ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಮನೆಯಲ್ಲೇ ಕೇಕ್ ತಯಾರಿಕೆ ಕುರಿತು ಮಾಹಿತಿ

Vishwanath S
Updated On : 30 Sept 2013, 12:17 pm

ಚನ್ನರಾಯಪಟ್ಟಣ: ಆಹಾರ ಪದಾರ್ಥಗಳನ್ನು ಬೆಳೆಸುವುದು ಎಷ್ಟು ಮುಖ್ಯವೋ ಅವುಗಳ ಸದುಪಯೋಗ ಪಡೆಸುವುದು ಅಷ್ಟೇ ಮುಖ್ಯ ಎಂದು ಕೃಷಿ ಮಹಾ ವಿದ್ಯಾಲಯದ ಅಂತಿಮ ವರ್ಷದ ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನದ ವಿದ್ಯಾರ್ಥಿಗಳು ಗ್ರಾಮಸ್ಥರಿಗೆ ತಿಳಿಸಿಕೊಟ್ಟರು.
 ತಾಲೂಕಿನ ಊಪಿನಹಳ್ಳಿಯಲ್ಲಿ ರಾಗಿಯಿಂದ ಮೌಲ್ಯವರ್ಧಿತ ಉತ್ಪನ್ನಗಳನ್ನು ಮಾಡಬಹುದು ಕೇಕ್ ಮಾಡಲು ಕೆಲವು ಉಪಕರಣಗಳನ್ನು ಬಳಸಲಾಗುತ್ತದೆ ಮತ್ತು ಮೈದಾ ಹಿಟ್ಟನ್ನು ಬಳಸಿಕೊಂಡು ಕೇಕ್ ತಯಾರಿಸುವುದು ರೂಢಿಯಾಗಿದೆ.
  ಆದರೆ ಈ ವಿದ್ಯಾರ್ಥಿಗಳು ರಾಗಿ ಹಿಟ್ಟಿನಿಂದ ಮತ್ತು ಕುಕ್ಕರ್ ಅನ್ನು ಬಳಸಿಕೊಂಡು ಮನೆಯಲ್ಲೇ ಕೇಕ್ ತಯಾರಿಸಬಹುದೆಂದು ಗ್ರಾಮಸ್ಥರಿಗೆ ತಿಳಿಸಿಕೊಟ್ಟರು. ವಿದ್ಯಾರ್ಥಿಗಳಾದ ಮುತ್ತುಕುಮಾರನ್, ಶೃತಿ ಅಂಬಾಶ್ರೀ, ಕಾಂತರಾಜು, ನಂದಿನಿ, ದೀಪಕ್‌ಕುಮಾರ್, ಅಶ್ವಿನಿ, ಡಾ.ನಾಗೇಶ್, ಶಿಲ್ಪ ಇದ್ದರು.
ಮಂಜ್ರಾಬಾದ್ ಕೋಟೆಗೆ ಕಾಯಕಲ್ಪ: ಜಿಲ್ಲಾಧಿಕಾರಿ
ಸಕಲೇಶಪುರ: ಮಂಜ್ರಾಬಾದ್ ಕೋಟೆ ಪ್ರವಾಸಿಗರ ಪ್ರೇಕ್ಷಣೀಯ ಸ್ಥಳವಾಗಿ ಪರಿವರ್ತಿಸುವ ಕಾಮಗಾರಿಗೆ ಶೀಘ್ರವೇ ಚಾಲನೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಅನ್ಬುಕುಮಾರ್ ತಿಳಿಸಿದರು.
ತಾಲೂಕಿನ ದೋಣಿಗಾಲ್ ಗ್ರಾಮದ ಮಂಜ್ರಾಬಾದ್ ಕೋಟಗೆ ಇತ್ತೀಚೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಮಾತನಾಡಿದ ಜಿಲ್ಲಾಧಿಕಾರಿ, ಕೋಟೆ ಸಮೀಪದ ಎರಡು ಎಕರೆ ಪ್ರದೇಶದಲ್ಲಿ ಪ್ರವಾಸಿಗರಿಗೆ ಮೂಲಭೂತ ಸೌಕರ್ಯ ಕಲ್ಪಿಸುವ ಪ್ರಥಮ ಹಂತವಾಗಿ ಬೆಂಗಳೂರು- ಮಂಗಳೂರು ಹೆದ್ದಾರಿಯಿಂದ ಕೋಟೆವರೆಗೆ ಸಿಮೆಂಟ್ ರಸ್ತೆ, ವಿಶ್ರಾಂತಿ ಗೃಹ, ಕೋಟೆ ಸಮೀಪ ಕ್ಯಾಂಟೀನ್ ಹಾಗೂ ಶೌಚಾಲಯ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.  ನಂತರದ ಹಂತದಲ್ಲಿ ರೂಫಿಂಗ್ ವ್ಯವಸ್ಥೆ, ಪಾರ್ಕ್ ಅಭಿವೃದ್ಧಿ ಹಾಗೂ ಕೋಟೆ ಸಮೀಪದ ಕೊಳದಲ್ಲಿ ಬೋಟಿಂಗ್ ವ್ಯವಸ್ಥೆ ಮಾಡಲು ಈ ಹಿಂದೆಯೇ ಯೋಜನೆ ರೂಪಿಸಲಾಗಿದ್ದು, ಪ್ರವಾಸೋದ್ಯಮ ಇಲಾಖೆ ಕೂಡ ಯೋಜನೆಗೆ ಒಪ್ಪಿಗೆ ನೀಡಿ ಸ್ಥಳ ಪರಿಶೀಲನೆ ನಡೆಸಿತ್ತು. ಹಾಗೆಯೇ 65 ಲಕ್ಷ ರು. ಗಳನ್ನು ಮಂಜ್ರಾಬಾದ್ ಕೋಟೆ ಅಭಿವೃದ್ಧಿ ಕಾರ್ಯಕ್ಕಾಗಿ ಬಿಡುಗಡೆಗೊಳಿಸಿದೆಎಂದು ನುಡಿದರು.
'ಕಾಲುಬಾಯಿ ಜ್ವರ: ನಿರ್ಲಕ್ಷ್ಯ ವಹಿಸಿದರೆ, ಅಪಾಯ ಖಂಡಿತ'
ಅರಸೀಕೆರೆ: ಜಾನುವಾರುಗಳಿಗೆ ರೋಗ ತಗುಲಿರುವ ಮುನ್ಸೂಚನೆ ಕಂಡುಬಂದ ಕೂಡಲೇ ಪಶು ವೈದ್ಯರನ್ನು ಸಂಪರ್ಕಿಸಿ ಮಾಹಿತಿ ಪಡೆಯಬೇಕು. ಅಲ್ಲದೇ ಮುಂಜಾಗ್ರತೆ ಕ್ರಮವಾಗಿ ಲಸಿಕೆ ಹಾಕಿಸಬೇಕು. ಇದರಿಂದ ಜಾನುವಾರುಗಳಿಗೆ ತಗಲುವ ಸೋಂಕನ್ನು ಆರಂಭದಲ್ಲಿಯೇ ತಡೆಗಟ್ಟಬಹುದು ಹಾಗೂ ಆ ಮೂಲಕ ಆಗುವ ಹಾನಿ ತಪ್ಪಿಸಬಹುದಾಗಿದೆ ಎಂದು ಹಿರಿಯ ಪಶುವೈದ್ಯಕೀಯ ಪರಿವೀಕ್ಷಕ ರಮೇಶ್ ತಿಳಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಪಶು ಸಂಗೋಪನೆ ಇಲಾಖೆ ಆಶ್ರಯದಲ್ಲಿ ಕಲ್ಗುಂಡಿ ಗ್ರಾಮಪಂಚಾಯಿತಿ ವ್ಯಾಪ್ತಿಯ ನರಸೀಪುರ ಗ್ರಾಮದಲ್ಲಿ ಜಾನುವಾರುಗಳಿಗೆ ಕಾಲುಬಾಯಿ ಜ್ವರದ ಲಸಿಕೆ ಹಾಕುವ ಕಾರ್ಯಕ್ರಮದಲ್ಲಿ ರೈತರಿಗೆ ಸಲಹೆ ನೀಡಿದ ಅವರು ಜಾನುವಾರುಗಳಿಗೆ ರೋಗ ಕಂಡುಬಂದಾಗ ನಿರ್ಲಕ್ಷ್ಯ ವಹಿಸಿದರೆ, ಅಪಾಯ ಖಂಡಿತ ಎಂದರು. ಕೂಡಲೇ ಪಶು ವೈದ್ಯರ ಬಳಿ ಜಾನುವಾರು ಕೊಂಡೊಯ್ದು ಸೂಕ್ತ ಚಿಕಿತ್ಸೆ ಮಾಡಿಸಬೇಕು. ಅಲ್ಲದೇ ಜಾನುವಾರುಗಳಿಗೆ  ವಿಮೆ ಮಾಡಿಸುವುದರಿಂದ ಅನೇಕ ಪ್ರಯೋಜನ ಪಡೆಯಲು ಸಹಾಯಕವಾಗುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಒಟ್ಟು 370 ರಾಸುಗಳಿಗೆ ಲಸಿಕೆ ಹಾಕಲಾಯಿತು. ತಾ. ಯೋಜನಾಧಿಕಾರಿ ಚೆನ್ನಪ್ಪಗೌಡ, ಸತೀಶ್, ಗ್ರಾಪಂ ಸದಸ್ಯ ರಮೇಶ್  ಇದ್ದರು.
ಹೆಣ್ಣು ಮಕ್ಕಳ ಸಂರಕ್ಷಣೆ ಕಾರ್ಯಾಗಾರ
ಆಲೂರು: ರ್ಯಾಗಿಂಗ್ ಒಂದು ಅನಿಷ್ಟ ಪದ್ಧತಿಯಾಗಿದ್ದು, ವಿದ್ಯಾರ್ಥಿಗಳು ಇದರ ಪ್ರಭಾವಕ್ಕೆ ಒಳಗಾಗದೆ, ತಮ್ಮ ಹಾಗೂ ತಮ್ಮ ಸಹಪಾಠಿಗಳನ್ನು ರ್ಯಾಗಿಂಗ್ ಮಾಡುವವರ ವಿರುದ್ಧ ದೂರು ನೀಡಬಹುದೆಂದು ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಹಾಗೂ ಜೆಎಂಎಫ್‌ಸಿ ನ್ಯಾ. ಎಮ್.ಮಹೇಶ್ ಬಾಬು ತಿಳಿಸಿದರು.ಅವರು ಪಟ್ಟಣದ ಸ.ಪ.ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ರ್ಯಾಗಿಂಗ್ ನಿಯಂತ್ರಣ ಹಾಗೂ ಹೆಣ್ಣು ಮಕ್ಕಳ ಸಂರಕ್ಷಣೆ ಬಗೆಗಿನ ಕಾನೂನು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಕಾನೂನು ಪ್ರಕಾರ ರ್ಯಾಗಿಂಗ್ ಪೀಡಿತರು ದೂರು ನೀಡಿದಲ್ಲಿ ರ್ಯಾಗಿಂಗ್ ನಡೆಸಿದವರಿಗೆ 6 ತಿಂಗಳ ಸೆರೆವಾಸ ಹಾಗೂ 10 ಸಾವಿರ ರು.ವರೆಗಿನ ದಂಡ ವಿಧಿಸಬಹುದು. ಶಾಲಾ ಕಾಲೇಜು ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಕಡೆ ಗಮನ ನೀಡಬೇಕು. ಮತ್ತೊಬ್ಬರಿಗೆ ನೋವಾಗುವಂತಹ ಚಟುವಟಿಕೆಗಳಿಂದ ದೂರವಿರಬೇಕೆಂದ ಅವರು ಹೆಣ್ಣು ಮಕ್ಕಳ ಸಂರಕ್ಷಣೆ ಹಾಗು ಭ್ರೂಣ ಹತ್ಯೆ ವಿರೋಧಿಸಿ ಸೆಪ್ಟೆಂಬರ್ 24 ನ್ನು ಅಂತಾರಾಷ್ಟ್ರೀಯ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.ವಕೀಲ ಕೆ.ಜಿ.ನಾಗರಾಜ್ ರ್ಯಾಗಿಂಗ್ ನಿಯಂತ್ರಣ ಹಾಗೂ ಹೆಣ್ಣು ಮಕ್ಕಳ ಸಂರಕ್ಷಣಾ ವಿಧಾನಗಳ ಬಗ್ಗೆ ಉಪನ್ಯಾಸ ನೀಡಿದರು. ಸ.ಪ.ಪೂರ್ವ ಕಾಲೇಜಿನ ಪ್ರಾಂಶುಪಾಲ ವೆಂಕಟರಾಮು ಅಧ್ಯಕ್ಷತೆ ವಹಿಸಿದ್ದರು.  ವಕೀಲ ಕೆ.ನಾಗರಾಜು, ಕೆ.ಎನ್.ಮಹೇಂದ್ರ, ಎಚ್.ಪಿ.ಪ್ರೇಮಕುಮಾರ್, ಜೀವನ್ ಪ್ರಸಾದ್, ಶ್ರೀನಿವಾಸ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement