ಸಾಲ ನೀಡಿಕೆ: ಜಿಲ್ಲಾ ಸಹಕಾರ ಬ್ಯಾಂಕ್ನಲ್ಲಿ ದುರುಪಯೋಗ
ಚನ್ನರಾಯಪಟ್ಟಣ: ಜಿಲ್ಲಾ ಸಹಕಾರ ಬ್ಯಾಂಕ್ನಿಂದ ಕಳೆದ ಮೂರು ವರ್ಷದಲ್ಲಿ ನೀಡಿರುವ ಸಾಲದಲ್ಲಿ ದುರುಪಯೋಗವಾಗಿದ್ದು, ಈ ಬಗ್ಗೆ ಸಮಗ್ರ ತನಿಖೆ ಮಾಡಬೇಕೆಂದು ಮಾಜಿ ಶಾಸಕ ಸಿ.ಎಸ್. ಪುಟ್ಟೇಗೌಡ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲಾ ಸಹಕಾರ ಬ್ಯಾಂಕ್ ವತಿಯಿಂದ ಕೃಷಿ ಪತ್ತಿನ ಸಹಕಾರ ಬ್ಯಾಂಕ್ಗಳಿಂದ ರೈತರಿಗೆ ನೀಡಿರುವ ಸಾಲ,ಸರ್ಕಾರದ ಸಾಲಮನ್ನಾ ಸೇರಿದಂತೆ ಕೇಂದ್ರ ಸರ್ಕಾರ ನೀಡಿರುವ ರಿಯಾಯಿತಿಯಲ್ಲಿ ಮೋಸವೆಸಗಿದ್ದು ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ಸಹಕಾರ ಬ್ಯಾಂಕ್ಗಳಿಂದ ರೈತರು ತೆಗೆದುಕೊಂಡಿರುವ ಸಾಲದ ಮೇಲೆ 2010-11 ನೇ ಸಾಲಿನಲ್ಲಿ ಶೇ.1, 2011-12ನೇ ಸಾಲಿನಲ್ಲಿ ಶೇ.2 ಹಾಗೂ 2012-13ನೇ ಸಾಲಿನಲ್ಲಿ ಶೇ.3 ರಷ್ಟು ರಿಯಾಯಿತಿಯನ್ನು ಕೇಂದ್ರ ಸರ್ಕಾರ ನೀಡಿದ್ದು, ಕಳೆದ ಎರಡು ವರ್ಷದಲ್ಲಿ ಯಾವ ರೈತರಿಗೂ ಈ ಹಣದ ಬಗ್ಗೆ ಮಾಹಿತಿ ನೀಡದಂತೆ ಜಿಲ್ಲಾ ಬ್ಯಾಂಕ್ ಅಧ್ಯಕ್ಷರು ಕೃಷಿ ಪತ್ತಿನ ಸಹಕಾರ ಸಂಘಗಳ ಕಾರ್ಯದರ್ಶಿಗಳಿಗೆ ಮೌಖಿಕ ಆದೇಶ ನೀಡಿರುವುದರಿಂದ ಜಿಲ್ಲೆಯ ಎಲ್ಲಾ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿಯೂ ಕೇಂದ್ರ ಸರ್ಕಾರ ನೀಡಿದ ಸಹಾಯಧನ ರೈತರಿಗೆ ದೊರೆತಿಲ್ಲ ಎಂದು ತಿಳಿಸಿದರು.
ಸಹಕಾರಿ ಸಂಘಗಳಲ್ಲಿ ಸಾಲ ಪಡೆದ ರೈತರು ಪ್ರತಿ ವರ್ಷ ಸಾಲವನ್ನು ಮರುಪಾವತಿ ಮಾಡಿ ಪುನರ್ಸಾಲ ಪಡೆಯುವುದು ವಾಡಿಕೆಯಲ್ಲಿದ್ದು, ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ನೀಡಿರುವ ಸಹಾಯಧನವನ್ನು ಕಳೆದು ರೈತರಿಂದ ಉಳಿದ ಹಣವನ್ನು ತೆಗೆದುಕೊಳ್ಳಬೇಕು. ಆದರೆ ರಿನಿವಲ್ ಸಮಯದಲ್ಲಿ ರೈತರಿಗೆ ಈ ಬಗ್ಗೆ ಮಾಹಿತಿ ನೀಡದೆ ಅವರಿಂದ ಸಹಿ ಪಡೆದು ರೈತರು ತೆಗೆದುಕೊಂಡಿರುವಷ್ಟೇ ಅಸಲನ್ನು ಪಡೆದು ಸಾಲವನ್ನು ರಿನಿವೆಲ್ ಮಾಡುವ ಮುಖೇನ ರೈತರಿಗೆ ಮೋಸವೆಸಗಿದ್ದಾರೆ ಎಂದು ಆಪಾದಿಸಿದರು.
2010ರಿಂದ ಜಿಲ್ಲಾ ಬ್ಯಾಂಕ್ ವತಿಯಿಂದ 275ಕೋಟಿ ಸಾಲ ನೀಡಿದ್ದು, ಅಂದಿನಿಂದ ಮೂರು ವರ್ಷಗಳ ಕಾಲ ಕೇಂದ್ರ ಸರ್ಕಾರದ ಸಹಾಯಧನ ಹಣವನ್ನು ದುರುಪಯೋಗಪಡಿಸಿಕೊಂಡಿದ್ದು, ಈ ನಿಟ್ಟಿನಲ್ಲಿ ಜಿಲ್ಲಾ ಬ್ಯಾಂಕ್ ಅಧ್ಯಕ್ಷರು ಕೃಷಿ ಪತ್ತಿನ ಸಹಕಾರ ಸಂಘಗಳ ಕಾರ್ಯದರ್ಶಿಗಳಿಗೆ ನೇರ ಹೊಣೆಯಾಗಿದ್ದಾರೆ ಎಂದು ಆರೋಪಿಸಿದರು.
ಮಾಹಿತಿ ಹಕ್ಕಿನಡಿಯಲ್ಲಿ ಈ ಬಗ್ಗೆ ಮಾಹಿತಿ ಕೇಳಿದರೆ ಸಹಕಾರ ಸಂಘಗಳಿಗೆ ಮಾಹಿತಿ ಹಕ್ಕು ಕಾಯಿದೆ ಒಳಪಡುವುದಿಲ್ಲ ಎಂದು ತಿಳಿಸಿದ್ದು, ಈ ಬಗ್ಗೆ ಸರ್ಕಾರದಿಂದ ಹೊರಡಿಸಿರುವ ಸುತ್ತೋಲೆ ತಮಗೆ ದೊರೆತಿರುವುದರಿಂದ ಮಾಹಿತಿ ದೊರೆತಿದ್ದು, ರೈತರ ಕೋಟಿಗಟ್ಟಲೆ ಹಣ ನುಂಗಿರುವವರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು. ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ನ ಕಾರ್ಯದರ್ಶಿಗಳು ದುಬಾರಿ ಕಾರಿಗಳನ್ನು ಖರೀದಿಸಿರುವುದಲ್ಲದೆ, ಕಳೆದ ಮೂರು ವರ್ಷದಲ್ಲಿ ಗಳಿಸಿರುವ ಆಸ್ತಿ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯಿಸಿದರು. ಚೋಳೆನಹಳ್ಳಿ ಜಯರಾಂ, ಮಳ್ಳೇನಹಳ್ಳಿ ರಾಜಣ್ಣ ಇದ್ದರು.