ಅಧಿಕಾರಿಗಳಿಲ್ಲದೆ ಸಾರ್ವಜನಿಕರಿಗೆ ತೀವ್ರ ತೊಂದರೆ: ತಾಲೂಕು ದಸಂಸ
ಕ.ಪ್ರ.ವಾರ್ತೆ,ಆಲೂರು, ಸೆ. 29
ತಾಲೂಕಿನಲ್ಲಿ ತಹಸೀಲ್ದಾರ್ ಸೇರಿ ಹಲವಾರು ಇಲಾಖೆಗಳಲ್ಲಿ ಅಧಿಕಾರಿಗಳಿಲ್ಲದೆ ಸಾರ್ವಜನಿಕರಿಗೆ ತೀವ್ರ ತೊಂದರೆಯುಂಟಾಗುತ್ತಿದ್ದು, ಇದಕ್ಕೆ ಜನ ಪ್ರತಿನಿಧಿಗಳ ಬೇಜವಾಬ್ದಾರಿಯೇ ಕಾರಣವೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲೂಕು ಘಟಕ ಸಂಚಾಲಕರು ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಚಾಲಕ ದೇವರಾಜ್ ಅವರು, ಕಳೆದ ಹಲವಾರು ತಿಂಗಳಿನಿಂದ ಇಲ್ಲಿ ತಹಸೀಲ್ದಾರ್ ಇಲ್ಲದೆ ತಾಲೂಕು ಆಡಳಿತ ನಿಷ್ಕ್ರಿಯವಾಗಿದೆ. ಈಗಾಗಲೇ ಇಲ್ಲಿಗೆ ತಹಸೀಲ್ದಾರರನ್ನು ನಿಯೋಜಿಸಿದ್ದರೂ ಅವರು ಇಲ್ಲಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ.
ಹೀಗಾಗಿ ಸರ್ವೇ, ದುರಸ್ತಿ, ಖಾತೆ ಬದಲಾವಣೆಯಂತಹ ಕೆಲಸಗಳಿಗೆ ತಡೆಯುಂಟಾಗಿದೆ. ತಾಲೂಕಿನಲ್ಲಿ ಶೇ.70 ರಷ್ಟು ದಲಿತರ ದರಕಾಸ್ತು ಜಮೀನು ಒತ್ತುವರಿಯಾಗಿದ್ದು, ಅದನ್ನು ದುರಸ್ತಿ ಮಾಡದ ಕಾರಣ ದಲಿತರು ತಮ್ಮ ಜಮೀನು ಪಡೆಯಲಾಗದೆ ಪರಿತಪಿಸುವಂತಾಗಿದೆ ಎಂದರು.
ಶೇ.50 ರಷ್ಟು ಗ್ರಾಮಗಳಲ್ಲಿ ದಲಿತರಿಗೆ ಸ್ಮಶಾನವಿಲ್ಲದೆ ಶವ ಸಂಸ್ಕಾರ ಮಾಡಲು ಪರದಾಡುವಂತಾಗಿದ್ದು, ಇದಕ್ಕೆ ಸ್ಪಷ್ಟ ಉದಾಹರಣೆಯೆಂದರೆ ಕಾರ್ಜುವಳ್ಳಿ ಗ್ರಾಮದ ದಲಿತರ ಸ್ಮಶಾನ ಕಾಫಿ ತೋಟವಾಗಿ ಮಾರ್ಪಟ್ಟಿದೆ. ಇನ್ನು ಉದ್ಯೋಗ ಖಾತ್ರಿ ಯೋಜನೆ ತಾಲೂಕಿನಲ್ಲಿ ಸಂಪೂರ್ಣ ವಿಫಲವಾಗಿದ್ದು, 15 ಗ್ರಾಪಂಗಳ ಪೈಕಿ 8 ರಲ್ಲಿ ಶೂನ್ಯ ಸಾಧನೆಯಾಗಿ ಸರ್ಕಾರದ ಅನುದಾನವೆಲ್ಲ ವಾಪಸ್ಸಾಗಿದೆ. ಉಳಿದ ಗ್ರಾಪಂಗಳಲ್ಲಿ ಬಡ ಜನರಿಗೆ ದೊರಕಬೇಕಾದ ಕೆಲಸ ಯಂತ್ರಗಳ ಪಾಲಾಗಿ ಗುತ್ತಿಗೆದಾರರು ತಮ್ಮ ಜೇಬು ತುಂಬಿಸಿಕೊಳ್ಳುತ್ತಿದ್ದಾರೆ ಎಂದು ದೂರಿದರು.
ಇದನ್ನೆಲ್ಲ ಪರಿಶೀಲಿಸಲು ಹಾಗು ಜನರಿಗೆ ಅಗತ್ಯ ಮಾಹಿತಿ ನೀಡಲು ಯಾಮೊಬ್ಬ ಅಧಿಕಾರಿ ಇಲ್ಲದಿರುವುದೇ ಕಾರಣವಾಗಿದೆ. ವಾರ್ಡ್ ಸಭೆಗಳು ಜನ ಪ್ರತಿನಿಧಿಗಳು ಹಾಗು ಅಧಿಕಾರಿಗಳಿಲ್ಲದೆ ಭಣಗುಡುತ್ತವೆ. ಪಿಡಿಒ ಗಳೆಲ್ಲರೂ ನಿರ್ಜೀವಗೊಂಡಿದ್ದಾರೆ.
ಹೀಗಾದರೆ ಗ್ರಾಮಗಳ ಅಭಿವೃದ್ಧಿ ಹೇಗೆ ಸಾಧ್ಯ ಎಂದ ಅವರು, ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಬಂದ ಸಬ್ಸಿಡಿ ಹಣ ದಲಿತರಿಗೆ ದೊರೆಯದೆ ವಾಪಸಾಗುತ್ತಿದ್ದು, ಬ್ಯಾಂಕ್ಗಳಲ್ಲಿ ವಿದ್ಯಾರ್ಥಿಗಳ ಖಾತೆ ತೆರೆಯಲು ಹಣ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ತಾಲೂಕಿನಲ್ಲಿರುವ ಎಲ್ಲಾ ಇಲಾಖೆಗಳಲ್ಲೂ ನೌಕರರ ಕೊರತೆ ಇದೆ. ಪ್ರತಿ ಗ್ರಾಮಗಳಲ್ಲೂ ಅಕ್ರಮ ಮಧ್ಯ ಮಾರಾಟ ಅವ್ಯಾಹತವಾಗಿ ನಡೆಯುತ್ತಿದೆ. ಇಲ್ಲಿದ್ದ ಅಬಕಾರಿ ಇಲಾಖೆ ಹಾಸನಕ್ಕೆ ಸ್ಥಳಾಂತರಗೊಳಿಸಿರುವುದೇ ಇದಕ್ಕೆ ಕಾರಣ,ನಾಮಕಾವಸ್ಥೆಗೆ ಕೈಗಾರಿಕ ಇಲಾಖೆಯ ಕಟ್ಟಡವಿದೆ ಈ ಅವ್ಯವಸ್ಥೆಗಳಿಗೆ ಶಾಸಕರ ನಿರ್ಲಕ್ಷ್ಯತನವೇ ಕಾರಣವೆಂದು ದೂರಿದರು.
ಆಲೂರು ತಾಲೂಕನ್ನು ಪ್ರತ್ಯೇಕ ವಿಧಾನ ಸಭಾ ಕ್ಷೇತ್ರವನ್ನಾಗಿ ಮಾಡಬೇಕೆಂದು ಆಗ್ರಹಿಸಿದರು.
ತಾಲೂಕು ದಲಿತ ಸಂಘರ್ಷ ಸಮಿತಿ ಸಂಚಾಲಕ ದೇವರಾಜ್, ಚಂದ್ರಪ್ರಸಾದ್, ಬಸವರಾಜ್, ಎನ್.ಡಿ.ರಾಜಯ್ಯ, ವಕೀಲ ಪುಟ್ಟಸ್ವಾಮಿ, ಕೆ.ಎಸ್.ರವಿ ಇನ್ನೂ ಮೊದಲಾದವರು ಇದ್ದರು.