ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಅಂತರ್ಜಲ ವೃದ್ಧಿ ಹೆಚ್ಚಳಕ್ಕೆ ಅಗತ್ಯ ಕ್ರಮ

Vishwanath S
Updated On : 1 Oct 2013, 12:35 pm

ಕನ್ನಡಪ್ರಭ ವಾರ್ತೆ ,  ಹಾಸನ ,  ಸೆ. 30
ನೈಸರ್ಗಿಕ ಸಂಪನ್ಮೂಲಗಳನ್ನು ಉತ್ತಮವಾಗಿ ನಿರ್ವಹಿಸಿ ಕೃಷಿ ಭೂಮಿ ಫಲವತ್ತತೆ ಹಾಗೂ ಅಂತರ್ಜಲ ವೃದ್ಧಿಸುವಂತೆ ಶಾಸಕ ಎಚ್.ಎಸ್.ಪ್ರಕಾಶ್ ಕರೆ ನೀಡಿದ್ದಾರೆ.
ಜಿಲ್ಲಾ ಪಂಚಾಯ್ತಿ, ಜಲಾನಯನ ಅಭಿವೃದ್ಧಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಸೋಮವಾರ ನಡೆದ ಸಮಗ್ರ ಜಲಾನಯನ ನಿರ್ವಹಣಾ ಯೋಜನೆಯ ಜಲಾನಯನ ಮೇಳ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭೂಮಿಯಿಂದ ಎಷ್ಟು ಪ್ರಮಾಣದಲ್ಲಿ ನೀರನ್ನು ತೆಗೆಯುತ್ತೇವೋ ಅಷ್ಟೇ ಪ್ರಮಾಣದಲ್ಲಿ ಮತ್ತೆ ಅಂತರ್ಜಲವನ್ನು ವೃದ್ಧಿಸುವಂತೆ ಕ್ರಮಕೈಗೊಳ್ಳಬೇಕು ಎಂದು ಹೇಳಿದರು.
ಈ ಹಿಂದೆ ಸಾಲಗಾಮೆ ಹೋಳಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಲಭ್ಯವಾಗುತ್ತಿತ್ತು. ಇತ್ತೀಚೆಗೆ ಈ ಭಾಗದಲ್ಲಿ ಸುಮಾರು 400 ಅಡಿಗಳಷ್ಟು ತೋಡಿದರೂ ನೀರು ಲಭ್ಯವಾಗುತ್ತಿಲ್ಲ. ಅಂತರ್ಜಲ ವೃದ್ಧಿಸದಿದ್ದರೆ ಮುಂದಿನ ದಿನಗಳಲ್ಲಿ 1000 ಅಡಿ ತೋಡಿದರೂ ನೀರು ಲಭ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ. ಆದ್ದರಿಂದ ಈ ಭಾಗದಲ್ಲಿ ಹೆಚ್ಚಿನ ಗಿಡಮರಗಳನ್ನು ಬೆಳೆಸುವಂತೆ ಸಲಹೆ ನೀಡಿದರು.
ಕೃಷಿ ಯೋಗ್ಯವಲ್ಲದ ಭೂಮಿಯನ್ನು ಕೃಷಿಯೋಗ್ಯ ಭೂಮಿಯಾಗಿ ಪರಿವರ್ತಿಸುವುದು, ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆ ಮಾಡಲು ಸ್ಥಳೀಯ ಸಮುದಾಯ ಸಂಘಟನೆಗಳ ಸಾಮರ್ಥ್ಯ ಹೆಚ್ಚಿಸುವುದು, ಜಲಾನಯನ ಪ್ರದೇಶದಲ್ಲಿ ವಾಸಿಸುವ ಜನರ ಜೀವನ ಮಟ್ಟ ಸುಧಾರಣೆಗೊಳಿಸುವುದು, ಜಲಾನಯ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಸಂಘ ಸಂಸ್ಥೆಗಳನ್ನು ರಚಿಸಿ ಸಾಮರ್ಥ್ಯ ವೃದ್ಧಿಸಬೇಕು ಎಂದು ಹೇಳಿದರು.
ಕ್ಷೇತ್ರಮಟ್ಟದಲ್ಲಿ ಜಾಗೃತಿ ಮೂಡಿಸಬೇಕು: ತೋಟಗಾರಿಕೆ, ಅರಣ್ಯ ಇಲಾಖೆ ಹಾಗೂ ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಸಮಸ್ಯೆಗಳನ್ನು ಪರಿಹರಿಸಲು ಕ್ಷೇತ್ರಮಟ್ಟದಲ್ಲಿ ಜಾಗೃತಿ ಮೂಡಿಸಬೇಕು. ಜಲಾನಯನ ಇಲಾಖೆಯ ಯೋಜನೆಗಳ ಬಗ್ಗೆ ರೈತರಿಗೆ ಸರಿಯಾಗಿ ಮಾಹಿತಿ ನೀಡಬೇಕು ಎಂದ ಅವರು, ಬತ್ತಿ ಹೋಗುತ್ತಿರುವ ಅಂತರ್ಜಲವನ್ನು ವೃದ್ಧಿಸುವಂತಹ ಕಾರ್ಯವನ್ನು ಸಂಬಂಧಪಟ್ಟ ಇಲಾಖೆಯವರು ಮಾಡಬೇಕು ಎಂದು ಹೇಳಿದರು.
 ಅಂತರ್ಜಲ ವೃದ್ಧಿಸಬೇಕಾದರೆ ಅಲ್ಲಲ್ಲಿ ಸಣ್ಣ ಸಣ್ಣ ಡ್ಯಾಂ ಗಳನ್ನು ನಿರ್ಮಿಸಬೇಕು, ಬದು ಹೊಂಡಗಳನ್ನು ನಿರ್ಮಿಸುವ ಮೂಲಕ ಅಂತರ್ಜಲ ವೃದ್ಧಿಸಲು ಸಾಧ್ಯವಾಗುತ್ತಿದೆ. ಇದರಿಂದ ಮನುಷ್ಯರಿಗಲ್ಲದೆ ಪ್ರಾಣಿಗಳಿಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದಂತಾಗುತ್ತದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಅಂಬಿಕಾ ರಾಮಣ್ಣ, ಇತ್ತೀಚೆಗೆ ಜಲಾಂಶ ಕಡಿಮೆಯಾಗುತ್ತಿದ್ದು, ಇಂತಹ ಸಂದರ್ಭದಲ್ಲಿ ಜಲವನ್ನು ಸಾಕಷ್ಟು ಕಡೆಗಳಲ್ಲಿ ಪೋಲು ಮಾಡಲಾಗುತ್ತಿದೆ. ಅಂತಹ ಜಲವನ್ನು ಸಂರಕ್ಷಣೆ ಮಾಡುವ ಮೂಲಕ ಜಲಾಂಶವನ್ನು ಹೆಚ್ಚಿಸಬೇಕು. ಕೃಷಿ ಹೊಂಡಗಳನ್ನು ನಿರ್ಮಿಸುವ ಮೂಲಕ ನೀರಿನ ಪ್ರಮಾಣ ವೃದ್ಧಿಸಬೇಕು.
 ಇದರಿಂದ ಅಂತರ್ಜಲದ ಸಮಸ್ಯೆ ಸ್ವಲ್ವ ಮಟ್ಟಿಗೆ ಕಡಿಮೆಯಾದಂತಾಗುತ್ತಿದೆ ಎಂದು ಹೇಳಿದರು.
ಸ್ವಾವಲಂಬನೆಯ ಕೃಷಿ:  ಮಳೆ ನೀರು ಕೋಯ್ಲು, ಬದುಗಳ ನಿರ್ಮಾಣದಿಂದ ನೀರಿನ ಅಂಶವನ್ನು ವೃದ್ಧಿಸಿದರೆ ಸ್ವಾವಲಂಬನೆಯ ಕೃಷಿ ಸಾಧಿಸಲು ಸಾಧ್ಯ. ಕಡಿಮೆ ನೀರಿನಲ್ಲಿ ಹೆಚ್ಚು ಬೆಳೆಯನ್ನು ಬೆಳೆಯುವ ಮೂಲಕ ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು ಎಂದ ಅವರು, ಜಲಾನಯನ ಯೋಜನೆಯಡಿ ಬರುವಂತಹ ಎಲ್ಲಾ ಯೋಜನೆಗಳ ಬಗ್ಗೆ ರೈತರಿಗೆ ಸಂಪೂರ್ಣ ಮಾಹಿತಿ ನೀಡಬೇಕು ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ ವಸ್ತು ಪ್ರದರ್ಶನ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಸ್ವಸಹಾಯ ಸಂಘಗಳಿಗೆ ಸುತ್ತುನಿಧಿ ವಿತರಣೆ ಮಾಡಲಾಯಿತು. ಜಿಪಂ ಸದಸ್ಯ ಸತ್ಯನಾರಾಯಣ, ಯಲಗುಂದ ಗ್ರಾಪಂ ಹಾಗೂ ಜಲಾನಯನ ಸಮಿತಿ ಅಧ್ಯಕ್ಷೆ ಸವಿತ ಸೋಮಶೇಖರ್, ಸೀಗೆ ಗ್ರಾಪಂ ಹಾಗೂ ಜಲಾನಯನ ಸಮಿತಿ ಅಧ್ಯಕ್ಷೆ ಸುಮಿತ್ರ ಸುರೇಶ್, ತಾಪಂ ಸದಸ್ಯ ರೇವಣ್ಣ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉಪೇಂದ್ರ ಪ್ರತಾಪಸಿಂಗ್, ಜಂಟಿ ಕೃಷಿ ನಿರ್ದೇಶಕ ಬಿ.ಶಿವರಾಜ್, ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥ ಡಾ.ಬಿ.ಎಸ್.ಬಸವರಾಜು, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಬಿ.ಶಕೀಲ್ ಅಹಮದ್ ಇತರರು ಇದ್ದರು.
ಕೃಷಿ ಯೋಗ್ಯವಲ್ಲದ ಭೂಮಿಯನ್ನು ಕೃಷಿಯೋಗ್ಯ ಭೂವಿಯಾಗಿ ಪರಿವರ್ತಿಸುವುದು, ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆ ಮಾಡಲು ಸ್ಥಳೀಯ ಸಮುದಾಯ ಸಂಘಟನೆಗಳ ಸಾಮರ್ಥ್ಯ ಹೆಚ್ಚಿಸುವುದು, ಜಲಾನಯನ ಪ್ರದೇಶದಲ್ಲಿ ವಾಸಿಸುವ ಜನರ ಜೀವನ ಮಟ್ಟ ಸುಧಾರಣೆಗೊಳಿಸುವುದು, ಜಲಾನಯ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಸಂಘ ಸಂಸ್ಥೆಗಳನ್ನು ರಚಿಸಿ ಸಾಮರ್ಥ್ಯ ವೃದ್ಧಿಸಬೇಕು
ತಹಸೀಲ್ದಾರ್‌ಗೆ ಅಧಿಕಾರ ದರ್ಪ
ಶಕ್ತಿ ದೇವತೆ ಪುರದಮ್ಮ ದೇವಾಲಯ ವಿಚಾರಕ್ಕೆ ಸಂಬಂಧಿಸಿದಂತೆ ತಹಸೀಲ್ದಾರ್ ಸ್ಥಳೀಯರೊಂದಿಗೆ ಚರ್ಚಿಸದೆ ಏಕಾಏಕಿ ಕೆಲ ತೀರ್ಮಾನ ಕೈಗೊಳ್ಳುವ ಮೂಲಕ ಅಧಿಕಾರ ದರ್ಪದಿಂದ ವರ್ತಿಸುತ್ತಿದ್ದಾರೆ ಎಂದು ಶಾಸಕ ಎಚ್.ಎಸ್.ಪ್ರಕಾಶ್ ಆರೋಪಿಸಿದ್ದಾರೆ.
ಶ್ರೀರಾಮದೇವರ ಹಳ್ಳದಲ್ಲಿ ಸೋಮವಾರ ನಡೆದ ಜಲಾನಯನ ಮೇಳದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುರದಮ್ಮ ದೇವಾಲಯಕ್ಕೆ ತನ್ನದೆ ಆದ ವಿಶೇಷತೆ ಇದೆ. ಈ ದೇವಾಲಯ ಮುಜಾರಾಯಿ ಇಲಾಖೆಗೆ ಸೇರಿದೆ ಎಂದು ತಮ್ಮಿಷ್ಟಕ್ಕೆ ಬಂದಂತೆ ತಹಸೀಲ್ದಾರ್ ವರ್ತಿಸುತ್ತಿದ್ದಾರೆ. ಅಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ಸ್ಥಳೀಯರು ಹಾಗೂ ಹತ್ತಾರು ಗ್ರಾಮದ ಜನರನ್ನು ಕರೆಸಿ ಅವರೊಂದಿಗೆ ಚರ್ಚಿಸಿ ಅಲ್ಲಿ ಏನೇನು ಕಾರ್ಯಗಳು ಆಗಬೇಕು ಅಂತ ಚರ್ಚಿಸಿ ಮುಂದಿನ ಕ್ರಮಕೈಗೊಳ್ಳಬೇಕು ಎಂದರು.
ಜೊತೆಗೆ ಶ್ರೀರಾಮದೇವರ ಹಳ್ಳ ದೇವಸ್ಥಾನ ವಿಶೇಷತೆ ಹೊಂದಿದ್ದು, ಇಲ್ಲಿನ ಭಕ್ತರ ಅನುಕೂಲವಾಗುವ ಸೌಕರ್ಯಗಳನ್ನು ಒದಗಿಸಬೇಕು. ಇಲ್ಲಿ ಸುಂದರ ಪರಿಸರವಿದ್ದು, ಪ್ರಕೃತಿ ವನ ಹಾಗೂ ಆಯುರ್ವೇದ ಗಿಡಗಳನ್ನು ಬೆಳೆಸಿ ಪರಿಸರ ವೃದ್ಧಿಸುವಂತಹ ಕಾರ್ಯವನ್ನು ಮಾಡಬೇಕು. ಅದನ್ನು ಬಿಟ್ಟು ಇಲ್ಲಿನ ಗ್ರಾಮಸ್ಥರನ್ನು ಬಿಟ್ಟು ಅಧಿಕಾರದ ದರ್ಪದಿಂದ ಏಕಾಏಕಿ ತೀರ್ಮಾನ ಕೈಗೊಳ್ಳುವುದು ಸರಿಯಲ್ಲ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement