ಅಕ್ರಮ ಮರಳು ದಂಧೆಗೆ ಜೆಡಿಎಸ್ ಕುಮ್ಮಕ್ಕು
ಕನ್ನಡ್ರಪಭ ವಾರ್ತೆ , ಹಾಸನ , ಸೆ. 29
ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಮರಳು ಹಾಗೂ ಕಲ್ಲು ಸಾಗಾಣಿಕೆಗೆ ಜೆಡಿಎಸ್ ನಾಯಕರು ಬೆಂಬಲ ನೀಡುತ್ತಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಶಿವರಾಂ ಆರೋಪಿಸಿದರು. ನಗರದ ಕಾಂಗ್ರೆಸ್ ಭವನದಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲಾಡಳಿತದಿಂದ ಶನಿವಾರ ಅಕ್ರಮವಾಗಿ ಮರಳು ಮತ್ತು ಕಲ್ಲು ಸಾಗಾಣಿಕೆ ಮಾಡುತ್ತಿದ್ದ ಮರಳು ಲಾರಿ ಮತ್ತು ಕಲ್ಲು ತುಂಬಿದ ಟ್ರ್ಯಾಕ್ಟರ್‌ಗಳನ್ನು ಜೆಡಿಎಸ್ ನಾಯಕ ಎಚ್.ಡಿ.ರೇವಣ್ಣ ತಹಸೀಲ್ದಾರ್ ಕಚೇರಿಗೆ ತೆರಳಿ ಲಾರಿ ಮತ್ತು ಟ್ರ್ಯಾಕ್ಟರ್‌ನ್ನು ಬಿಡಿಸಿದ್ದಾರೆ ಎಂದು ಶಿವರಾಂ ದೂರಿದರು.
ಜಿಲ್ಲಾಡಳಿತದಿಂದ ದಂಡ ವಿಧಿಸಿದ್ದರೂ ಬಹು ಬೇಗನೇ ವಾಹನಗಳನ್ನು ಬಿಡಿಸಿರುವುದರಿಂದ ಮತ್ತೆ ಅವರು ಅಕ್ರಮವನ್ನು ನಡೆಸಲು ಸಹಕಾರಿಯಾಗುತ್ತದೆ. ಅಂತವರಿಗೆ ಜೆಡಿಎಸ್ ನಾಯಕರು ಬೆಂಬಲ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಜೆಡಿಎಸ್ ಮುಖಂಡರು ಜಿಲ್ಲೆಯಲ್ಲಿ ನಾನಾ ಅಭಿವೃದ್ಧಿಕಾರ್ಯ ಮಾಡಿದ್ದೇವೆ ಅನ್ನುತ್ತಾರೆ. ಪಶುವೈದ್ಯಕೀಯ ಕಾಲೇಜಿಗೆ ಮಾನ್ಯತೆ ನೀಡುವಂತೆ ಪತ್ರ ಬರೆದಿರುವುದಾಗಿ ಹೇಳುತ್ತಾರೆ. ಆದರೆ ಯಾವುದೇ ಕೆಲಸ ಪೂರ್ಣಗೊಳಿಸುವುದಿಲ್ಲ. ಸಚಿವ ಜಯಚಂದ್ರ ಅವರು ಕೇಂದ್ರ ಸಚಿವ ಶರದ್‌ಪವಾರ್‌ರನ್ನು ಮೂರ್ನಾಲ್ಕು ಬಾರಿ ಭೇಟಿಯಾಗಿ ಪಶುವೈದ್ಯಕೀಯ ಕಾಲೇಜಿಗೆ ಮಾನ್ಯತೆ ನೀಡುವಂತೆ ಒತ್ತಡ ಹಾಕಿದ್ದರು. ಆದರೆ ಜಿಲ್ಲೆಯ ಸಂಸದರು ಕೇವಲ ಪತ್ರವನ್ನು ಮಾತ್ರ ಬರೆದಿದ್ದಾರೆ ಅಷ್ಟೇ ಎಂದರು.
ತೆಂಗು ಬೆಳೆ ನಾಶಕ್ಕೆ ಸಂಬಂಧಿಸಿದಂತೆ ಒಂದೊಂದು ರೀತಿಯಲ್ಲಿ ಹೇಳಿಕೆ ನೀಡುತ್ತಿದ್ದಾರೆ ಎಂದ ಅವರು, ಈ ಜಿಲ್ಲೆಗೆ ಜೆಡಿಎಸ್ ನಾಯಕರ ಕೂಡುಗೆ ಏನು ಅಂತ ತಿಳಿಯದಾಗಿದೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ಕಾರ್ಮಿಕ ಘಟಕ ಉದ್ಘಾಟನೆ: ಕಾಂಗ್ರೆಸ್ ಕಾರ್ಮಿಕರ ಪಕ್ಷ ಅನ್ನೋ ನಿಟ್ಟಿನಲ್ಲಿ ಕಾಂಗ್ರೆಸ್ ಕಾರ್ಮಿಕ ಘಟಕ ಉದ್ಘಾಟನಾ ಸಮಾರಂಭ ಭಾನುವಾರ ನಡೆಯಿತು. ಕಾರ್ಮಿಕ ಘಟಕ ಬಹುದಿನಗಳ ಹಿಂದಿನಿಂದ ಅಸ್ತಿತ್ವದಲ್ಲಿ ಇತ್ತು. ಆದರೆ ಕಾಂಗ್ರೆಸ್ ವತಿಯಿಂದ ಕಾರ್ಮಿಕರಿಗೆ ನೀಡುತ್ತಿರುವ ಸೌಕರ್ಯಗಳು ಹಾಗೂ ಯೋಜನೆಗಳ ಬಗ್ಗೆ ಕಾರ್ಮಿಕರಿಗೆ ಮಾಹಿತಿ ನೀಡುವುದು ಹಾಗೂ ಕಾರ್ಮಿಕರ ನೋಂದಣಿ ಮಾಡಿಸುವಂತಹ ಉದ್ದೇಶವಾಗಿದೆ ನಗರದ ಕಾಂಗ್ರೆಸ್ ಭವನದಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಶಿವರಾಂ ಹೇಳಿದರು.
ಕಾರ್ಮಿಕರಿಗೆ ಅಪಘಾತ ಸಂಭವಿಸಿದಾಗ 2 ಲಕ್ಷರು.ಚಿಕಿತ್ಸಾವೆಚ್ಚ, ಮನೆ ಕಟ್ಟಲು ಶೇ.50ರಷ್ಟು ನೆರವು, ಇತರೆ ಚಿಕಿತ್ಸೆಗೆ ಸಂಬಂಧಿಸಿದಂತೆ ಸೌಲಭ್ಯಗಳನ್ನು ಕಾರ್ಮಿಕರಿಗೆ ಒದಗಿಸುವಂತಹ ನಾನಾ ಯೋಜನೆಗಳ ಬಗ್ಗೆ ಕಾರ್ಮಿಕರಿಗೆ ಮಾಹಿತಿ ನೀಡುವಂತಹದಾಗಿದೆ. ಈಗಾಗಲೇ 12 ಸಾವಿರ ಮಂದಿ ಕಾರ್ಮಿಕರು ನೋಂದಣಿಯಾಗಿದ್ದು, ಇವತ್ತು 500 ಮಂದಿ ಕಾರ್ಮಿಕರು ನೋಂದಣಿ ಮಾಡಿಸಿದ್ದಾರೆ ಎಂದು ತಿಳಿಸಿದರು.
ರಾಹುಲ್ ಗಾಂಧೀ ತೀರ್ಮಾನಕ್ಕೆ ನಮ್ಮ ಬೆಂಬಲ
ಇದೇ ವೇಳೆ ಕೇಂದ್ರ ಸರ್ಕಾರ ಹೊರಡಿಸಿದ ಸುಗ್ರೀವಾಜ್ಞೆ ಕುರಿತು ಮಾತನಾಡಿದ ಶಿವರಾಂ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‌ಗಾಂಧಿ ಸುಗ್ರೀವಾಜ್ಞೆ ತಿರಸ್ಕರಿಸಿ ಎಂದಿದ್ದಾರೆ. ಅದಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆ. ಕಳಂಕಿತ ಜನಪ್ರತಿನಿಧಿಗಳು ಜೈಲಿಗೆ ಹೋಗುವುದನ್ನು ಅವರು ಎತ್ತಿ ಹಿಡಿದ್ದಾರೆ. ತಪ್ಪು ಎಸಗಿದವರ ವಿರುದ್ಧ ರಾಹುಲ್ ತಿರುಗಿ ಬಿದ್ದಿದ್ದಾರೆ ಎಂದರು.
ಈ ಸುಗ್ರೀವಾಜ್ಞೆಯನ್ನು ತಿರಸ್ಕರಿಸಿದ್ದ ವಿರೋಧ ಪಕ್ಷದವರು ನಾನಾ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಆದರೆ ಯಾರೂ ಸಹ ಇದರ ವಿರುದ್ಧ ಬಲವಾಗಿ ಧ್ವನಿ ಎತ್ತಿಲ್ಲ. ಆದ್ದರಿಂದಲೇ ರಾಹುಲ್ ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ ಅನ್ನೋದು ಎಲ್ಲರಿಗೂ ತಿಳಿಯುತ್ತದೆ. ಕಳಂಕಿತ ಪ್ರತಿನಿಧಿಗಳು ಇರಬಾರದು ಅಂತ ಈ ತೀರ್ಮಾನವನ್ನು ಕೈಗೊಂಡಿದ್ದು, ಅದಕ್ಕೆ ನಮ್ಮ ಬೆಂಬಲ ಸಂಪೂರ್ಣವಾಗಿ ಇದೆ ಎಂದು ಹೇಳಿದರು.
ಕೆಪಿಸಿಸಿ ಸದಸ್ಯ ಎಚ್.ಕೆ.ಮಹೇಶ್, ಮುಖಂಡ ಸಿ.ಎಸ್.ಪುಟ್ಟೇಗೌಡ, ಎಚ್.ಕೆ.ಜವರೇಗೌಡ, ಅನುಪಮ, ಜುಲ್ಫಿಕರ್ ಅಲಿ, ಶ್ರೀಕಂಠಪ್ಪ ಹಾಗೂ ಇತರರು ಇದ್ದರು.