ಬಾಹುಬಲಿ ಸನ್ನಿಧಾನದಲ್ಲಿ ಪರಂಪರಾ ಕೂಟದ ಕಾರ್ಯಕ್ರಮಗಳಿಗೆ ಚಾಲನೆ
ಕ.ಪ್ರ. ವಾರ್ತೆ, ಹಾಸನ, ಸೆ. 29
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪರಂಪರಾ ಕೂಟದ ವಿದ್ಯಾರ್ಥಿಗಳು ಜೈನಕಾಶಿ ಶ್ರವಣಬೆಳಗೂಳಕ್ಕೆ ಪರಂಪರಾ ಕೂಟದ ಅಧ್ಯಯನ ಪ್ರವಾಸ ಹಾಗೂ ಕೂಟದ ಕಾರ್ಯಚಟುವಟಿಕೆಗಳಿಗೆ ಚಾಲನೆ ನೀಡುವ ಕಾರ್ಯವನ್ನು ಕಾಲೇಜಿನ ಪ್ರಾಂಶುಪಾಲ ಹಾಗೂ ಪರಂಪರಾ ಕೂಟದ ಸಂಚಾಲಕ ಪ್ರೊ. ಎಂ.ಬಿ. ಇರ್ಷಾದ್ ನೇತೃತ್ವದಲ್ಲಿ ಕೈಗೊಂಡಿದ್ದರು.
ಜೈನಕಾಶಿ ಶ್ರವಣಬೆಳಗೂಳ ಭಾರತದ ಸಂಸ್ಕೃತಿಯೊಂದಿಗೆ ಲೀನವಾದ ಅಹಿಂಸಾ ತತ್ವವನ್ನು ಜಗಜ್ಜಾಹೀರುಗೊಳಿಸಿದ ಕುರಿತು ಹಾಗೂ ಇಲ್ಲಿನ ಜೈನ ಸ್ಮಾರಕಗಳು ಗತಿಸಿದ ಚರಿತ್ರೆಯ ಜೀವಂತ ನೆನಪುಗಳ ಸಾಕ್ಷ್ಯಾತ್ಕಾರಕ್ಕೆ ಅಧ್ಯಾತ್ಮದ ಲೇಪನವನ್ನು ಹಚ್ಚಿರುವ ಕುರಿತಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು.
ಇಲ್ಲಿರುವ ಚಂದ್ರಗಿರಿ ಬೆಟ್ಟ ಸಮುದ್ರ ಮಟ್ಟದಿಂದ 3152 ಅಡಿ ಎತ್ತರ, ಇಂದ್ರಗಿರಿ 3288 ಅಡಿ ಎತ್ತರದಲ್ಲಿದ್ದು, ಅನೇಕ ಬಸದಿಗಳು ಜೈನ ಮುನಿಗಳ ತಪೋಸ್ಥಳಗಳು 10-11ನೇ ಶತಮಾನದ ವಾಸ್ತು ನಿರ್ಮಾಣದ 11ನೇ ಶತಮಾನದಿಂದ ಇತಿಹಾಸದ ಉಲ್ಲೇಖಗಳನ್ನು ಒಳಗೊಂಡ ಹಲವು ಶಾಸನಗಳು ಶ್ರವಣಬೆಳಗೂಳದ ಅಧ್ಯಾತ್ಮಿಕ ಪರಿಸರಕ್ಕೆ ವಿಶಿಷ್ಟ ದಾಖಲೆಗಳನ್ನು ಒದಗಿಸುತ್ತವೆ ಎಂದು ಅವರು ವಿವರಿಸಿದರು.
ಗೊಮ್ಮಟೇಶ್ವರ ಮೂರ್ತಿ ಭಾರತದಲ್ಲಿಯೇ ಅತ್ಯಂತ ಎತ್ತರವಾದ ಶಿಲಾಮೂರ್ತಿಯಾಗಿದ್ದು, ಇದರ ಎತ್ತರ 58 ಅಡಿ.
ಅನುಪಮ, ಅಧ್ಯಾತ್ಮಿಕ ತೇಜಸ್ಸನ್ನು ಒಳಗೊಂಡಿರುವ ಗೊಮ್ಮಟೇಶ್ವರನ ಮುಖಮಂಡಲ ಶಿಲ್ಪಾ ಕಲಾ ಪ್ರಪಂಚದಲ್ಲಿ ಎಂಥವರನ್ನೂ ಮೂಕ ವಿಸ್ಮಯರಾಗುವಂತೆ ಮಾಡುತ್ತದೆ. ಸೂಕ್ಷ್ಮ ಕಣಗಳಿಂದ ಕೂಡಿದ ತಿಳಿ ಬೂದು ಬಣ್ಣದ ಕಣಜ ಶಿಲೆ ಈ ಶಿಲ್ಪದ ಸೌಂದರ್ಯಕ್ಕೆ ಒಂದು ಕಾರಣವು ಹೌದು ಎಂದು ವಿವರ ನೀಡಿದರು.
ಇದೇ ವೇಳೆ ಜೈನ ಕಾಶಿಯಿಂದ 2013-14ನೇ ಸಾಲಿನ ಕಾಲೇಜಿನ ಪರಂಪರಾ ಕೂಟದ ಕಾರ್ಯಕ್ರಮಗಳಿಗೆ ವಿದ್ಯುಕ್ತವಾಗಿ ಚಾಲನೆ ನೀಡಿದರು. ತಂಡದಲ್ಲಿ ಎಂ.ಕಾಂ ವಿಭಾಗದ ಪ್ರಾಧ್ಯಾಪಕಿ ಸೌಮ್ಯ ಮತ್ತು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಸ್.ಕಿರಣ್ ರಾವತ್ ಇದ್ದರು.