ಕಾಲು, ಬಾಯಿ ಜ್ವರ: ರು. 3 ಕೋಟಿ ನಷ್ಟ
ಕನ್ನಡಪ್ರಭ ವಾರ್ತೆ, ಹೊಳೆನರಸೀಪುರ,ಸೆ. 29
ಜಾನುವಾರುಗಳಲ್ಲಿ ಕಂಡುಬರುವ ಕಾಲು ಮತ್ತು ಬಾಯಿ ಜ್ವರ ರೋಗದಿಂದಾಗಿ ದೇಶದಲ್ಲಿ ವರ್ಷಕ್ಕೆ ಮೂರು ಸಾವಿರ ಕೋಟಿಗಳಷ್ಟು ಆರ್ಥಿಕ ನಷ್ಟ ಉಂಟಾಗುತ್ತಿದೆ ಎಂದು ಪಶು ವೈದ್ಯಕೀಯ ಸೇವಾ ಇಲಾಖೆ ಉಪ ನಿರ್ದೇಶಕ ಡಾ.ಪಿ.ಶ್ರೀನಿವಾಸ್ ತಿಳಿಸಿದರು.
ಇಲ್ಲಿನ ಲಯನ್ಸ್ ಕ್ಲಬ್ ಹಾಗೂ ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಸಹಯೋಗದಲ್ಲಿ ತಾಲೂಕಿನ ಕೆರಗೋಡು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಲ್ಲುಬ್ಯಾಡರಹಳ್ಳಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಾನುವಾರುಗಳ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.
ರೈತರು ಮೌಢ್ಯ ತೊರೆದು ಜಾನುವಾರುಗಳಿಗೆ ಸಕಾಲದಲ್ಲಿ ಸೂಕ್ತವಾದ ರೋಗ ನಿರೋಧಕ ಲಸಿಕೆಗಳನ್ನು ಹಾಕಿಸುವ ಮೂಲಕ ಹೈನುಗಾರಿಕೆ ಅಭಿವೃದ್ಧಿಯೊಂದಿಗೆ ತಮ್ಮ ಆರ್ಥಿಕ ಸ್ಥಿತಿಯನ್ನೂ ಉತ್ತಮಪಡಿಸಿಕೊಳ್ಳಬಹುದಾಗಿದೆ ಎಂದರು.
ಜಿಲ್ಲೆಯಲ್ಲಿ ಒಟ್ಟಾರೆಯಾಗಿ 7.45 ಲಕ್ಷ ಜಾನುವಾರುಗಳಿದ್ದು, ಇದುವರೆವಿಗೂ 6.23ಲಕ್ಷ ಜಾನುವಾರುಗಳಿಗೆ ಕಾಲು ಬಾಯಿ ಜ್ವರದ ನಿರೋಧಕ ಲಸಿಕೆ ಹಾಕಲಾಗಿದೆ ಎಂದು ತಿಳಿಸಿದರು.
ತಾಲೂಕಿನಲ್ಲಿ ಪಶು ವೈದ್ಯಕೀಯ ಇಲಾಖೆಯಿಂದ ಇದುವರೆವಿಗೂ 67ಸಾವಿರ ಜಾನುವಾರುಗಳಿಗೆ ಈ ಲಸಿಕೆಯನ್ನು ಹಾಕಲಾಗಿದೆ ಎಂದ ಅವರು, ಹಾಸನ ಜಿಲ್ಲೆಯ ಹವಾಮಾನ ವೈಪರೀತ್ಯದಿಂದಾಗಿ ಜಾನುವಾರುಗಳಲ್ಲಿ ಚಪ್ಪೆ ರೋಗ ಲಕ್ಷಣಗಳು ಕಂಡುಬರುತ್ತಿದೆ. ಈ ಕಾಯಿಲೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಇಲಾಖೆ ಸನ್ನದ್ಧವಾಗಿದ್ದು ಸೂಕ್ತ ಚಿಕಿತ್ಸೆ ನೀಡಲಿದ್ದು ಗ್ರಾಮೀಣ ಜನರು ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಕೋರಿದರು.
ಕಾಲುಬಾಯಿ ಜ್ವರ ರೋಗಕ್ಕೆ ಲಸಿಕೆಯನ್ನು ಹಾಕಿದಲ್ಲಿ ಹಸುಗಳು ಹಾಲು ನೀಡುವ ಪ್ರಮಾಣ ಕುಂಠಿತವಾಗುವುದಲ್ಲದೇ, ಗರ್ಭದಾರಣೆಗೂ ಅಡಚಣೆಯಾಗುವುದೆಂಬ ಮೂಢನಂಬಿಕೆಗಳನ್ನು ಬಿಟ್ಟು, ರೈತರು ತಮ್ಮ ಜಾನುವಾರುಗಳಿಗೆ ಸೂಕ್ತ ಕಾಲದಲ್ಲಿ ಸೂಕ್ತವಾದ ಚಿಕಿತ್ಸೆಯನ್ನು ಜಾನುವಾರುಗಳಿಗೆ ನೀಡುವ ಮೂಲಕ ದೇಶದ ಆರ್ಥಿಕ ಭದ್ರತೆಗೆ ಸಹಕರಿಸುವಂತೆ ಕೋರಿದರು.
ಲಯನ್ಸ್ ಅಧ್ಯಕ್ಷ ಎಚ್.ಆರ್.ಮುಕುಂದೇಗೌಡ ಶಿಬಿರ ಉದ್ಘಾಟಿಸಿ, ಸಂಘ ಸಂಸ್ಥೆಗಳು ಕೇವಲ ಉಳ್ಳವರು ಸೇರುವ ಕೂಟಗಳಾಗದೆ, ಸಂಸ್ಥೆಯ ಉದ್ದೇಶ, ಸೇವೆಯನ್ನು ಗ್ರಾಮೀಣ ಭಾಗಕ್ಕೂ ಕೊಂಡೊಯ್ದು ಲಯನ್ಸ್ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪುವಂತಾಗಬೇಕು ಎಂಬ ಉದ್ಧೇಶದಿಂದ ಪಶು ವೈದ್ಯಕೀಯ ಇಲಾಖೆ ಸಹಯೋಗದಲ್ಲಿ ಈ ಶಿಬಿರ ಹಮ್ಮಿಕೊಳ್ಳಲಾಗಿದ್ದು ಇದರ ಲಾಭವನ್ನು ಎಲ್ಲಾ ರೈತರೂ ಪಡೆದುಕೊಳ್ಳುವಂತೆ ತಿಳಿಸಿದರು.
ಸ್ಥಳೀಯ ಪಶುವೈದ್ಯಕೀಯ ಇಲಾಖೆ ಪ್ರಭಾರಿ ಸಹಾಯಕ ನಿರ್ದೇಶಕ ಡಾ.ಮುರಳೀಧರ್ ಮಾತನಾಡಿ, ಇಲಾಖೆಯಲ್ಲಿನ ಪಶುವೈದ್ಯರು ಹಾಗೂ ಸಿಬ್ಬಂದಿ ಕೊರತೆ ನಡುವೆಯೂ ತಾಲೂಕಿನ 208 ಗ್ರಾಮಗಳಲ್ಲಿ ಇಲಾಖೆಯಿಂದ 16 ತಂಡಗಳನ್ನು ರಚಿಸಿ, ಜಾನುವಾರುಗಳಿಗೆ ಕಾಲು ಮತ್ತು ಬಾಯಿ ಜ್ವರ ರೊಗದ ನಿರೋಧಕ ಲಸಿಕೆಯನ್ನು ಹಾಕಲಾಗುತ್ತಿದೆ ಎಂದರು.
ಸರ್ಕಾರ ಜಾನುವಾರು ವಿಮಾ ಯೋಜನೆ ಜಾರಿಗೆ ತಂದಿದ್ದು, ಇದರ ಸದುಪಯೋಗವನ್ನು ಎಲ್ಲಾ ರೈತರೂ ಪಡೆದುಕೊಳ್ಳುವಂತೆ ಅವರು ಕಿವಿಮಾತು ಹೇಳಿದರು.
ಶಿಬಿರದಲ್ಲಿ ಜಾನುವಾರುಗಳಿಗೆ ಕಾಲು ಬಾಯಿ ರೋಗ ನಿರೋಧಕ ಲಸಿಕೆ ಹಾಕಲಾಯಿತಲ್ಲದೆ, ಜಾನುವಾರುಗಳ ಆರೋಗ್ಯ ತಪಾಸಣೆ, ಬರಡು ರಾಸು, ಹೈನುಗಾರಿಕಾ ರಾಸುಗಳ ಪರೀಕ್ಷೆ ಮತ್ತು ಚಿಕಿತ್ಸೆ, ಜಂತು ನಾಶಕ ಔಷಧಿ ವಿತರಣೆ, ಹಾಲು ಕರೆಯುವ ಹೈನುಗಾರಿಕಾ ರಾಸು ಮತ್ತು ಎಮ್ಮೆಗಳಿಗೆ ಖನಿಜಾಂಶಗಳುಳ್ಳ ಲವಣ ಮಿಶ್ರಣಗಳ ವಿತರಣೆ ನಡೆಯಿತು.
ಹಾಸನ ಪಶುವೈದ್ಯಕೀಯ ಮಹಾವಿದ್ಯಾಲಯ ಸಹಾಯಕ ಪ್ರಾಧ್ಯಾಪಕ ಡಾ.ಎಂ.ವಿ.ಶಿವರಾಜ್, ಡಾ.ಜಿ.ಡಿ.ಗುಂಡೇಗೌಡ, ಡಾ. ರೇಣುಕಾರಾದ್ಯ, ಡಾ.ಚಂದ್ರಾನಾಯಕ್, ಕೆರಗೋಡು ಪಶು ವೈದ್ಯಕೀಯ ಆಸ್ಪತ್ರೆಯ ನಾಗರಾಜ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕೆರಗೋಡು ಗ್ರಾಪಂ ಅಧ್ಯಕ್ಷ ಮಲ್ಲೇಶ್ ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್ ಕಾರ್ಯದರ್ಶಿ ಡಾ.ಕೆ.ಶ್ರೀನಿವಾಸಮೂರ್ತಿ, ಖಜಾಂಚಿ ಎಂ.ಎನ್.ಜೈಪ್ರಕಾಶ್, ಉಪಾಧ್ಯಕ್ಷ ವಕೀಲ ಆರ್.ಡಿ.ರವೀಶ್, ನಿರ್ದೇಶಕ, ವಕೀಲ ಬಿ.ಆರ್.ಪುರುಷೋತ್ತಮ್, ವಿರೂಪಾಕ್ಷ, ಗ್ರಾಪಂ ಸದಸ್ಯರಾದ ನಿಂಗಮ್ಮ, ರವಿ, ಆನಂದ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.