ಮತ್ತೊಂದು ಕಲಬೆರಕೆ ವ್ಯವಹಾರ ಪತ್ತೆ
ಕ.ಪ್ರ.ವಾರ್ತೆ , ಹಾಸನ , ಸೆ. 27
ತಾಲೂಕಿನ ವೀರಾಪುರ ಗ್ರಾಮದಲ್ಲಿ ಪರಿಶುದ್ಧ ಹಾಲಿಗೆ ಉಪ್ಪು ಮತ್ತು ಸಕ್ಕರೆ ಮಿಶ್ರಿತ ನೀರನ್ನು ಕಲಬೆರಕೆ ಮಾಡಿ ಹಾಲು ಉತ್ಪಾದಕರಿಗೆ ವಂಚಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಮಾಸುವ ಮುನ್ನ ಹಾಲು ಉತ್ಪಾದಕರು ನೀಡುವ ಪರಿಶುದ್ಧ ಹಾಲಿಗೆ ಕಲಬೆರಕೆ ಮಾಡುತ್ತಿದ್ದ ಮತ್ತೊಂದು ದಂಧೆ ಜಿಲ್ಲೆಯಲ್ಲಿ ಬಯಲಾಗಿದೆ. ಚನ್ನರಾಯಪಟ್ಟಣ ತಾಲೂಕು ದೊಡ್ಡಕರಡೇವು ಗ್ರಾಮದಲ್ಲಿ ಗುಣಮಟ್ಟದ ಹಾಲನ್ನು ಕಳವು ಮಾಡಿ ಕೊರತೆ ಹಾಲಿಗೆ ಸಕ್ಕರೆ, ಉಪ್ಪುನೀರು ಮತ್ತು ಯೂರಿಯಾ ಮಿಶ್ರಣ ಮಾಡಿ ವಂಚಿಸುತ್ತಿದ್ದ ಕೃಷ್ಣ ಮತ್ತು ಮಂಜು ಎಂಬುವರನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಹಾಲನ್ನು ಕಲಬೆರಕೆ ಮಾಡುತ್ತಿದ್ದ ಬಗ್ಗೆ ಅನುಮಾನಗೊಂಡ ಸ್ಥಳೀಯರು ಲಾರಿ ಅಡ್ಡಗಟ್ಟಿ ಪರಿಶೀಲಿಸಿದ ಸಂದರ್ಭದಲ್ಲಿ ಈ ಅಕ್ರಮ ಬಯಲಾಗಿದೆ. ಈ ಸಂಬಂಧ ಇಬ್ಬರು ಆರೋಪಿಗಳನ್ನು ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸರು ವಶಕ್ಕೆ ತೆಗೆದು ಕೊಂಡಿದ್ದು, ಇನ್ನೊಬ್ಬ ಆರೋಪಿ ಕುಮಾರ್ ಎಂಬಾತ ಪರಾರಿಯಾಗಿದ್ದಾನೆ.
ಶುದ್ಧ ಹಾಲಿಗೆ ಉಪ್ಪು ನೀರು, ಯೂರಿಯಾ ಮಿಶ್ರಣ: ತಾಲೂಕಿನ ವೀರಾಪುರ ಗ್ರಾಮದ ಕಲಬೆರಕೆ ಹಾಲು ಪ್ರಕರಣ ತನಿಖೆಯಲ್ಲಿರುವಾಗಲೇ ಅಂಥದೇ ಇನ್ನೊಂದು ಜಾಲ ಇದೀಗ ಬಯಲಾಗಿದೆ. ಚನ್ನರಾಯಪಟ್ಟಣ ತಾ. ದೊಡ್ಡಕರಡೇವು ಗ್ರಾಮದ ಸುತ್ತಮುತ್ತ ಹಾಲು ಸಾಗಣೆ ಮಾಡುತ್ತಿದ್ದ ಲಾರಿಯವರು, ಉತ್ಪಾದಕರು ಕೊಡುತ್ತಿದ್ದ ಗುಣಮಟ್ಟದ ಹಾಲನ್ನು ಕಳವು ಮಾಡಿ ಅದಕ್ಕೆ ಸಕ್ಕರೆ, ಉಪ್ಪುನೀರು ಮತ್ತು ಯೂರಿಯಾ ಮಿಶ್ರಣ ಮಾಡಿ ಸರಬರಾಜು ಮಾಡುತ್ತಿದ್ದರು.
ಈ ಕಲಬೆರಕೆ ಹಾಲಿನಿಂದ ಗುಣಮಟ್ಟ ಸರಿ ಇಲ್ಲದ ಕಾರಣ ಹಾಲಿನ ದರ ಕಡಿಮೆಯಾಗಿ ಉತ್ಪಾದಕರು ಮತ್ತು ಸಹಕಾರ ಸಂಘಕ್ಕೆ ನಷ್ಟವಾಗುತ್ತಿತ್ತು. ಈ ಬಗ್ಗೆ ಅನುಮಾನಗೊಂಡ ಸ್ಥಳೀಯರು ಹಾಲಿನ ವಾಹನ ಅಡ್ಡಗಟ್ಟಿ ಪರಿಶೀಲಿಸಿದಾಗ ಇದು ಬಯಲಾಗಿದೆ.
ಸಂಘದಿಂದ ನಿತ್ಯ 40 ಕ್ಯಾನ್ ಹಾಲು ಸರಬರಾಜು: ಗುತ್ತಿಗೆ ಆಧಾರದ ಮೇಲೆ ಪ್ರತಿನಿತ್ಯ ಹಾಲು ಸಾಗಾಣಿಕೆ ಮಾಡುತ್ತಿದ್ದ ಇವರು, ಸಂಘದಿಂದ ದಿನಕ್ಕೆ 30ರಿಂದ 40 ಕ್ಯಾನ್ನಷ್ಟು ಹಾಲನ್ನು ಸಾಗಿಸುತ್ತಿದ್ದರು. ಎಂದಿನಂತೆ ಹಾಲನ್ನು ತೆಗೆದುಕೊಂಡು ಹೋಗಲು ಕೃಷ್ಣ ಮತ್ತು ಮಂಜು ದೊಡ್ಡಕರಡೇವು ಗ್ರಾಮದ ಗೋಕುಲ್ ಡೈರಿಗೆ ಬಂದಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮಸ್ಥರು ಲಾರಿಯೊಳಗೆ ನೋಡಿದಾಗ ಸುಮಾರು ಮುಕ್ಕಾಲು ಭಾಗ ತುಂಬಿದ ಕ್ಯಾನ್ನಲ್ಲಿ ಉಪ್ಪು ಮತ್ತು ಸಕ್ಕರೆ ಮಿಶ್ರಿತ ನೀರನ್ನು ಇಟ್ಟಿದ್ದು ಪತ್ತೆಯಾಗಿದೆ. ಜೊತೆಗೆ ಲಾರಿಯಲ್ಲಿ ಯೂರಿಯಾ ಸಹ ಇಟ್ಟುಕೊಂಡಿದ್ದು ಪತ್ತೆಯಾಗಿದೆ.
ಹಾಲು ಉತ್ಪಾದಕರ ಸಂಘದಿಂದ ಸಾಗಿಸುತ್ತಿದ್ದ ಹಾಲಿನ ಪ್ರತಿ ಕ್ಯಾನ್ಗಳಿಂದ ಇಂತಿಷ್ಟು ಎಂದು ಹಾಲು ಕಳವು ಮಾಡಲಾಗುತ್ತಿತ್ತು. ಹೀಗೆ ದಿನಕ್ಕೆ 3 ರಿಂದ 4 ಕ್ಯಾನ್ ಹಾಲು ಕದಿಯುತ್ತಿದ್ದರು. ಕಳವು ಮಾಡಿದ ಹಾಲನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿ ಅಕ್ರಮ ಹಣ ಸಂಪಾದಿಸುತ್ತಿದ್ದರು. ಕ್ಯಾನ್ಗಳಿಂದ ಒಳ್ಳೇ ಹಾಲು ತೆಗೆದ ಜಾಗಕ್ಕೆ ನೀರು, ಯೂರಿಯಾ ಬೆರೆಸಿ ರೈತರು, ಹಾಲು ಒಕ್ಕೂಟಕ್ಕೆ ಮೋಸ ಮಾಡುತ್ತಿದ್ದರು. ಇದನ್ನು ಈ ದಂಧೆಯಲ್ಲಿ ತೊಡಗಿದ್ದ ಹಾಲಿನ ವಾಹನ ತಿಳಿಸಿದ್ದಾನೆ.
ಹಾಲು ಉತ್ಪಾದಕರ ಸಹಕಾರ ಸಂಘ ಹಾಗೂ ಇತರೆ ಗ್ರಾಮಗಳಿಂದ ಪ್ರತಿ ದಿನ ನೂರಾರು ಲೀಟರ್ ಹಾಲನ್ನು ಒಕ್ಕೂಟಕ್ಕೆ ಸಾಗಿಸುತ್ತಿದ್ದ ಈ ಆರೋಪಿಗಳು, ತುಂಬಿದ ಹಾಲಿನ ಕ್ಯಾನ್ಗಳನ್ನು ಮಾರ್ಗಮಧ್ಯೆ ತೆಗೆದು ಶುದ್ಧ ಹಾಲನ್ನು ಕಳವು ಮಾಡುತ್ತಿದ್ದರು. ನಂತರ ಕ್ಯಾನ್ನಲ್ಲಿ ಕಡಿಮೆಯಾದ ಹಾಲಿಗೆ ಬದಲಾಗಿ ಉಪ್ಪು ಮತ್ತು ಸಕ್ಕರೆ ಮಿಶ್ರಿತ ನೀರನ್ನು ಬೆರೆಸಿ 30 ಡಿಗ್ರಿಯಷ್ಟು ಗುಣಮಟ್ಟು ಬರುವಂತೆ ಕಾಯ್ದುಕೊಂಡು, ಮತ್ತೆ ಕ್ಯಾನ್ಗಳನ್ನು ಸೀಲ್ ಮಾಡುತ್ತಿದ್ದರು ಎಂದು ಗ್ರಾಮಸ್ಥರು ದೂರಿದ್ದಾರೆ.
ಕಳೆದ 10 ದಿನಗಳ ಅಂತರದಲ್ಲಿ ಇಂಥದೇ 2 ಹಾಲಾಹಲ ಪ್ರಕರಣ ಬೆಳಕಿಗೆ ಬಂದಿರುವುದು ನಿಜಕ್ಕೂ ಆತಂಕಕ್ಕೆ ಕಾರಣವಾಗಿದೆ. ಏಕೆಂದರೆ ಈಚೆಗೆ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಕ್ಷೀರಭಾಗ್ಯ ಯೋಜನೆಯಡಿ ಶಾಲಾಮಕ್ಕಳಿಗೆ ಇಂಥ ಕಲಬೆರಕೆ ಹಾಲು ವಿತರಣೆ ಮಾಡಿದ್ರೆ, ನಂತರ ಆಗುವ ದುಷ್ಪರಿಣಾಮಕ್ಕೆ ಯಾರು ಹೊಣೆ ಅನ್ನೋದು ಎಲ್ಲರ ಪ್ರಶ್ನೆ. ಸಂಬಂಧಪಟ್ಟವರು ಇನ್ನಾದರೂ ಎಚ್ಚೆತ್ತು ದಂಧೆಗೆ ಕಡಿವಾಣ ಹಾಕಲು ಮುಂದಾಗಬೇಕಿದೆ.
ಹಲವು ದಿನಗಳಿಂದ ನಮಗೆ ಈ ಬಗ್ಗೆ ಅನುಮಾನ ಬಂದಿತ್ತು. ಆದರೆ ನಾವು ಪರಿಶೀಲಿಸಿರಲಿಲ್ಲ. ಆದರೆ ಇತ್ತೀಚೆಗೆ ಕಲಬೆರಕೆ ಹೆಚ್ಚಾಗಿದ್ದರಿಂದ ನಾವು ಲಾರಿಯನ್ನು ಪರಿಶೀಲಿಸಿದಾಗ ಕಲಬೆರಕೆ ಪದಾರ್ಥಗಳ ಸಮೇತ ಆರೋಪಿಗಳು ಸಿಕ್ಕಿ ಹಾಕಿಕೊಂಡಿದ್ದಾರೆ.
- ಉಮೇಶ್, ಸ್ಥಳೀಯ