ನಾಟಿ ಕೋಳಿ ಸಾಕಾಣಿಕೆ: ಉತ್ತಮ ಬದುಕು ಕಟ್ಟಿಕೊಂಡ ಸುನೀಲ್
ಹಾಸನ: ಫಾರಂ ಕೋಳಿಗೆ ಹೋಲಿಸಿದರೆ ನಾಟಿಕೋಳಿಗೆ ಎಲ್ಲಿಲ್ಲದ ಬೇಡಿಕೆ. ನಾಟಿ ಕೋಳಿ ಸಾರು ಮತ್ತು ಅದರಿಂದ ತಯಾರಿಸಿದ ಮಾಂಸಾಹಾರ ಮಳೆಗಾಲ ಮತ್ತು ಚಳಿಗಾಲ ಬಂತೆಂದರೆ ಹೇಳಬೇಕೆ. ಫಾರಂ ಕೋಳಿಗೆ ಹೋಲಿಸಿದರೆ ನಾಟಿಕೋಳಿ ಹೆಚ್ಚು ರುಚಿ. ಹೀಗಾಗಿಯೇ ಇತ್ತೀಚಿನ ದಿನಗಳಲ್ಲಿ ನಾಟಿಕೋಳಿಗೆ ಎಲ್ಲಿಲ್ಲದ ಬೇಡಿಕೆ ಹೆಚ್ಚಾಗುತ್ತಿದೆ.
ಇಂತಹ ನಾಟಿ ಕೋಳಿ ಫಾರಂನ್ನು ಜಿಲ್ಲೆಯ ಆಲೂರು ತಾಲೂಕಿನ ಭೈರಾಪುರದ ಸುನೀಲ್ ಎಂಬುವರು ತೆರೆದು ನಾಟಿ ಕೋಳಿ ಸಾಕಾಣಿಕೆ ನಡೆಸುವ ಮೂಲಕ ಲಾಭದ ಉದ್ದಿಮೆಯನ್ನಾಗಿಸಿ ಕೊಂಡಿದ್ದಾರೆ. ಅಲ್ಲದೇ ಈ ಸ್ವ ಉದ್ಯೋಗದ ಮೂಲಕ ಉತ್ತಮ ಬದುಕನ್ನು ಕಟ್ಟಿಕೊಂಡಿರುವುದು ಇತರರಿಗೆ ಮಾದರಿಯಾಗಿದೆ.
ರಾಜ್ಯದಲ್ಲಿ ನಾಟಿಕೋಳಿಗಳ ಸಾಕಾಣಿಕೆ ಕೇವಲ ಬೆರಳೆಣಿಕೆಯಷ್ಟಿದ್ದು, ಜಿಲ್ಲೆಯಲ್ಲಿ ಇದು ಪ್ರಥಮವಾಗಿದೆ. ಸುನೀಲ್ ಕಳೆದ 4 ತಿಂಗಳಿನಿಂದ ಈ ನಾಟಿಕೋಳಿಯ ಸಾಕಾಣಿಕೆ ಪ್ರಾರಂಭಿಸಿದ್ದಾರೆ. ಇವರು 1 ದಿನದ ನಾಟಿ ಕೋಳಿ ಮರಿಗಳನ್ನು 36 ರು.ನಂತೆ 5 ಸಾವಿರ ಮರಿಗಳನ್ನು ತಂದು ಸಾಕಲು ಪ್ರಾರಂಭಿಸಿದರು. ಅವುಗಳಿಗೆ ಈಗ ನಾಲ್ಕು ತಿಂಗಳು ತುಂಬಿದೆ.
ಒಂದು ಕೋಳಿಯನ್ನು ಸಾಕಲು 145 ರು.ಗಳ ವೆಚ್ಚ ತಗಲಲಿದ್ದು, 180 ರು.ಗಳಿಗೆ ಮಾರಾಟ ಮಾಡಲಾಗುತ್ತದೆ. ಪ್ರತಿನಿತ್ಯ ಬೆಳಗ್ಗೆ ಕೋಳಿಗಳಿಗೆ ಫೀಡ್ ಹಾಕಿ ಸ್ವಚ್ಛಗೊಳಿಸಬೇಕು. ಅದೇ ರೀತಿ ಸಂಜೆ ಕೂಡ ಒಂದು ಬಾರಿ ಫೀಡ್ ಹಾಕಿ ಸ್ವಚ್ಛತೆ ಕಾಪಾಡಬೇಕು. ಇದರಿಂದ ಕೋಳಿಗಳು ದಷ್ಟಪುಷ್ಟವಾಗಿ ಬೆಳೆಯಲು ಸಾಧ್ಯವಾಗುತ್ತದೆ.
ನಾಟಿಕೋಳಿ ವ್ಯಾಪಾರ ಭರ್ಜರಿ ನಡೆಯುತ್ತಿದ್ದು, ನಾಟಿಕೋಳಿ ಖರೀದಿಸಲು ಜಿಲ್ಲೆಯಿಂದಲ್ಲದೆ ಸೇಲಂ, ಬೆಂಗಳೂರು, ಮೈಸೂರು, ಮಂಗಳೂರು, ಚಿಕ್ಕಮಗಳೂರು, ತುಮಕೂರು, ತಿಪಟೂರು ತಾಲೂಕು ಮತ್ತು ಹಳೇಪಾಳ್ಯದಿಂದಲೂ ಗ್ರಾಹಕರು ನಾಟಿಕೋಳಿಯನ್ನು ಹುಡುಕಿಕೊಂಡು ಇಲ್ಲಿಗೆ ಬರುವುದು ವಿಶೇಷವಾಗಿದೆ. ಮಂಗಳೂರಿನಲ್ಲಿ ಹೆಚ್ಚಿನ ಬೇಡಿಕೆ: ಕೇವಲ ಬೆರಳೆಣಿಕೆಯಷ್ಟು ಮಾತ್ರ ನಾಟಿ ಕೋಟಿ ಫಾರಂಗಳು ರಾಜ್ಯದಲ್ಲಿ ಸಿಗುತ್ತವೆ. ಬೆಂಗಳೂರಿನಲ್ಲಿ ನಾಟಿ ಕೋಳಿಗಳ ಸಾಕಾಣಿಕೆಯಿದ್ದು, ಬೇರೆ ಜಿಲ್ಲೆಗಳಲ್ಲಿ ಅಷ್ಟಾಗಿ ಇಲ್ಲ. ಸಂತೆಗಳಲ್ಲಿ ನಾಟಿಕೋಳಿಗಳನ್ನು ಕೆಲ ರೈತರೇ ಸಾಕಿ ಅದನ್ನು ಮಾರಾಟ ಮಾಡುತ್ತಾರೆ. ಅಂಗಡಿಗಳಲ್ಲಿ ನಾಟಿಕೋಳಿಗಳನ್ನು ರೈತರಿಂದ ನೇರವಾಗಿ ಖರೀದಿಸಿ ಮಾರಾಟ ಮಾಡುತ್ತಾರೆ. ರೈತರು ಕಡಿಮೆ ಮಟ್ಟದಲ್ಲಿ ನಾಟಿಕೋಳಿ ಸಾಕಾಣಿಕೆ ಮಾಡುತ್ತಾರೆ. ರೈತರು ಸಣ್ಣಪ್ರಮಾಣದಲ್ಲಿ ಸಾಕಾಣಿಕೆ ಮಾಡಿದ ಹೋಬಳಿ ಮಟ್ಟದಲ್ಲಿ ಕೆಜಿ ಗೆ 100ರಿಂದ 150 ರು.ಗಳಿಗೆ ಮಾರಾಟ ಮಾಡಿಕೊಳ್ಳುತ್ತಾರೆ. ನಾಟಿ ಕೋಳಿ ತಿನ್ನುವವರಲ್ಲದೆ ಅದನ್ನು ಅಂಗಡಿಗಳಲ್ಲಿ ಮಾರಾಟ ಮಾಡುವಂತಹ ವ್ಯಾಪಾರಸ್ಥರು ಸಹ ಇಲ್ಲೇ ಖರೀದಿ ಮಾಡಿ ಅಂಗಡಿಗಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಾರೆ.
ಲಾಭದಾಯಕವಾಗಿರುವ ಈ ಉದ್ದಿಮೆಯನ್ನು ಆಲೂರು ತಾ. ಭೈರಾಪುರ ಸುನೀಲ್ ಕೈಗೊಂಡು, ಇದರಿಂದ ಉತ್ತಮ ಲಾಭ ಪಡೆಯುತ್ತಿದ್ದಾರೆ. ಸಾಕಣೆದಾರರು ಕಡಿಮೆ ಕರ್ಚಿನಲ್ಲಿ ಉತ್ತಮ ಆದಾಯ ಹೊಂದುವ ಕಸುಬಾಗಿದೆ. ಒಟ್ಟಿನಲ್ಲಿ ನಾಟಿಕೋಳಿಗೆ ಅದರದೇ ಆದ ಬೇಡಿಕೆ ಇದ್ದು, ನಾಟಿಕೋಳಿ ವಹಿವಾಟು ದೊಡ್ಡದಾಗಿ ಬೆಳೆದಿದೆ.
ಫಾರಂ ಕೋಳಿಗಿಂತ ಈ ನಾಟಿಕೋಳಿಗೆ ಬೇಡಿಕೆ ಹೆಚ್ಚಿದ್ದು, ಉತ್ತಮ ವ್ಯಾಪಾರ ವಹಿವಾಟು ನಡೆಯುತ್ತಿದೆ. ಒಂದು ದಿನದ ಮರಿಗಳನ್ನು ತಂದು ಫಾರಂಗಳಲ್ಲಿ ಬೆಳೆಸಿದರೆ 4 ತಿಂಗಳಿಗೆ ಕೋಳಿ ದಷ್ಟಪುಷ್ಟವಾಗಿ ಬೆಳೆಯುತ್ತವೆ. ನಂತರ ಅದನ್ನು ಮಾರಾಟ ಮಾಡಲಾಗುತ್ತದೆ. ಒಂದು ಕೋಳಿ ಸಾಕಾಣಿಕೆಗೆ 145 ರು. ವೆಚ್ಚ ತಗಲಲಿದ್ದು, ಅದನ್ನು 180 ರು.ಗಳಿಗೆ ಮಾರಾಟ ಮಾಡಲಾಗುತ್ತದೆ. ಫಾರಂನ್ನು ಸರಿಯಾಗಿ ನಿರ್ವಹಣೆ ಮಾಡಿದರೆ ಇದಕ್ಕಿಂತ ಒಳ್ಳೆಯ ಉದ್ಯಮ ಬೇರೊಂದಿಲ್ಲ
- ಸುನೀಲ್, ನಾಟಿಕೋಳಿ ಫಾರಂ ಮಾಲೀಕ
-ಪಿ.ರವಿಕುಮಾರ್