ಉಚಿತ ಸೇವೆ ಬಗ್ಗೆ ನಿರ್ಲಕ್ಷ್ಯ: ಗ್ರಾಹಕರಿಗೆ ವಿನಾಕಾರಣ ತೊಂದರೆ
ಕನ್ನಡಪ್ರಭ ವಾರ್ತೆ , ಬೇಲೂರು , ಸೆ.30
ಹಾಸನದ ವೆಂಕಟ್ ಮೋಟಾರ್ ಕಂಪನಿಯವರು ಗ್ರಾಹಕರಿಗೆ ಉಚಿತವಾಗಿ ನೀಡುವ ಸೇವೆಯ ಬಗ್ಗೆ ನಿರ್ಲಕ್ಷ್ಯ ತೋರುತ್ತಿದ್ದು ಇದರಿಂದ ಗ್ರಾಹಕರು ತೊಂದರೆ ಅನುಭವಿಸುವಂತಾಗಿದೆ ಎಂದು ಅರೆಹಳ್ಳಿ ಗ್ರಾಪಂ ಮಾಜಿ ಉಪಾಧ್ಯಕ್ಷ ಮೋಹನ್‌ಕುಮಾರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ ತಿಂಗಳಲ್ಲಿ ವೆಂಕಟ್ ಮೋಟಾರ್‌ನಿಂದ ನೂತನ ಮಾರುತಿ ಓಮಿನಿ ಖರೀದಿ ಮಾಡಿದ್ದು 1000, 5000 ಹಾಗೂ 10 ಸಾವಿರ ಕಿ.ಮೀ ವರೆಗೂ ಉಚಿತ ಸೇವೆ ನೀಡುವುದಾಗಿ ಹೇಳಿದ್ದರು. 5 ಸಾವಿರ ಕಿ.ಮೀ ನಂತರ ವ್ಹೀಲ್ ಅಲೈನ್‌ಮೆಂಟ್‌ಗಾಗಿ ಕಂಪನಿಗೆ ಹೋದಾಗ ನಮ್ಮಲ್ಲಿರುವ ವ್ಹೀಲ್ ಅಲೈನ್ಮೆಂಟ್ ಮೆಷಿನ್ ಕೆಟ್ಟು ಹೋಗಿದ್ದು ಬೇರೆಡೆ ಮಾಡಿಸಿಕೊಳ್ಳಿ, ಅದರ ಬಿಲ್ ತಂದು ಕೊಟ್ಟರೆ ನಾವು ಹಣ ನೀಡುತ್ತೇವೆ ಎಂದು ಮ್ಯಾನೇಜರ್ ಅವರು ತಿಳಿಸಿದ್ದರು.
ಅದರಂತೆ ಬೇರೆಡೆ ಮಾಡಿಸಿದಾಗ 1 ಟೈಯರ್ ಸವೆದಿರುವುದು ಗಮನಕ್ಕೆ ಬಂತು. ಟೈರ್ ಸವೆದಿರುವ ಬಗ್ಗೆ ಹಾಗೂ ಅಲೈನ್‌ಮೆಂಟ್ ಮಾಡಿರುವ ಬಿಲ್ ತಂದು ತೋರಿಸಿದಾಗ ಯಾವುದೇ ರೀತಿಯ ಖರ್ಚು ವೆಚ್ಚಗಳನ್ನು ನೀಡುವುದಿಲ್ಲ, ಮತ್ತು ಟೈರ್ ಬಗ್ಗೆ ಯಾವುದೇ ಗ್ಯಾರಂಟಿ ಕೊಡುವುದಿಲ್ಲ ಎಂದು ಉಡಾಫೆ ಉತ್ತರ ನೀಡಿದ್ದಾರೆ. ಇದನ್ನು ಪ್ರಶ್ನಿಸಿ ಗ್ರಾಹಕರ ವೇದಿಕೆಗೆ ದೂರು ನೀಡುವುದಾಗಿ ಎಚ್ಚರಿಸಿದರು. ಹರೀಶ್‌ಶೆಟ್ಟಿ ಇತರರಿದ್ದರು.