ರಥೋತ್ಸವದ ಹಿನ್ನೆಲೆ: ಸುಂಕ ವಸೂಲಿ ಮಾಡದಂತೆ ತೀರ್ಮಾನ
ಬೇಲೂರು: ಶ್ರೀಚನ್ನಕೇಶವ ಸ್ವಾಮಿ ರಥೋತ್ಸವದ ಹಿನ್ನಲೆಯಲ್ಲಿ ಕಳೆದ ವರ್ಷದಂತೆ ಈ ವರ್ಷವೂ ಸಹ ವ್ಯಾಪಾರಿಗಳಿಂದ ಸುಂಕ ವಸೂಲಿ ಮಾಡದಂತೆ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಪುರಸಭೆ ಅಧ್ಯಕ್ಷ ಬಿ. ಗಿರೀಶ್ ತಿಳಿಸಿದರು.
ಚನ್ನಕೇಶವಸ್ವಾಮಿ ರಥೋತ್ಸವ ಹಿನ್ನೆಲೆಯಲ್ಲಿ ಮಂಗಳವಾರ ಸ್ಥಳ ಪರಿಶೀಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವ್ಯಾಪಾರಿಗಳು ವ್ಯಾಪಾರಿ ಕಟ್ಟೆಗಳನ್ನು ಪಡೆದು ಬೇರೆಯವರಿಗೆ ಮಾರಾಟ ಮಾಡುವುದು ತಿಳಿದರೆ ಅಂತಹವರ ಮೇಲೆ ಕ್ರಮ ಕೈಗೊಳ್ಳ ಲಾಗುವುದು ಮತ್ತು ವ್ಯಾಪಾರಸ್ಥರಿಂದ ಅಕ್ರಮವಾಗಿ ಸುಂಕ ವಸೂಲಿ ಮಾಡಿದ್ದು ತಿಳಿದರೂ ಅಂತಹವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಸ್ವಚ್ಛತೆಗೆ ಕ್ರಮ: ದೇವಸ್ಥಾನ ವ್ಯವಸ್ಥಾಪನಾ ಸಮಿತಿ ತೀರ್ಮಾನದಂತೆ ದೇವಾಲಯ ರಸ್ತೆಯ ವೈಕುಂಠ ಬೀದಿಯ ತಿರುವಿನ ನಂತರ ವ್ಯಾಪಾರಿಗಳಿಗೆ ಸ್ಥಳಾವಕಾಶ ಮಾಡಿಕೊಡಲಾಗುತ್ತಿದೆ. ರಥೋತ್ಸವ ಹಾಗೂ ಇನ್ನಿತರ ಉತ್ಸವಗಳಿಗೆ ತೊಂದರೆಯಾಗದಂತೆ ಈ ಕ್ರಮ ಕೈಗೊಳ್ಳಲಾಗಿದೆ. ಉತ್ಸವ ಆಗಮಿಸುವ ರಸ್ತೆಯಲ್ಲಿ ನೀರನ್ನು ಹಾಕುವ ಹಾಗು ಸ್ವಚ್ಛತೆ ಕಾಪಾಡುವ ಕೆಲಸವನ್ನು ಪುರಸಭೆಯಿಂದ ಕೈಗೊಳ್ಳಲಾಗುವುದು ಎಂದರು. ನಂತರ ಮಾತನಾಡಿದ ಮುಖ್ಯಾಧಿಕಾರಿ ಬಸವರಾಜು, ಭಕ್ತರ ಸ್ನಾನಕ್ಕಾಗಿ ವಿಷ್ಣುಸಮುದ್ರ ಕೆರೆ ಬಳಿ ಇರುವ ಕಲ್ಯಾಣಿ ಹಾಗೂ ದೇವಸ್ಥಾನ ಸಮೀಪ ಕೆಲವು ಸ್ಥಳದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು. ಇದಕ್ಕಾಗಿ ಇಂದು ಹೊಸದಾಗಿ ಬಂದಿರುವ ಕುಡಿಯುವ ನೀರಿನ ಟ್ಯಾಂಕರ್‌ಗಳನ್ನು ಮೀಸಲಿಡಲಾಗುವುದು ಎಂದು ತಿಳಿಸಿದರು.
ಈ ವೇಳೆ ಚನ್ನಕೇಶವ ದೇಗುಲ ಇಓ ಗುರುಪ್ರಸಾದ್, ಪುರಸಭೆ ಸದಸ್ಯರಾದ ಶ್ರೀನಿಧಿ, ಸತೀಶ್, ಆರೋಗ್ಯಧಿಕಾರಿ ವೆಂಕಟೇಶ್, ನಾಗರಾಜ್ ಇದ್ದರು.