ಅಸಮರ್ಪಕ ಗ್ಯಾಸ್ ವಿತರಣೆ: ಗ್ರಾಹಕರ ಆಕ್ರೋಶ
ಬೇಲೂರು: ಗ್ಯಾಸ್ ಸಿಲಿಂಡರ್‌ಗೆ ಬಿಲ್ ಮಾಡಿಸಲು ದಿನಗಟ್ಟಲೆ ಸರದಿ ಸಾಲಿನಲ್ಲಿ ಕಾದು ಬುಕ್ ಮಾಡಿದರೂ, ಸಮಯಕ್ಕೆ ಸರಿಯಾಗಿ ಗ್ಯಾಸ್ ವಿತರಣೆಯಾಗದೆ ಪರದಾಡುವಂತಾಗಿದೆ ಎಂದು ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ಯಾಸ್ ಸಿಲಿಂಡರ್‌ಗೆ ಬುಕ್ ಮಾಡಿಸಲು ಬೆಳಿಗ್ಗೆ 5 ಗಂಟೆಗೆ ಬಂದು 12 ಗಂಟೆವರೆಗೆ ಕಾಯುತ್ತೇವೆ. ಕೇವಲ 50 ರಿಂದ 60 ಜನರಿಗೆ ಮಾತ್ರ ಬಿಲ್ ಹಾಕಿ ಉಳಿದವರನ್ನು ನಾಳೆ ಬನ್ನಿ ಎನ್ನುತ್ತಾರೆ. ಪ್ರತಿನಿತ್ಯ ನಮ್ಮ ಕೆಲಸಗಳನ್ನು ಬಿಟ್ಟು ಇಲ್ಲಿಗೆ ಬಂದು ನಿಲ್ಲುವುದೆ ಆಗಿದೆ ಎಂದು ಜೋಗಿಹಳ್ಳಿಯ ಶಂಕರ್ ದೂರಿದ್ದಾರೆ.
ನಮ್ಮೂರಿನ ಅಂಗನವಾಡಿಯಲ್ಲಿ 5 ಮಕ್ಕಳಿದ್ದಾರೆ, ಅಲ್ಲಿಗೆ 2 ಸಿಲಿಂಡರ್ ಕೊಡುತ್ತಾರೆ, ಐವರಿಗೆ ಎರಡು ಸಿಲಿಂಡರ್ ಏತಕ್ಕೆ ಬೇಕು. ಇಲ್ಲಿ ಬಂದು ಮನೆಗೆ ಸಿಲಿಂಡರ್ ಕೇಳಿದರೆ ಸರಬರಾಜು ಇಲ್ಲ ಎನ್ನುತ್ತಾರೆ ಎಂದು ದೂರಿದರು. ಹೆಬ್ಬಾಳಿನ ನಂಜಂಡೇಗೌಡ ಮಾತನಾಡಿ, ವಾರಕ್ಕೆ 2 ಅಥವಾ 3 ದಿನ ಮಾತ್ರ ಬಿಲ್ ಹಾಕುತ್ತಾರೆ. ಗ್ಯಾಸ್ ಅಂಗಡಿಯವರು 10 ಗಂಟೆಗೆ ಬರುತ್ತಾರೆ. ಮನೆ, ಜಮೀನು ಕೆಲಸವೆಲ್ಲಾ ಹಾಳಾಗುತ್ತಿದೆ. ನಮಗೆ ಸಿಲಿಂಡರ್ ಕೊಟ್ಟು 2 ತಿಂಗಳಾಯಿತು, ಕೇಳಿದರೆ ಸ್ಟಾಕ್ ಇಲ್ಲ, ಕಳುಹಿಸಿ ಕೊಡುತ್ತೇವೆ ಎನ್ನುತ್ತಾರೆ ಎಂದು ಗ್ರಾಹಕ ಪರಶುರಾಮ ಆರೋಪಿಸಿದರು. ಮನೆ ಬಳಿಗೆ ತಂದೂ ಕೊಡುವುದಿಲ್ಲ, ಇಲ್ಲಿಯೂ ಸರಿಯಾಗಿ ಬಿಲ್ ಹಾಕಿ ಕೊಡುವುದಿಲ್ಲ ಎಂದು ಪಟ್ಟಣದ ಮತ್ತೊಬ್ಬ ಗ್ರಾಹಕ ನಿಂಗರಾಜು ಹೇಳಿದರು. ಹನಿಕೆ, ಮಲ್ಲನಹಳ್ಳಿ, ಬೆಣ್ಣೂರುಗಡಿ, ವೀರದೇವನಹಳ್ಳಿ, ಸೋಂಪುರ, ಇ.ಹೊಸಹಳ್ಳಿ, ಸೋಮನಹಳ್ಳಿ ಈ ಗ್ರಾಮಗಳಿಗೆ ಸಿಲಿಂಡರ್ ಸಮರ್ಪಕ ವಿತರಣೆ ಮಾಡುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.