ದಲಿತರ ಸ್ವಾಭಿಮಾನಿ ಸಮಾವೇಶ 8ರಂದು
ಹಾಸನ: ಬಿಜೆಪಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಘಟಕದಿಂದ ಏ. 8ರಂದು ದಲಿತರ ಸ್ವಾಭಿಮಾನಿ ಸಮಾವೇಶ ನಡೆಯಲಿದೆ ಎಂದು ಬಿಜೆಪಿ ಎಸ್ಸಿ, ಎಸ್ಟಿ ಜಿಲ್ಲಾ ಘಟಕದ ಅಧ್ಯಕ್ಷ ಪರ್ವತಯ್ಯ ಹೇಳಿದರು.
ನಗರದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಸಮಾವೇಶ ಹಮ್ಮಿಕೊಂಡಿದ್ದು, ಬಿಜೆಪಿ ಅಭ್ಯರ್ಥಿ ವಿಜಯಶಂಕರ್, ಪಕ್ಷದ ಜಿಲ್ಲಾಧ್ಯಕ್ಷ ಬೆಣ್ಣೂರು ರೇಣುಕುಮಾರ್, ಜಿಲ್ಲಾ ಚುನಾವಣಾ ಉಸ್ತುವಾರಿ ಅಶ್ವತ್ಥ್ ನಾರಾಯಣ ಭಾಗವಹಿಸಲಿದ್ದಾರೆ. 3 ಸಾವಿರಕ್ಕೂ ಅಧಿಕ ಮಂದಿ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕಾಂಗ್ರೆಸನ್ನು, ಕಳೆದ 50 ವರ್ಷದಿಂದ ದಲಿತರು ಬೆಂಬಲಿಸಿದ್ದು, ಕೇವಲ ಓಟನ್ನು ಹಾಕಿಸಿಕೊಳ್ಳಲು ಮಾತ್ರ ದಲಿತ ವರ್ಗವನ್ನು ಕಾಂಗ್ರೆಸ್ ಬಳಸಿಕೊಂಡಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಡಾ.ಜಿ. ಪರಮೇಶ್ವರ್ ಅವರನ್ನು ಒಳಸಂಚಿನ ಮೂಲಕ ಸೋಲಿಸಿದ ಕಾಂಗ್ರೆಸ್, ದಲಿತನೊಬ್ಬ ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಿದೆ ಎಂದು ದೂರಿದರು.
ಧನ ಸಹಾಯ: ಬಿಜೆಪಿ ಸರ್ಕಾರ ದಲಿತ ಸಮುದಾಯಗಳಿಗೆ ಹೆಚ್ಚಿನ ಸವಲತ್ತು ನೀಡಿದೆ. ಜಿಲ್ಲಾ ಕೇಂದ್ರಗಳಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ರು. 5 ಕೋಟಿ, ತಾಲೂಕು ಕೇಂದ್ರಗಳಿಗೆ ರು. 1 ಕೋಟಿ ಹಾಗೂ ಗ್ರಾಮಗಳಿಗೆ ರು. 10 ಲಕ್ಷ ಹಣ ನೀಡಿದೆ ಎಂದು ಹೇಳಿದರು. ಬಿಜೆಪಿ ಎಸ್ಸಿ- ಎಸ್ಟಿ ವಿಭಾಗದ ಉಪಾಧ್ಯಕ್ಷ ಡಾ. ನಾರಾಯಣಸ್ವಾಮಿ, ಮುಖಂಡ ನಿರ್ವಾಣಯ್ಯ, ಜಯಶಂಕರ್, ಆನಂದ್, ಬಾಲಚಂದನ್ ಹಾಗೂ ಇತರರು ಇದ್ದರು.