ಶಿರಾಡಿ ಘಾಟ್ನಲ್ಲಿ 600 ಕೋಟಿ ವೆಚ್ಚದಲ್ಲಿ ಮೇಲು ಸೇತುವೆ: ಆಸ್ಕರ್ ಫರ್ನಾಂಡಿಸ್
ಕನ್ನಡಪ್ರಭ ವಾರ್ತೆ, ಸಕಲೇಶಪುರ, ಸೆ. 29
ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರಾಡಿಘಾಟ್ನಲ್ಲಿ 600 ಕೋಟಿ ರು. ವೆಚ್ಚದಲ್ಲಿ ಮೇಲು ಸೇತುವೆ ನಿರ್ಮಾಣ ಮಾಡಲಾಗುವುದು ಎಂದು ಕೇಂದ್ರ ಸಾರಿಗೆ ಸಚಿವ ಅಸ್ಕರ್ ಫರ್ನಾಂಡೀಸ್ ಹೇಳಿದರು.
ಶನಿವಾರ ಶಿರಾಡಿ ರಸ್ತೆಯ ಅವ್ಯವಸ್ಥೆಗೆ ಶಾಶ್ವತ ಪರಿಹಾರ ಕಂಡು ಹಿಡಿಯಬೇಕೆಂದು ಒತ್ತಾಯಿಸಿ ಶಿರಾಡಿ ರಸ್ತೆ ಹೋರಾಟ ಸಮಿತಿ ನೀಡಿದ ಮನವಿ ಸ್ವೀಕರಿಸಿ ಮಾತನಾಡಿದ ಅವರು, ಈಗಿನ ರಸ್ತೆಯನ್ನು ಹಾಗೇಯೆ ಉಳಿಸಿಕೊಂಡ ಮೇಲೆ ಎಲಿವೇಟಡ್ ರಸ್ತೆಯನ್ನು ನಿರ್ಮಾಣ ಮಾಡಲಾಗುವುದು. ಲಘು ವಾಹನ ಎಲಿವೇಟಡ್ ರಸ್ತೆಯಲ್ಲಿ ಚಲಿಸಲಿದ್ದು ಬಾರಿ ವಾಹನಗಳನ್ನು ಈಗಿರುವ ರಸ್ತೆಯನ್ನು ಅಭಿವೃದ್ಧಿಪಡಿಸಿ ಸಂಚಾರಕ್ಕೆ ಅನುವು ಮಾಡಿ ಕೊಡಲಾಗುವುದು ಎಂದು ತಿಳಿಸಿದರು.
ಘಟ್ಟ ಪ್ರದೇಶದಲ್ಲಿ ಸುರಂಗ ಮಾರ್ಗ ನಿರ್ಮಿಸುವ ಸಲುವಾಗಿ ಜಪಾನಿನ ಜೈಕ ಟೆನಲಿಂಗ್ ಸಂಸ್ಥೆಯೊಂದಿಗೆ ಹಲವು ಸುತ್ತಿನ ಮಾತುಕತೆ ನಡೆದಿದೆ.
ಈ ನಿಟ್ಟಿನಲ್ಲಿ ಜಪಾನ್ ರಾಯಬಾರಿಗಳ ಮತ್ತು ಮಂತ್ರಿಗಳ ನಡುವೆ ಹಲವು ಸುತ್ತಿನ ಮಾತುಕತೆ ನಡೆದಿದ್ದು ಅವರು ಇಲ್ಲಿಗೆ ಭೇಟಿ ನೀಡಿದ್ದಾರೆ. ನಮ್ಮ ದೇಶದ ಸುಮಾರು 12 ಇಂಜಿನಿಯರ್ಗಳು ಜಪಾನ್ಗೆ ತೆರಳಿ ಸುರಂಗ ಮಾರ್ಗದ ಬಗ್ಗೆ ತರಬೇತಿ ಪಡೆಯಲಿದ್ದಾರೆ ಎಂದು ನುಡಿದರು.
ಈ ಯೋಜನೆಗೆ ಹಣಕಾಸಿನ ಕೊರತೆ ಉಂಟಾದರೆ ಜೈಕ ಕಂಪನಿಯು ಹಣಕಾಸಿನ ನೇರವು ನೀಡಲು ಮುಂದೆ ಬಂದಿದೆ, ಮುಖ್ಯಮಂತ್ರಿ ಸಿದ್ದಾರಾಮಯ್ಯ ದೆಹಲಿಯಲ್ಲಿ ಹಣಕಾಸಿನ ನೆರವು ನೀಡುತ್ತೇವೆಂದು ಹೇಳಿದ್ದಾರೆ ಎಂದು ಹೇಳಿದರು.
ತಕ್ಷಣ ರಸ್ತೆಯ ಗುಂಡಿಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಡಲು ಅನುದಾನ ಅತಿ ಶೀಘ್ರದಲ್ಲಿ ಬಿಡುಗಡೆ ಮಾಡಲಾಗುವುದು. ಶಿರಾಡಿಘಾಟ್ಗೆ ಶಾಶ್ವತ ಪರಿಹಾರ ಕಂಡು ಹಿಡಿಯುವ ಸಲುವಾಗಿ ಈ ಯೋಜನೆ ಗಂಭೀರವಾಗಿ ಚಿಂತಿಸುವುದಾಗಿ ನುಡಿದರು. ಅರಣ್ಯ ಸಚಿವ ಬಿ. ರಮಾನಾಥ ರೈ, ಶಿರಾಡಿ ರಸ್ತೆ ಹೋರಾಟ ಸಮಿತಿಯ ಸಂಜೀತ್ ಶೆಟ್ಟಿ, ಸಾಸು ವಿಶ್ವನಾಥ್, ಸುರೇಶ್ ಆಳ್ವ ಇನ್ನಿತರರು ಇದ್ದರು.