ಎ.ಮಂಜು ಪರ ಯುವ ಕಾಂಗ್ರೆಸ್ ಮತ ಪ್ರಚಾರ
ಹೊಳೆನರಸೀಪುರ: ಜಿಲ್ಲೆಯಾದ್ಯಂತ ಜೆಡಿಎಸ್ನಿಂದ ಅಭಿವೃದ್ಧಿ ಹೆಸರಿನಲ್ಲಿ ನಡೆಸಲಾಗಿರುವ ಆಕ್ರಮ ಹಾಗೂ ಅಭಿವೃದ್ಧಿ ತಾರತಮ್ಯವನ್ನು ಮನಗಂಡಿರುವ ಜಿಲ್ಲೆಯ ಮತದಾರರು ಈ ಬಾರಿ ಬದಲಾವಣೆ ಬಯಸಿದ್ದು ಕಾಂಗ್ರೆಸ್ ಅಭ್ಯರ್ಥಿ ಎ.ಮಂಜು ಅವರನ್ನು ಬೆಂಬಲಿಸಲಿದ್ದಾರೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಂತರ್ಗೌಡ ವಿಶ್ವಾಸ ವ್ಯಕ್ತಪಡಿಸಿದರು. ಪಟ್ಟಣದ ಮೊದಲನೇ ವಾರ್ಡ್ ಸೂರನಹಳ್ಳಿ ಆಂಜನೇಯಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ರೋಡ್ ಷೋ ನಡೆಸಿ ಮಾತನಾಡಿದ ಅವರು, ಕ್ಷೇತ್ರದ ಅಭಿವೃದ್ಧಿಯಲ್ಲಿನ ಕಡೆಗಣನೆ ಸರಿಪಡಿಸಲು, ಮತದಾರರು ಕೇವಲ ತೋಚಿದವರಿಗೆ ಮತ ನೀಡದೇ, ತಮ್ಮ ಹೃದಯದಿಂದ ಚಿಂತನೆ ನಡೆಸಿ ಮತ ನೀಡುವಂತೆ ಕೋರಿದರು. ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೇಯಸ್ ಪಟೇಲ್ ಮಾತನಾಡಿ, ತಾಲೂಕಿನಾದ್ಯಂತ ರಾಜ್ಯ ಸರ್ಕಾರ ಕೈಗೊಂಡಿರುವ ಯೋಜನೆಗಳು ಹಾಗೂ ಮಾಡಿರುವ ಸಾಧನೆಗಳನ್ನು ಮತದಾರರ ಮುಂದಿಟ್ಟು ನಮ್ಮ ಅಭ್ಯರ್ಥಿ ಗೆಲವಿಗೆ ಶ್ರಮಿಸಲಾಗುವುದು ಎಂದರು.