ಸಕಲೇಶಪುರದಲ್ಲಿಸಿಬ್ಬಂದಿಗೆ ತರಬೇತಿ
ಸಕಲೇಶಪುರ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಟ್ಟಣದ ಸಂತ ಜೋಸೆಫರ ಶಾಲೆಯಲ್ಲಿ ಮತಗಟ್ಟೆ ಸಿಬ್ಬಂದಿಗಾಗಿ ತಾಲೂಕು ಆಡಳಿತ ವತಿಯಿಂದ ಇತ್ತೀಚೆಗೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಮತದಾನಕ್ಕಾಗಿ ಮತಗಟ್ಟೆಗಳನ್ನು ಸಜ್ಜುಗೊಳಿಸಿವ ನಿಟ್ಟಿನಲ್ಲಿ ಹಲವಾರು ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು ಅವರನ್ನು ವಿವಿಧ ಗುಂಪುಗಳಲ್ಲಿ ವಿಂಗಡಿಸಿ ತರಬೇತಿ ನೀಡಲಾಯಿತು.ಉಪ ವಿಭಾಗಾಧಿಕಾರಿ ಮಧುಕೇಶ್ವರ್ ಮಾತನಾಡಿ, ತಾಲೂಕಿನಲ್ಲಿ ಚುನಾವಣೆ ಸಂದರ್ಭದಲ್ಲಿ ಮತಗಟ್ಟೆ ಅಧಿಕಾರಿಗಳಿಗೆ ಯಾವುದೇ ರೀತಿಯ ಗೊಂದಲವಾಗಬಾರದೆಂಬ ನಿಟ್ಟಿನಲ್ಲಿ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದ್ದು, ಪ್ರತಿಯೊಬ್ಬರಿಗೂ ಚುನಾವಣೆ ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡಲಾಗುತ್ತಿದೆ ಎಂದರು. ತಾಲೂಕು ಪಂಚಾಯ್ತಿ ಅಧಿಕಾರಿ ಭಜಂತ್ರಿ , ತಹಸೀಲ್ದಾರ್ ಪಾರ್ವತಿ, ಶಿರಸ್ತೇದಾರ್ ರಮೇಶ್ ಸೇರಿದಂತೆ ಹಲವಾರು ಅಧಿಕಾರಿಗಳು ಇದ್ದರು.
ಅಂಧ ರಾಮಯ್ಯ ಬಿಜೆಪಿ ಸೇರ್ಪಡೆ
ಹಾಸನ: ಚನ್ನರಾಯಪಟ್ಟಣ ತಾಲೂಕಿನಲ್ಲಿ ಬಿಜೆಪಿ ಸದೃಢಗೊಳಿಸುವ ದೃಷ್ಟಿಯಿಂದ ರಾಜ್ಯ ಅಂಗವಿಕಲರ, ವಿಧವೆಯರ, ವಯೋವೃದ್ಧರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಂಧ ರಾಮಯ್ಯ ಪಕ್ಷಕ್ಕೆ ಸೇರ್ಪಡೆಯಾಗಿರುವುದು ಬಿಜೆಪಿಗೆ ಉತ್ತಮ ವಾತಾವರಣ ಸೃಷ್ಟಿಯಾಗಿದೆ ಎಂದು ಜಿಲ್ಲಾ ಅಧ್ಯಕ್ಷ ರೇಣುಕುಮಾರ್ ಅಭಿಪ್ರಾಯಪಟ್ಟರು. ಇಲ್ಲಿನ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಅಂಧ ರಾಮಯ್ಯ ಅವರನ್ನು ಸ್ವಾಗತಿಸಿ ಮಾತನಾಡಿದ ಅವರು, ರಾಷ್ಟ್ರದಲ್ಲಿ ಮೋದಿ ಅಲೆ ಹೆಚ್ಚಾಗಿದ್ದು ಜಿಲ್ಲೆಯಲ್ಲಿ ತ್ರಿಕೋನ ಸ್ಪರ್ಧೆ ಇದೆ. ಇಲ್ಲಿ ಈ ಬಾರಿ ಬಿಜೆಪಿ ಜಯ ಖಚಿತ ಎಂದರು. ಜಿಲ್ಲಾ ಉಪಾಧ್ಯಕ್ಷ ಭುವನೇಂದ್ರ, ನಾಗರಾಜ್, ಶೋಭಾ ಶುಭಕರನ್, ನಂಜುಂಡ ಮೈಮ್, ರಾಮು, ಮಾಸ್ತಿಗೌಡ, ಓಬಳಾಪುರ ರಂಗೇಗೌಡ, ಸಿ.ಟಿ.ಗಣೇಶ್, ಕನ್ನಡವಾಸು, ದೇವರಾಜ್ ಇದ್ದರು.
ಮತಗಟ್ಟೆ ಸಿಬ್ಬಂದಿಗೆ ಕಾರ್ಯಾಗಾರ
ಹೊಳೆನರಸೀಪುರ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತಗಟ್ಟೆ ಅಧಿಕಾರಿಗಳು ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲೂಕು ಆಡಳಿತ ವತಿಯಿಂದ ಚುನಾವಣಾ ಪೂರ್ವ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ತಾಲೂಕು ವ್ಯಾಪ್ತಿಯಲ್ಲಿ ಒಟ್ಟು 316 ಮತಗಟ್ಟೆಗಳಿದ್ದು, ಸುಮಾರು ಒಂದು ಸಾವಿರದಷ್ಟು ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಇಲ್ಲಿನ ಸಹಾಯಕ ಚುನಾವಣಾಧಿಕಾರಿ ಸುಜ್ಞಾನಮೂರ್ತಿ ತಿಳಿಸಿದರು.