ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ನೀರೆಯರೇ ಜಾಸ್ತಿ; ಸಂಸತ್ ಪ್ರವೇಶ ನಾಸ್ತಿ!

Rashmi Kasaragodu
Updated On : 2 Apr 2014, 2:32 am

ಪಿ.ರವಿಕುಮಾರ್
ಕನ್ನಡಪ್ರಭ ವಾರ್ತೆ, ಹಾಸನ, ಏ.1
ಪುರುಷರಿಗಿಂತ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿರುವ ಹಾಸನ ಲೋಕಸಭಾ ಇತಿಹಾಸದಲ್ಲಿ ಒಮ್ಮೆಯೂ ಮಹಿಳೆ ಸಂಸತ್ ಮೆಟ್ಟಿಲು ಹತ್ತಿಲ್ಲ. ಆದರೆ, ಬಿಜೆಪಿಯಿಂದ ಒಮ್ಮೆ ಮಾತ್ರ ಮಹಿಳೆ ಕಣಕ್ಕೆ ಇಳಿದಿದ್ದಾರೆ.
ಅದನ್ನು ಹೊರತು ಪಡಿಸಿ, ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಸ್ಪರ್ಧಿಸಲು ಮಹಿಳೆಯರಿಗೆ ಅವಕಾಶ ನೀಡಿಲ್ಲ. ಹಾಸನ ದೇಶಕ್ಕೆ ಪ್ರಧಾನಿ ನೀಡಿದ ಜಿಲ್ಲೆ ಮಾತ್ರವಲ್ಲ, ಜಿದ್ದಾಜಿದ್ದಿನ ರಾಜಕಾರಣ ಮತ್ತಿತರೆ ಕಾರಣಗಳಿಂದಾಗಿ ಎಲ್ಲಕ್ಕಿಂತ ತುಸು ವಿಭಿನ್ನ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು, ದಿ ಜಿ.ಪುಟ್ಟಸ್ವಾಮಿಗೌಡ, ದಿ ಎಚ್.ಸಿ.ಶ್ರೀಕಂಠಯ್ಯ, ನೀರಾವರಿ ತಜ್ಞ ದಿ.ಎಚ್.ಎನ್.ನಂಜೇಗೌಡ, ಶಿವಪ್ಪ ಮೊದಲಾದ ಘಟಾನುಘಟಿ ರಾಜಕಾರಣಿಗಳನ್ನು ನೀಡಿರುವ ಜಿಲ್ಲೆಯಲ್ಲಿ ಒಬ್ಬ ಮಹಿಳೆಗೂ ರಾಜಕೀಯದಲ್ಲಿ ಮೇಲೇರಲು ಅವಕಾಶ ಮಾಡಿಕೊಟ್ಟಿಲ್ಲ. ಹಾಸನ ಲೋಕಸಭೆ ಕ್ಷೇತ್ರ ಇತಿಹಾಸ ಅವಲೋಕಿಸಿದಾಗ ಕಾಂಗ್ರೆಸ್ ಮತ್ತು ಜೆಡಿಎಸ್(ಜನತಾದಳ) ಅಭ್ಯರ್ಥಿಗಳೇ ಸಂಸತ್ ಪ್ರವೇಶ ಮಾಡಿದ್ದಾರೆ. ಬಿಜೆಪಿ ಹಿಂದಿನಿಂದಲೂ ಹೆಸರಿಗೆ ಮಾತ್ರ ಸ್ಪರ್ಧೆ ಮಾಡಿಕೊಂಡು ಬಂದಿದ್ದು, ಗೆದ್ದಿರುವ ಉದಾಹರಣೆ ಇಲ್ಲ. ಗೆಲವಿನ ಪಾಲು ಹಂಚಿಕೊಂಡಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಈವರೆಗೆ ಮಹಿಳೆಗೆ ಸ್ಪರ್ಧಿಸಲು ಮಾತ್ರ ಅವಕಾಶ ನೀಡಿಲ್ಲ. ಕಾಂಗ್ರೆಸ್ ವಿಧಾನಸಭೆ ಚುನಾವಣೆಗಳಲ್ಲಿ ಹಲವು ಬಾರಿ ಮಹಿಳೆಯರಿಗೆ ಅವಕಾಶ ನೀಡಿದೆ. ಆದರೆ, ಲೋಕಸಭೆಗೆ ಸ್ಪರ್ಧಿಸಲು ಈವರೆಗೆ ಮಹಿಳೆಗೆ ಟಿಕೆಟ್ ನೀಡಿಲ್ಲ.   




ಸುಶೀಲಾ ಶಿವಪ್ಪ ಸ್ಪರ್ಧಿಸಿದ್ದರು...
ಈವರೆಗೆ ಜಿಲ್ಲೆಯಲ್ಲಿ ರಾಜಕೀಯ ಪಕ್ಷವೊಂದು ಮಹಿಳೆಯನ್ನು ಕಣಕ್ಕಿಳಿಸಿರುವುದು ಒಂದು ಬಾರಿ ಮಾತ್ರ. ಬಿಜೆಪಿ ಹಿರಿಯ ಮುಖಂಡ ಬಿ.ಬಿ.ಶಿವಪ್ಪ ಪತ್ನಿ ಸುಶೀಲಾ ಶಿವಪ್ಪ 1998ರಲ್ಲಿ ಅಖಾಡಕ್ಕೆ ಇಳಿದಿದ್ದರು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಎಚ್.ಸಿ.ಶ್ರೀಕಂಠಯ್ಯ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಶೀಲಾ ಶಿವಪ್ಪ, 2,05,628 ಮತ ಪಡೆದಿದ್ದರು. ಅಂದು ದೇವೇಗೌಡರು 3,36,407 ಮತ ಪಡೆದು ಜಯಗಳಿಸಿದರೆ, ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಶ್ರೀಕಂಠಯ್ಯ, 3,04,753 ಮತ ಪಡೆದಿದ್ದರು. ಅದೇ ಚುನಾವಣೆಯಲ್ಲಿ ಸ್ವಂತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದ್ದ ಕೋಮಲತಾ ಎಂಬ ಮಹಿಳೆ ಕೇವಲ 718 ಮತ ಪಡೆದಿದ್ದರು. ಇದಕ್ಕೂ ಮುನ್ನ 1991ರ ಚುನಾವಣೆಯಲ್ಲೂ ಪಕ್ಷೇತರ ಅಭ್ಯರ್ಥಿಯಾಗಿಯೇ ಸ್ಪರ್ಧಿಸಿದ್ದ ಕೋಮಲತಾ 2414 ಮತ ಪಡೆದಿದ್ದರು. 1996ರ ಲೋಕಸಭೆ ಚುನಾವಣೆಯಲ್ಲೂ ಕೋಮಲತಾ ಮತ್ತೊಮ್ಮೆ ಚುನಾವಣೆ ನಿಂತು 1172 ಮತ ಪಡೆದಿದ್ದರು. ಇತ್ತೀಚಿಗೆ ಅಂದರೆ ಕಳೆದ 2009ರ ಚುನಾವಣೆಯಲ್ಲಿ ರಜನಿ ನಾರಾಯಣಗೌಡ ಮಹಿಳೆ ಸ್ವತಂತ್ರವಾಗಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ 3,556 ಮತ ಪಡೆದಿದ್ದರು. ಈ ಮೂವರು ಮಹಿಳೆಯರು ಬಿಟ್ಟಿರೆ ಬೇರ್ಯಾರು ಲೋಕಸಭೆಗೆ ಸ್ಪರ್ಧೆ ಮಾಡಿಲ್ಲ. 2014ರ ಲೋಕಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಉಷಾ ಎಂಬ ಮಹಿಳೆ ನಾಮಪತ್ರ ಸಲ್ಲಿಸಿದ್ದರು. ಆದರೆ ಆವರ ನಾಮಪತ್ರ ತಿರಸ್ಕೃತಗೊಂಡಿದೆ.



ಮಹಿಳೆಯರ ಸಂಖ್ಯೆ ಹೆಚ್ಚು...
2011ರ ಜನಗಣತಿ ಪ್ರಕಾರ ಜಿಲ್ಲೆಯ ಒಟ್ಟು 17,76,221 ಜನಸಂಖ್ಯೆ ಇದ್ದು, ಇದರಲ್ಲಿ ಪುರುಷರು 8,85,804 ಮಂದಿ
ಇದ್ದರೆ, ಮಹಿಳೆಯರ ಸಂಖ್ಯ 8,90,417.
ಆದರೆ, ಹಾಸನ ಲೋಕಸಭೆ ಇತಿಹಾಸದಲ್ಲಿ ಮಹಿಳೆ ಒಮ್ಮೆಯೂ ಸಂಸತ್ ಪ್ರವೇಶ ಮಾಡಲು ಸಾಧ್ಯವಾಗಿಲ್ಲ. ವಿಧಾನಸಭೆ ಇತಿಹಾಸದಲ್ಲಿ ಜಿಲ್ಲೆಯಿಂದ ಹಾಸನ ಕ್ಷೇತ್ರದಿಂದ ಯಶೋಧರಾ ದಾಸಪ್ಪ ಮತ್ತು ಗಂಡಸಿ ವಿಧಾನಸಭಾ ಕ್ಷೇತ್ರದಿಂದ ದೇವಮ್ಮ ಎಂಬ ಮಹಿಳೆ ತಲಾ ಒಂದು ಬಾರಿ ಶಾಸಕರಾಗಿದ್ದಾರೆ. ಅದನ್ನು ಹೊರತು ಪಡಿಸಿದರೆ ಜಿಲ್ಲೆಯಲ್ಲಿ ಮಹಿಳೆಯರಿಗೆ ರಾಜಕೀಯವಾಗಿ ಮೇಲೆ ಬರಲು ಸಾಧ್ಯವಾಗಿಲ್ಲ.
ಪ್ರಸ್ತುತ 16ನೇ ಲೋಕಸಭೆ ಚುನಾವಣೆಯಲ್ಲೂ ಹಾಸನದಿಂದ ಯಾವುದೇ ರಾಜಕೀಯ ಪಕ್ಷಗಳು ಮಹಿಳೆಗೆ ಅವಕಾಶ ನೀಡಿಲ್ಲ. ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿ ಈಗಾಗಲೇ ಪುರುಷ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ಮೂಲಕ ಈ ಬಾರಿಯೂ ಮಹಿಳೆಯರಿಗೆ ಅವಕಾಶ ನೀಡದಿರುವುದು ಬೇಸರದ ಸಂಗತಿ.
ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶವೇ ದೊರೆಯದೇ ಇದ್ದರೆ ಮಹಿಳೆ ವಿಧಾನಸಭೆ ಮತ್ತು ಲೋಕಸಭೆ ಪ್ರವೇಶ ಮಾಡುವುದು ಹೇಗೆ? ಎಂಬುದು ಜಿಲ್ಲೆಯ ಪ್ರಜ್ಞಾವಂತ ಮಹಿಳೆಯರ ಪ್ರಶ್ನೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement