ಕೇಂದ್ರದಲ್ಲಿ ತೃತೀಯ ರಂಗ ಅಧಿಕಾರಕ್ಕೆ
ಚನ್ನರಾಯಪಟ್ಟಣ: 10 ವರ್ಷ ದೇಶವನ್ನಾಳಿದ ಯುಪಿಎ ಸರ್ಕಾರ ಅವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದು, ಮುಂದಿನ ಬಿಜೆಪಿ ಪ್ರಧಾನಿ ನರೇಂದ್ರ ಮೋದಿ ಮುಸ್ಲಿಂ ಹಾಗೂ ರೈತ ವಿರೋಧಿಯಾಗಿರುವುದರಿಂದ ಕೇಂದ್ರದಲ್ಲಿ ತೃತೀಯ ರಂಗ ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ತಿಳಿಸಿದರು.
ತಾಲೂಕಿನ ಬಾಗೂರು ಹೋಬಳಿ ಎಂ. ಶಿವರ ಗ್ರಾಮದಲ್ಲಿ ಜೆಡಿಎಸ್ ಅಭ್ಯರ್ಥಿ ಎಚ್.ಡಿ. ದೇವೇಗೌಡ ಪರ ಪ್ರಚಾರ ಭಾಷಣದಲ್ಲಿ ಮಾತನಾಡಿ ದೇಶದ ಜನತೆಗೆ ಭ್ರಷ್ಟ ಹಾಗೂ ಸಾಮಾಜಿಕ ಕಳಕಳಿಯುಳ್ಳ ಸರ್ಕಾರದ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಜನತೆ ಕಾಂಗ್ರೆಸ್ ಹಾಗೂ ಬಿಜೆಪಿಯನ್ನು ದೂರವಿಡಲು ತೀರ್ಮಾನಿಸಿದ್ದಾರೆ ಎಂದು ತಿಳಿಸಿದರು.
ರಂಗಕ್ಕೆ ಬೆಂಬಲ: ಕಳೆದ 10 ವರ್ಷದಲ್ಲಿ ಕೇಂದ್ರದ ಯುಪಿಎ ಸರ್ಕಾರ ಸಾವಿರಾರು ಕೋಟಿ ಅವ್ಯವಹಾರದಲ್ಲಿ ತೊಡಗಿಸಿಕೊಂಡು ವಾಮಮಾರ್ಗದಲ್ಲಿ ಹಣ ಗಳಿಸುವುದೇ ತನ್ನ ಗುರಿಯಾಗಿಸಿಕೊಂಡಿದೆ. ಇನ್ನೊಂದೆಡೆ, ಬಿಜೆಪಿ ಪಕ್ಷ, ಮುಸ್ಲಿಂ ಹಾಗೂ ರೈತ ವಿರೋಧಿ ನಾಯಕ ನರೇಂದ್ರ ಮೋದಿಯನ್ನು ಪ್ರಧಾನಿ ಎಂದು ಘೋಷಣೆ ಮಾಡಿದ್ದು, ಪ್ರಜೆಗಳಿಗೆ ನಿರಾಸೆ ತಂದಿದೆ. ಮತದಾರರು ತೃತೀಯ ರಂಗವನ್ನು ಅಧಿಕಾರಕ್ಕೆ ತರಲು ಮುಂದಾಗಿದ್ದಾರೆ.
ದೇವೇಗೌಡ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಉತ್ತಮ ಹಾಗೂ ಕಳಂಕರಹಿತ ಅಧಿಕಾರ ನೀಡಿದ್ದರು. ತೃತೀಯ ರಂಗ ಅಧಿಕಾರಕ್ಕೆ ಬಂದರೆ ದೇವೇಗೌಡ ಅವರಿಗೆ ಒಂದು ಸಚಿವ ಸ್ಥಾನ ಸಿಗುವುದು ಖಚಿತವಾಗಿದ್ದು, ರಾಜ್ಯದ ಒಳಿತಿಗಾಗಿ ದೇವೇಗೌಡರನ್ನು ಬೆಂಬಲಿಸುವಂತೆ ಕೋರಿದರು.
ಮಂಜು ವಿರುದ್ಧ ಟೀಕೆ: ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಜಿಲ್ಲೆಯ ಬಗ್ಗೆ ಇದೀಗ ಕಾಳಜಿ ಹೆಚ್ಚಾಗಿದ್ದು, ಇದುವರಗೆ ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ಗೆ ಲಾಬಿಗೆ ಸ್ಕೆಚ್ ಹಾಕಿ, ಕೆಲ ಭೂಮಿಯನ್ನು ಒತ್ತುವರಿ ಮಾಡಿ ಮಾರಾಟ ಮಾಡಿರುವ ಇವರಿಗೆ ಅರಕಲಗೂಡು ತಾಲೂಕಿನಲ್ಲಿ ಯಾವ ರಸ್ತೆ ಮಾಡಿದ್ದಾರೆ. ಯಾವ ರೈತರ ಪರ ನಿಂತಿದ್ದಾರೆ. ತಮ್ಮ ವಿಧಾನಸಭಾ ಕ್ಷೇತ್ರದಲ್ಲಿಯೇ ಸಮಸ್ಯೆ ಬಗೆಹರಿಸಲಾಗದ ಇವರು ಜಿಲ್ಲೆಯ ಸಮಸ್ಯೆಯನ್ನು ಹೇಗೆ ಬಗೆಹರಿಸುತ್ತಾರೆ ಎಂದು ಟೀಕಿಸಿದರು.
ಭರವಸೆ: ಕೇಂದ್ರದಲ್ಲಿ ತೃತೀಯ ರಂಗ ಅಧಿಕಾರಕ್ಕೆ ಬರುವುದು ಖಚಿತವಾಗಿದ್ದು, ಮುಂದಿನ ದಿನಗಳಲ್ಲಿ ರೇಲ್ವೆಗೆ ಹೆಚ್ಚು ಹಣ ನೀಡಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು. ಯಗಚಿ, ಹೇಮಾವತಿ, ಹಾರಂಗಿ ವಾಟೆಹೊಳೆ ಜಲಾಶಯಗಳು ದೇವೇಗೌಡರ ಕೊಡುಗೆ ಎಂದು ತಿಳಿಸಿದರು. ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, ತಾಲೂಕಿನ ಎಲ್ಲಾ ಗ್ರಾಮಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವುದೇ ತನ್ನ ಗುರಿಯಾಗಿದ್ದು, ಹೀಗಾಗಲೇ ಸರ್ಕಾರದ ಜತೆ ಈ ಕುರಿತು ಚರ್ಚಿಸಲಾಗಿದೆ ಎಂದು ತಿಳಿಸಿದರು.
ನೀರಾವರಿಗೆ ಆದ್ಯತೆ: ಕಳೆದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ತಾಲೂಕಿನ ಜನತೆಗೆ ನೀಡಿದ ಭರವಸೆಯಂತೆ ತಾವು ಶೇ. 20ರಷ್ಟು ಕೆಲಸ ಮಾಡಿದ್ದು, ಮುಂದಿನ ದಿನಗಳಲ್ಲಿ ನೀರಾವರಿಗೆ ಹೆಚ್ಚು ಆದ್ಯತೆ ನೀಡುವುದಾಗಿ ತಿಳಿಸಿದರು.
ಹೆಚ್ಚು ಮತ: ಕಾಂಗ್ರೆಸ್ ಪಕ್ಷ ಪ್ರತಿ ಗ್ರಾಮ ಪಂಚಾಯಿತಿಗೆ 20 ಸಾವಿರ ನೀಡಿ ಕಾರ್ಯಕರ್ತರನ್ನು ಕರೆಸಿ ಸಭೆ ಸಮಾರಂಭಗಳನ್ನು ಮಾಡುತ್ತಿದೆ. ಆದರೆ, ಜೆಡಿಎಸ್ ತಾಲೂಕಿನಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯದಿಂದ ಸ್ವಯಂ ಪ್ರೇರಿತವಾಗಿ ತಮ್ಮ ಪಕ್ಷಕ್ಕೆ ಬೆಂಬಲ ನೀಡುತ್ತಿದ್ದು, ತಾಲೂಕಿನಿಂದ ದೇವೇಗೌಡರಿಗೆ 30 ಸಾವಿರ ಮತಗಳನ್ನು ಹೆಚ್ಚುವರಿಯಾಗಿ ನೀಡಲಿದ್ದಾರೆ ಎಂದು ತಿಳಿಸಿದರು.
ತಾಲೂಕು ಜನತಾದಳ ಅಧ್ಯಕ್ಷ ಪರಮ ದೇವರಾಜೇಗೌಡ, ಜಿಲ್ಲಾ ಪಂಚಾಯಿತಿ ಸದಸ್ಯ ಶಿವಶಂಕರ್ ಕಂಠೆ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ವಿಜಯಶಿವಲಿಂಗಪ್ಪ, ಜಿಪಂ ಮಾಜಿ ಸದಸ್ಯ ರಾಮಚಂದ್ರ, ತಾಲೂಕು ಪಂಚಾಯಿತಿ ಸದಸ್ಯ ಬಸವರಾಜು, ಮಾಜಿ ಉಪಾಧ್ಯಕ್ಷ ಮಂಜುನಾಥ್, ಹೇಮಾವತಿ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಂಜುನಾಥ್, ಎಪಿಎಂಸಿ ಮಾಜಿ ಅಧ್ಯಕ್ಷ ತಿಮ್ಮೇಗೌಡ ಇದ್ದರು.