ಮುಸ್ಲಿಮರಿಗೆ ಗೌಡರ ಕೊಡುಗೆ ಅಪಾರ: ಶಂಕರ್
ಹಾಸನ: ಮುಸ್ಲಿಂ ಜನಾಂಗದ ಕಲ್ಯಾಣಕ್ಕೆ ದೇವೇಗೌಡ ಸಾಕಷ್ಟು ಕೊಡುಗೆ ನೀಡಿದ್ದು, ರಾಜಕೀಯ ಮೀಸಲಾತಿ ಜೊತೆಗೆ ಸಾಮಾಜಿಕವಾಗಿಯೂ ಅಲ್ಪಸಂಖ್ಯಾತರ ಏಳಿಗೆಗೆ ಶ್ರಮಿಸಿದ್ದಾರೆ ಎಂದು ನಗರಸಭೆ ಮಾಜಿ ಅಧ್ಯಕ್ಷ ಸಯ್ಯದ್ ಅಕ್ಬರ್ ಹೇಳಿದ್ದಾರೆ.
ಎಲ್ಲೆಡೆ ಶಾದಿ ಮಹಲ್ಗಳು ನಿರ್ಮಾಣವಾಗಲು ದೇವೇಗೌಡ ಕಾರಣವಾಗಿದ್ದು, ಅಲ್ಪಸಂಖ್ಯಾತರು ಗೌಡರಿಗೆ ಬೆಂಬಲ ನೀಡಲಿದ್ದಾರೆ ಎಂದು ವಿಶ್ವಾಸವನ್ನು ಬುಧವಾರ ಸುದ್ದಿಗೋಷ್ಠಿಯಲ್ಲಿ ವ್ಯಕ್ತಪಡಿಸಿದರು.
ಮತ್ತೊಬ್ಬ ನಗರಸಭೆ ಮಾಜಿ ಅಧ್ಯಕ್ಷ ಸಿ.ಆರ್. ಶಂಕರ್ ಮಾತನಾಡಿ, ದೇವೇಗೌಡರು ಹೆಚ್ಚಿನ ಮತಗಳನ್ನು ಪಡೆದು ಗೆಲುವು ಸಾಧಿಸಲಿದ್ದು, ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾರಿಗೆ ರಾಜಕೀಯ ಮೀಸಲಾತಿ ದೊರೆಯಲು ದೇವೇಗೌಡ ಕಾರಣ. ಅದರಲ್ಲೂ ಅಲ್ಪಸಂಖ್ಯಾತರಿಗೆ ಶೇ. 4ರಷ್ಟು ಮೀಸಲಾತಿ ನೀಡುವ ಮೂಲಕ ಅವರ ಏಳಿಗೆಗೆ ಸಾಕಷ್ಟು ಶ್ರಮಿಸಿದ್ದಾರೆ ಎಂದರು.
ಹೆಚ್ಚು ಮತ: ಜಿಲ್ಲೆಯಲ್ಲಿ ಒಂದಿಷ್ಟು ಅಭಿವೃದ್ಧಿ ಕೆಲಸಗಳು ನಡೆದಿದ್ದರೆ ಅದಕ್ಕೆ ದೇವೇಗೌಡ ಕಾರಣ ಎಂಬುದನ್ನು ಯಾರು ಮರೆಯುವಂತಿಲ್ಲ ಎಂದ ಅವರು, ನಗರದಲ್ಲಿ ಕಳೆದೆಲ್ಲ ಚುನಾವಣೆಗಳಲ್ಲಿ ಜೆಡಿಎಸ್ ಬೇರೆ ಪಕ್ಷಗಳಿಗಿಂತ ಕಡಿಮೆ ಮತ ಪಡೆದಿದೆ. ಆದರೆ, ಈ ಬಾರಿ ಬೇರೆ ಪಕ್ಷಗಳಿಂದ ಹೆಚ್ಚಿನ ಮತಗಳನ್ನು ಜೆಡಿಎಸ್ಗೆ ದೊರೆಯಲಿವೆ ಎಂದರು.
ಮಾಜಿ ಪ್ರಧಾನಿಯಂತ ಮುತ್ಸದ್ದಿ ರಾಜಕಾರಣಿಯನ್ನು ಜಿಲ್ಲೆಯ ಜನ ಕೈಬಿಡುವುದಿಲ್ಲ. ಈ ಬಾರಿ ಸಂಸತ್ ಪ್ರವೇಶ ಮಾಡುವ ದೇವೇಗೌಡ ಜಿಲ್ಲೆಗೆ ಮತ್ತಷ್ಟು ಕೊಡುಗೆ ನೀಡಲಿದ್ದಾರೆ ಎಂದು ಹೇಳಿದರು.
ನಗರಸಭೆ ಅಧ್ಯಕ್ಷೆ ಶ್ರೀವಿದ್ಯಾ, ಸದಸ್ಯ ಡಾ.ಎಚ್.ಎಸ್. ಅನಿಲ್ ಕುಮಾರ್, ಮಾಜಿ ಸದಸ್ಯ ರವಿಶಂಕರ್ ಹಾಗೂ ಇತರರು ಇದ್ದರು.