾಗಿದೆ. ಪ್ರವಾಸೋದ್ಯಮ ಅಭಿವೃದ್ಧಿಗೊಳಿಸುವುದರ ಮೂಲಕ ಅವಿದ್ಯಾವಂತರು ಹಾಗೂ ವಿದ್ಯಾವಂತರಿಗೆ ಉದ್ಯೋಗ ಸೃಷ್ಟಿಮಾಡಬಹುದೆಂದರು.
ಸಕಲೇಶಪುರದಲ್ಲಿರುವ ಮಂಜರಾಬಾದ್ ಕೋಟೆ ತೀರಾ ದುಸ್ಥಿತಿಯಲ್ಲಿದ್ದು, ಅದಕ್ಕೆ ಮೂಲಭೂತ ಸೌಕರ್ಯ ಕಲ್ಪಿಸಿದಲ್ಲಿ ಅದೊಂದು ಸುಂದರ ಪ್ರವಾಸಿ ತಾಣವಾಗಲಿದೆ ಎಂದ ಅವರು, ಪ್ರವಾಸೋದ್ಯಮ ದಿನಾಚರಣೆ ಅರ್ಥಪೂರ್ಣವಾಗ ಬೇಕಾದರೆ ಪ್ರವಾಸಿ ಸ್ಥಳಗಳನ್ನು ಅಭಿವೃದ್ಧಿಗೊಳಿಸಲು ಇಲಾಖೆ ಮೊದಲು ಮುಂದಾಗಬೇಕು ಎಂದು ತಿಳಿಸಿದರು.
ಪ್ರವಾಸೋದ್ಯಮ ಅಧಿಕಾರಿ ಎಂ.ಆರ್.ಪ್ರಕಾಶ್ ಮಾತನಾಡಿ, ಹಂಪೆಯು ಪ್ರಪಂಚದ ಪ್ರೇಕ್ಷಣಿಕ ಸ್ಥಳಗಳಲ್ಲಿ 2ನೇ ಸ್ಥಾನದಲ್ಲಿದೆ. ಮೈಸೂರು ಅರಮನೆಯು ಪ್ರಪಂಚದಲ್ಲಿಯೇ ವಿಶೇಷವಾಗಿದ್ದು, ತಾಜ್ಮಹಲ್ಗಿಂತಲೂ ಹೆಚ್ಚು ಪ್ರವಾಸಿಗರು ಮೈಸೂರು ಅರಮನೆಗೆ ಭೇಟಿ ನೀಡುತ್ತಾರೆ ಎಂದ ಅವರು, ಪ್ರವಾಸಿ ತಾಣಗಳಲ್ಲಿ ಇಲಾಖೆಯು ಸಾಕಷ್ಟು ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕಾರ್ಯ ನಡೆಸಲಾಗುತ್ತಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಅನ್ಬುಕುಮಾರ್, ಎವಿಕೆ ಕಾಲೇಜು ಪ್ರಾಂಶುಪಾಲೆ ಶೈಲಜಾ, ಉಪ ಪ್ರಾಂಶುಪಾಲ ಜಯಂತ್, ಟಿ. ಯಶೋಧ ಇತರರು ಇದ್ದರು.