ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಹೈಟೆಕ್ ನಿಲ್ದಾಣದಲ್ಲಿ ಲೋಟೆಕ್ ಸ್ಥಿತಿ!

Rashmi Kasaragodu
Updated On : 2 Apr 2014, 2:33 am

ಅ.ರಾ.ಸುಬ್ಬರಾವ್
ಅರಕಲಗೂಡು: ಕೋಟ್ಯಂತರ ರುಪಾಯಿ ವೆಚ್ಚ ಮಾಡಿ
ನಿರ್ಮಿಸಿರುವ ಪಟ್ಟಣದ ಹೈಟೆಕ್ ಬಸ್ ನಿಲ್ದಾಣಕ್ಕೆ  ಪ್ರತಿದಿನ ಬಂದು ಹೋಗುವ ಬಸ್ಸುಗಳು ನೂರಾರು.  
ತಾಲೂಕಿನಲ್ಲಿ ಅಪರೂಪ ಎಂಬಂತೆ ಎರಡು ಬಸ್ ಡಿಪೋಗಳಿದ್ದು, ಒಂದು ರಾಮನಾಥಪುರದಲ್ಲಿ ಮತ್ತೊಂದು ಅರಕಲಗೂಡು ಪಟ್ಟಣದಲ್ಲಿ ತಲೆ ಎತ್ತಿ ನಿಂತಿವೆ. ಬಹು ನಿರೀಕ್ಷತ ನೂತನ ಬಸ್ ನಿಲ್ದಾಣವೇನೋ ನಿರ್ಮಾಣವಾಯಿತು.
 ಆತುರಾತುರದಲ್ಲಿ ಉದ್ಘಾಟನೆಯೂ ಆಗಿ ಹೋಯಿತು. ಆದರೆ ಈವರೆಗೂ ಬಸ್ ನಿಲ್ದಾಣಕ್ಕೆ ಪೂರ್ಣ ಚಿತ್ರಣ ಕೊಡಲು ಸಾಧ್ಯವಾಗಿಲ್ಲ.
ಬೇಸಿಗೆಯಲ್ಲಿ ಬಸ್ ನಿಲ್ದಾಣಕ್ಕೆ ಯಾವುದಾದರೊಂದು ಬಸ್ ಬಂತೆಂದರೆ ಪ್ರಯಾಣಿಕರ ಬಣ್ಣವೇ ಬದಲಾಗಿಬಿಡುತ್ತದೆ.ನಿಲ್ದಾಣದ ತುಂಬೆಲ್ಲಾ ಧೂಳುಮಯವಾಗಿ ಬಿಡುತ್ತದೆ. ಇನ್ನು ಮಳೆಗಾಲದಲ್ಲಂತೂ ನಿಲ್ದಾಣದ ತುಂಬೆಲ್ಲಾ ಕೆಸರೋ ಕೆಸರು.
ನೂತನ ಬಸ್ ನಿಲ್ದಾಣದ  ತುಂಬೆಲ್ಲಾ ಗುಂಡಿಗಳು ಇದ್ದು,ಪ್ರಯಾಣಿಕರ ಪಾಡಂತೂ ಹೇಳತೀರದು.
ಇಲ್ಲಿನ ಶೌಚಾಲಯ ದುರವಸ್ಥೆಯಂತೂ ಹೇಳತೀರದು. ಶೌಚಾಲಯದ ಸಮೀಪಕ್ಕೆ ತೆರಳುತ್ತಿದ್ದಂತೆ ಮೂಗು ಮುಚ್ಚುವಂತಹ ವಾತಾವರಣ ಇದೆ.
ಪೊಲೀಸ್ ಔಟ್‌ಪೋಸ್ಟ್ ಅಗತ್ಯ: ಒಂದೆಡೆ ಜೇಬುಕಳ್ಳರ ಕಾಟ, ಮತ್ತೊಂದೆಡೆ ಪುಂಡರುಗಳ ಕಾಟ ಈ ನಡುವೆ ನಿರ್ಜನ ಪ್ರದೇಶದಂತೆ ಕಾಣುವ ಇಲ್ಲಿಗೆ ಒಂದು ಪೊಲೀಸ್ ಔಟ್‌ಪೋಸ್ಟ್ ನಿರ್ಮಿಸುವ ಅಗತ್ಯವಿದೆ.
ಈ ನಿಟ್ಟಿನಲ್ಲಿ ಸಾರ್ವಜನಿಕರ ಬೇಡಿಕೆಯಂತೆ ಪೊಲೀಸರು ಅಪರಾಧಗಳ ತಡೆಗಾಗಿ ಬಸ್ ನಿಲ್ದಾಣಕ್ಕೆ ಪೊಲೀಸರನ್ನು ನಿಯೋಜನೆ ಮಾಡಲು, ಬಸ್ ನಿಲ್ದಾಣದಲ್ಲಿರುವ ಕೊಠಡಿಯೊಂದನ್ನು ನೀಡುವಂತೆ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ಬೇಡಿಕೆ ಇಟ್ಟಿತ್ತಾದರೂ, ಕೇವಲ ಆದಾಯದ ಲೆಕ್ಕಾಚಾರದಲ್ಲಿ ಇರುವ ಇಲ್ಲಿನ ಅಧಿಕಾರಿಗಳು ಕೊಠಡಿ ನೀಡಲು ಆಸಕ್ತಿ ತೋರದಿರುವುದು ಪ್ರಯಾಣಿಕರ ಆಕ್ರೋಶಕ್ಕೆ  ಕಾರಣವಾಗಿದೆ. ಇನ್ನು ಮುಂದಾದರೂ ಪ್ರಯಾಣಿಕರ ರಕ್ಷಣೆ ಮತ್ತು ಮೂಲ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಸಾರಿಗೆ ಸಂಸ್ಥೆ ಅಧಿಕಾರಿಗಳು ಕ್ರಮ ಕೈಗೊಳ್ಳುವ ಅಗತ್ಯವಿದೆ.


ಜೇಬುಕಳ್ಳರ ಹಾವಳಿ
ಬಸ್ ನಿಲ್ದಾಣದಲ್ಲಿ ಬೇಬುಕಳ್ಳರ ಹಾವಳಿ ಹೆಚ್ಚಾಗಿದೆ. ಇದರ ಹಿಂದೆ ದೊಡ್ಡ ಜಾಲವೇ ಇದೆ ಎಂದರೂ ತಪ್ಪಿಲ್ಲ. ಬಸ್ ಹತ್ತಿ ಇಳಿಯುವ ವೇಳೆ ನೂಕು ನುಗ್ಗಲು ಉಂಟು ಮಾಡುವ ಕಳ್ಳರು ಪ್ರಯಾಣಿಕರ ಗಮನ ಬೇರೆಡೆ ಸೆಳೆದು, ಜೇಬು ಕಳವು ಮಾಡುವುದು ಇಲ್ಲಿ ಸಾಮಾನ್ಯವಾಗಿಬಿಟ್ಟಿದೆ.



ಪುಂಡರ ಕಾಟ
ಕಾಲೇಜು ಆರಂಭಗೊಳ್ಳುವ ಮತ್ತು ಮುಕ್ತಾಯಗೊಳ್ಳುವ ವೇಳೆಗೆ ಸರಿಯಾಗಿ ಬಸ್ ನಿಲ್ದಾಣದಲ್ಲಿ ಹಾಜರಾಗುವ ಪುಂಡು-ಪೋಕರಿಗಳು ವಿದ್ಯಾರ್ಥಿನಿಯರನ್ನು ಕೆಣಕುವ ದೃಶ್ಯ ಇಲ್ಲಿ ಸಾಮಾನ್ಯ. ಇದರಿಂದ ವಿದ್ಯಾರ್ಥಿನಿಯರು  ಸದಾ ಅಂಜಿಕೆಯಲ್ಲೇ ಇರುವ ಸ್ಥಿತಿ ಎದುರಾಗಿದೆ. ಆದರೆ ಈ ಬಗ್ಗೆ ಇಲ್ಲಿನ ಸೆಕ್ಯುರಿಟಿಗಳು ತಮ್ಮ ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement