ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಲಕ್ಷಾಂತರ ಜಲಚರಗಳ ಸಾವು

Rashmi Kasaragodu
Updated On : 3 Apr 2014, 12:48 pm

ಹೆತ್ತೂರು (ಸಕಲೇಶಪುರ ತಾ.):
ಪಶ್ಚಿಮಘಟ್ಟದ ಬಿಸಲೆ ಅರಣ್ಯದ ಗಿರಿಹೊಳೆಗೆ ದುಷ್ಕರ್ಮಿಗಳು ಕೀಟನಾಶಕ ಬೆರೆಸಿದ್ದ ರಿಂದಾಗಿ ಲಕ್ಷಾಂತರ ಜಲಚರಗಳು ಮರಣ ಹೊಂದಿರುವ ಘಟನೆ ಇತ್ತೀಚೆಗೆ ಸಂಭವಿಸಿದೆ.
ಮೀನು ಹಿಡಿಯುವ ಉದ್ದೇಶದಿಂದ ಕೊಡಗು ಮೂಲಕ ಬಂದಿರುವ ದುಷ್ಕರ್ಮಿಗಳು ಕೀಟನಾಶಕವನ್ನು ಹೊಳೆಗೆ ಬೆರೆಸಿದ್ದರಿಂದಾಗಿ ಸುಮಾರು 2 ಕಿ.ಮೀ. ಉದ್ದಕ್ಕೂ ಕೀಟನಾಶಕ  ಮಿಶ್ರಣಗೊಂಡು ಜಲಚರಗಳು ಮರಣಹೊಂದಿವೆ.
ಹೊಳೆಯ ಹಾದಿ: ಹಾಸನ ಜಿಲ್ಲೆ ಹಾಗೂ ಕೊಡಗು ಜಿಲ್ಲೆಗೆ ಹೊಂದಿಕೊಂಡಿರುವ ಗಿರಿಹೊಳೆಯಲ್ಲಿ ಸಿಹಿ ನೀರು  ಹರಿಯುತ್ತದೆ. ಗುಳಗ, ಹಿರುಗ್ಲು, ಕಲ್ ಚೂಟ್, ಬುಲ್ರೇ, ಹರ್ಜ, ಕುಂಬಾರ್ತಿ, ಏಡಿ ಹಾಗೂ ಹಾವುಗಳು ಈ ಹೊಳೆಯಲ್ಲಿ ಹೆಚ್ಚಾಗಿ ಕಾಣಸಿಗುತ್ತವೆ. ಇದಕ್ಕೆ ಹೊಳೆಯಲ್ಲಿ ಹರಿಯುವ ಸಿಹಿ ನೀರೇ ಮುಖ್ಯಕಾರಣ.
ಸುಬ್ರಹ್ಮಣ್ಯ ಪುಣ್ಯ ಕ್ಷೇತ್ರದ ಕುಮಾರ ಧಾರೆ ನದಿಗೆ ಈ ನೀರು ಸೇರುತ್ತದೆ. ಪುಣ್ಯ ಕ್ಷೇತ್ರಕ್ಕೆ  ಬರುವ ಲಕ್ಷಾಂತರ ಭಕ್ತಾದಿಗಳು ಈ ನೀರಿನಲ್ಲಿ ಸ್ನಾನ ಮಾಡಿ, ದೇವರ ದರ್ಶನ  ಪಡೆಯುತ್ತಾರೆ. ಹೆತ್ತೂರು ಹೋಬಳಿಯ ಪಶ್ಚಿಮ ಘಟ್ಟದ ಅಡ್ಡಹೊಳೆ, ಗಿರಿ ಹೊಳೆಗಳು ಬಿಸಲೆ ರಕ್ಷಿತಾರಣ್ಯದಲ್ಲಿ ಪ್ರಮುಖ ಹೊಳೆಗಳಾಗಿವೆ.
ಈ ಹೊಳೆಗಳು ಪಶ್ಚಿಮಾಭಿಮುಖವಾಗಿ ಹರಿದು, ಕುಮಾರ ಧಾರೆ ಮೂಲಕ ಅರಬ್ಬಿ ಸಮುದ್ರ ಸೇರುತ್ತದೆ. ಸಮುದ್ರದ ಉಪ್ಪು ನೀರಿನ ದೆಸೆಯಿಂದಾಗಿ ಅಸಂಖ್ಯಾತ ಮೀನುಗಳು ಸಿಹಿ ನೀರನ್ನು ಅರಸಿ ಗಿರಿ ಹೊಳೆಗೆ ಬರುತ್ತವೆ. ಹೀಗೆ ಬಂದ ಮೀನುಗಳಿಗೆ ಬಲೆ ಮತ್ತು ಗಾಳ ಹಾಕಿ  ಹಿಡಿಯುವುದು ಮಾಮೂಲಿ.
ಎಲ್ಲರಿಗೂ ತೊಂದರೆ: ಕಿಡಿಗೇಡಿಗಳು ಬಲೆ, ಗಾಳ ಬಳಸುವುದನ್ನು ಬಿಟ್ಟು ಕ್ರಿಮಿನಾಶಕ ಬೆರೆಸುವ ಕುಕೃತ್ಯಕ್ಕೆ ಕೈ ಹಾಕಿದ್ದಾರೆ. ಹೀಗೆ, ಕ್ರಿಮಿನಾಶಕ ಬಳಸಿರುವುದರಿಂದ ಕೇವಲ ಜಲಚರಗಳಿಗಷ್ಟೇ ಅಲ್ಲ, ಕುಮಾರಧಾರೆಯಲ್ಲಿ ಸ್ನಾನ ಮಾಡುವ ಭಕ್ತರೂ ಆ ನೀರನ್ನು ಸೇವಿಸಿ ಪ್ರಾಣಾಪಾಯಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚಿರುತ್ತದೆ. ಕೇವಲ ನಾಲ್ಕೈದು ಕೆ.ಜಿ. ಮೀನಿಗಾಗಿ ಲಕ್ಷಾಂತರ ಜಲಚರಗಳನ್ನು ಕೊಂದಿರುವುದು ದುರದೃಷ್ಟಕರ ಸಂಗತಿ. ಅಷ್ಟೇ ಅಲ್ಲ, ಈ ವಿಷಪೂರಿತ ಮೀನನ್ನು ಸೇವಿಸಿದವರೂ ಅನಾರೋಗ್ಯಕ್ಕೆ ಈಡಾಗುವ ಸಂಭವ ಇರುತ್ತದೆ. ಅರಣ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement