ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಯುವ ಆಯುರ್ವೇದ ವೈದ್ಯರಿಗೆ ಕಾರ್ಯಾಗಾರ ಅವಶ್ಯ: ಡಾ.ಜಯಶ್ರೀ

Vishwanath S
Updated On : 28 Sept 2013, 12:21 pm

ಕ.ಪ್ರ.ವಾರ್ತೆ ,  ಹಾಸನ ,  ಸೆ. 27
ಆಯುರ್ವೇದ ವಿಶ್ವಮಾನ್ಯವಾಗುತ್ತಿದೆ. ಈ ವಿಜ್ಞಾನದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದ ಯುವ ವೈದ್ಯರು ಕೇವಲ ಮಹಾವಿದ್ಯಾಲಯಗಳಲ್ಲಿ ಭೋದಕರಾಗಿ ಸೇರ್ಪಡೆ ಆಗಲು ಬಯಸುತ್ತಿದ್ದಾರೆ. ಆದರೆ ಆರೋಗ್ಯ ವಲಯದಲ್ಲಿ ಅನೇಕ ಅವಕಾಶಗಳಿದ್ದು, ಅದನ್ನು ಬಳಸಿಕೊಳ್ಳುವಂತೆ ಬಿಜಾಪುರದ ಬಿ.ಎಲ್.ಡಿ ಆಯುರ್ವೇದ ಮಹಾವಿದ್ಯಾಲಯದ ನಿರ್ದೇಶಕಿ ಡಾ. ಜಯಶ್ರೀ ಅಭಿಪ್ರಾಯಪಟ್ಟರು.
ಇಲ್ಲಿನ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನಲ್ಲಿ ಉಡುಪಿ ಮತ್ತು ಹಾಸನದ ಎಸ್.ಡಿ.ಎಂ ಆಯುರ್ವೇದ ಮಹಾವಿದ್ಯಾಲಯಗಳ ದ್ರವ್ಯಗುಣ ಸ್ನಾತಕೋತ್ತರ ವಿಭಾಗಗಳಿಂದ ಆಯೋಜಿಸಿದ್ದ   ಪ್ರಾಣವಹ ಸ್ರೋತೋವಿಕಾರಗಳಲ್ಲಿ ಔಷಧ ಪ್ರಯೋಗ ಎಂಬ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಹಾಗೂ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ವೇದಿಕೆಯಲ್ಲಿ ಕೊಯಂಬತ್ತೂರಿನ ಎ.ವಿ.ಪಿ ಆಯುರ್ವೇದ ಪ್ರತಿಷ್ಠಾನದ ಸಂಶೋಧನಾಧಿಕಾರಿ ಡಾ. ಪಿ ರಾಮಮನೋಹರ್, ಶಿವಮೊಗ್ಗದ ಬಾಪೂಜಿ ಆಯುರ್ವೇದ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಎಂ. ಬಿ. ಗುರುರಾಜ್, ಸುಳ್ಯದ ಕೆ.ವಿ.ಜಿ ಆಯುರ್ವೇದ ಮಹಾವಿದ್ಯಾಲಯದ ಡಾ. ಲೀಲಾಧರ್, ಮೂಡಬಿದ್ರೆಯ ಆಳ್ವಾಸ್ ಆಯುರ್ವೇದ ಕಾಲೇಜಿನ  ಪ್ರಾಂಶುಪಾಲ ಡಾ. ವಿನಯ್‌ಚಂದ್ರ ಶೆಟ್ಟಿ ಉಪಸ್ಥಿತರಿದ್ದರು. ಉಡುಪಿಯ ಎಸ್.ಡಿ.ಎಂ ಆಯುರ್ವೇದ ಕಾಲೇಜಿನ ಡಾ. ಶ್ರೀಧರ್ ಬಾಯರಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಪ್ರಸನ್ನ ನರಸಿಂಹರಾವ್ ಮಾತನಾಡಿ, ಭಾರತದಲ್ಲಿ ಯಾವುದೇ ಆಯುರ್ವೇದ ಸ್ನಾತಕೋತ್ತರ ವಿಭಾಗದಲ್ಲಿ 2000ದಷ್ಟು ವೈದ್ಯರಿಲ್ಲ. ನೂರುಕೋಟಿಗೂ ಮೀರಿದ ಜನಸಂಖ್ಯೆಯ ದೇಶದಲ್ಲಿ ಆಯುರ್ವೇದ ಸ್ನಾತಕೋತ್ತರ ಪದವಿ ಪಡೆದ ವೈದ್ಯರ ಸಂಖ್ಯೆ ಕಡಿಮೆ ಎಂದೇ ಹೇಳಬಹುದು ಎಂದರು.
ರಾಷ್ಟ್ರಮಟ್ಟದ ಕಾರ್ಯಾಗಾರದಲ್ಲಿ ನಾನಾ ರಾಜ್ಯಗಳಿಂದ 175 ಆಯುರ್ವೇದ ಸ್ನಾತಕೋತ್ತರ ವಿಭಾಗದ ಯುವ ವೈದ್ಯ ವಿದ್ಯಾರ್ಥಿಗಳು ಹಾಗೂ ವೈದ್ಯರು ಪಾಲ್ಗೊಂಡಿದ್ದರು. ಶೃತಿಶರ್ಮಾ ವೃಂದದರು ಧನ್ವಂತರಿ ಸ್ತೋತ್ರ ಪ್ರಾರ್ಥಿಸಿದರು. ಶೈಕ್ಷಣಿಕ ವಿಭಾಗದ ಡೀನ್ ಡಾ. ಮಲ್ಲಿಕಾ ಸ್ವಾಗತಿಸಿದರು ಡಾ. ಹರಿಣಿ ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿ ಡಾ. ಪ್ರಕಾಶ್ ಹೆಗಡೆ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement