ಸಂಹಿತೆ ಕಟ್ಟುನಿಟ್ಟಿಗೆ ಡಿಸಿ ಸೂತ್ರ
ಹಾಸನ: ಮಾದರಿ ನೀತಿ ಸಂಹಿತೆಯನ್ನು ಜಿಲ್ಲಾದ್ಯಂತ ಪರಿಣಾಮಕಾರಿಯಾಗಿ ಜಾರಿಗೆ ತರಲು ಜಿಲ್ಲಾಮಟ್ಟದಲ್ಲಿ ಒಂದು ತಂಡ ಹಾಗೂ ಆಯಾ ತಾಲ್ಲೂಕು ಮಟ್ಟಗಳಲ್ಲಿ ತಾಲ್ಲೂಕುವಾರು ಹಾಗೂ ಹೋಬಳಿ ಮಟ್ಟದಲ್ಲಿ ಫ್ಲೈಯಿಂಗ್ ಸ್ಕ್ವಾಡ್ಸ್ ಮತ್ತು ಎಂಸಿಸಿ ತಂಡಗಳನ್ನು ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ತಿಳಿಸಿದ್ದಾರೆ.
ಈವರೆಗೆ ಈ ತಂಡಗಳ ಮುಖೇನ 13 ಪ್ರಕರಣಗಳನ್ನು ದಾಖಲಿಸಲಾಗಿದೆ. ಇವುಗಳಲ್ಲಿ ಪೈಕಿ 10 ಪ್ರಕರಣಗಳಿಗೆ ಎಫ್ಐಆರ್ ದಾಖಲಿಸಲಾಗಿದ್ದು, ಪ್ರಕರಣಗಳ ವಿವರಗಳನ್ನು ಈ ಕೂಡ ಲಗತ್ತಿಸಿದೆ. ಜಿಲ್ಲೆಯಲ್ಲಿ ಈವರೆಗೆ 335 ಕಡೆ ದಾಳಿ ಮಾಡಿ 57 ಜನಗಳನ್ನು ದಸ್ತಗಿರಿ ಮಾಡಿ 46.820 ಲೀಟರ್ ಅಕ್ರಮ ಮದ್ಯ ಹಾಗೂ ಒಂದು ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
ಏಕಗವಾಕ್ಷಿ: ಸಾಂಸ್ಕೃತಿಕ, ಕ್ರೀಡೆ, ಜಾತ್ರೆ, ಉತ್ಸವ ಇತ್ಯಾದಿಗಳಿಗೆ ಸಹಾಯಕ ಚುನಾವಣಾಧಿಕಾರಿಗಳ ಮಟ್ಟದಲ್ಲೇ ಅನುಮತಿ ನೀಡಲು ಅವಕಾಶ ಕಲ್ಪಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ರಾಜಕೀಯ ಸಭೆಗಳಿಗೆ ವಾಹನ ಪರವಾನಗಿ ನೀಡಲು ಕಂಟ್ರೋಲ್ ರೂಮ್ನಲ್ಲಿ ಏಕಗವಾಕ್ಷಿ ಪದ್ಧತಿ ವ್ಯವಸ್ಥೆ ಮಾಡಲಾಗಿದೆ. ಅಕ್ರಮ ಹಣ ಸಾಗಾಣಿಕೆ ಮತ್ತು ವ್ಯವಹಾರವನ್ನು ಪತ್ತೆ ಹಚ್ಚುವ ತಂಡದಲ್ಲಿ, ಜಿಲ್ಲಾಮಟ್ಟದಲ್ಲಿ ಅಕ್ರಮ ಹಣ ಸಾಗಾಣಿಕೆ, ವ್ಯವಹಾರ ಪತ್ತೆ ಹಚ್ಚುವ ಸಂಬಂಧ 7 ಜನ ಅಧಿಕಾರಿಗಳು ಇರುತ್ತಾರೆ. ಈ ತಂಡವು ಯಾವುದೇ ದಾಖಲೆಗಳು ಇಲ್ಲದೇ ಸಾಗಾಣಿಕೆ ಮಾಡುತ್ತಿದ್ದ ರು. 3,40,060 ಮೊತ್ತ ಪತ್ತೆ ಹಚ್ಚಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದರು.
ಸೆಕ್ಟರ್ ಅಧಿಕಾರಿಗಳ ತಂಡ: ಪ್ರತಿ 8- 10 ಮತಗಟ್ಟೆಗಳಿಗೆ ಒಬ್ಬರಂತೆ ಜಿಲ್ಲೆಯಾದ್ಯಂತ ಎಲ್ಲಾ ಮತಗಟ್ಟೆಗಳಿಗೆ ಒಟ್ಟು 206 ಸೆಕ್ಟರ್ ಅಧಿಕಾರಿಗಳನ್ನು ನೇಮಕಾತಿ ಮಾಡಿ ಅವರಿಗೆ ಮ್ಯಾಜಿಸ್ಟ್ರೇಟ್ ಅಧಿಕಾರ ಚಲಾಯಿಸಲು ಒಳಾಡಳಿತ ಇಲಾಖೆಯ ಅನುಮತಿ ಪಡೆದು, ಈ ತಂಡಗಳಿಗೆ ವಿಶೇಷ ಅಧಿಕಾರ ನೀಡಲಾಗಿದೆ.
ಕಣ್ಗಾವಲು ಪಡೆ: ಜಿಲ್ಲಾ ಗಡಿ ಮತ್ತು ಆಯಕಟ್ಟಿನ ಪ್ರದೇಶಗಳಲ್ಲಿನ 10 ಪ್ರತಿ ಚೆಕ್ ಪೋಸ್ಟ್ಗಳಲ್ಲಿಯೂ ಕಟ್ಟುನಿಟ್ಟಿನ ಎಚ್ಚರಿಕೆಯ ದೃಷ್ಟಿಯಿಂದ ಕಣ್ಗಾವಲು ಪಡೆಯನ್ನು ರಚಿಸಲಾಗಿದೆ. ಈ ತಂಡಗಳು ಪ್ರತಿ ಚೆಕ್ಪೋಸ್ಟ್ಗಳಲ್ಲೂ ಕಾರ್ಯನಿರ್ವಹಿಸುತ್ತದೆ.
ವೀಡಿಯೋ ವೀಕ್ಷಕರ ತಂಡ: ತಾಲ್ಲೂಕು ಮಟ್ಟದಲ್ಲಿ ಕರ್ತವ್ಯ ನಿರ್ವಹಿಸಲು ವೀಡಿಯೋ ವೀಕ್ಷಕ ತಂಡವನ್ನು ಪ್ರತಿ ವಿಧಾನ ಸಭಾ ಕೇತ್ರಕ್ಕೂ 3 ಜನ ಅಧಿಕಾರಿಗಳಂತೆ ಹಾಗೂ ಆಲೂರು ತಾಲೂಕಿಗೆ 2 ಜನರಂತೆ ಒಟ್ಟು 23 ಜನ ಅಧಿಕಾರಿಗಳ ತಂಡವನ್ನು ರಚಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್ ಮಾತನಾಡಿ, ನಗರದಲ್ಲಿನ ಚೆಕ್ ಪೋಸ್ಟ್ಗಳನ್ನು ಹೊರತುಪಡಿಸಿ, ಜಿಲ್ಲೆಯಲ್ಲಿ ಒಟ್ಟು 10 ಚೆಕ್ಪೋಸ್ಟ್ಗಳು ಕಾರ್ಯನಿರ್ವಹಿಸುತ್ತಿವೆ. ಬಂದೂಕುಗಳನ್ನು ಹೊಂದಿರುವವರು ಜಿಲ್ಲಾಡಳಿತದ ವಶಕ್ಕೆ ನೀಡುವಂತೆ ಸೂಚನೆ ನೀಡಲಾಗಿದೆ.ಅತೀ ಅವಶ್ಯಕತೆ ಇರುವ ಕಡೆಗೆ ಬಂದೂಕನನ್ನು ಇಟ್ಟುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದರು. ಒಟ್ಟಾರೆಯಾಗಿ, ಚುನಾವಣೆಗೆ ಜಿಲ್ಲೆಯಿಂದ 1500 ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಿಕೊಳ್ಳಲಾಗಿದ್ದು, ಹೆಚ್ಚುವರಿ ಭದ್ರತಾ ವ್ಯವಸ್ಥೆ ಹೊರರಾಜ್ಯದಿಂದ ಬಂದಿದೆ ಎಂದು ತಿಳಿಸಿದರು.
ಮತದಾನ ಸಿಬ್ಬಂದಿ ತಂಡಗಳ ರಚನೆ
ಸುವ್ಯವಸ್ಥಿತ ಮತದಾನಕ್ಕಾಗಿ ಪ್ರತಿ ಮತಗಟ್ಟೆಗೆ 1 ಅಧ್ಯಕ್ಷಾಧಿಕಾರಿ ಹಾಗೂ 3 ಮತದಾನಾಧಿಕಾರಿಗಳನ್ನು ನೇಮಿಸಲಾಗುವುದು. ಜಿಲ್ಲೆಯ 1960 ಮತಗಟ್ಟೆಗಳಿಗೆ ಮೀಸಲು (ಶೇ.10 ಸೇರಿದಂತೆ-196) 2156 ತಂಡಗಳನ್ನು ರಚಿಸಲಾಗಿದೆ. ಈಗಾಗಲೇ ಮಾ.30 ರಂದು ಮೊದಲನೇ ತರಬೇತಿಯನ್ನು ಪಿಆರ್ಓ, ಎಪಿಆರ್ಓ ಗಳಿಗೆ ಆಯಾ ತಾಲ್ಲೂಕು ಮಟ್ಟದಲ್ಲಿ ನೀಡಲಾಗಿದೆ. 2ನೇ ತರಬೇತಿಯನ್ನು ಏ. 10ರಂದು ಆಯಾ ವಿಧಾನಸಭಾ ಕ್ಷೇತ್ರವಾರು ನೀಡಲು ಯೋಜಿಸಲಾಗಿದೆ. ಏ. 16ರಂದು ಆಯಾ ವಿಧಾನ ಸಭಾ ಕ್ಷೇತ್ರಗಳಲ್ಲಿ ಮಸ್ಟರಿಂಗ್ ಅಂದರೆ ಎಲ್ಲಾ ಮತದಾನ ತಂಡಗಳಿಗೆ ಆಯಾ ಮತಗಟ್ಟೆಗಳಿಗೆ ಸಂಬಂಧಿಸಿದ ಮತದಾನದ ಸಾಮಗ್ರಿಗಳನ್ನು ವಿತರಿಸುವ ವ್ಯವಸ್ಥೆ ಮಾಡಲಾಗುವುದು ಎಂದು ವಿ. ಅನ್ಬುಕುಮಾರ್ ತಿಳಿಸಿದರು.
ಮತದಾನ ಬಹಿಷ್ಕಾರ ಬೇಡ
ಈ ಬಾರಿ ಚುನಾವಣೆಯಲ್ಲಿ ಯಾವುದೇ ಪ್ರದೇಶದಲ್ಲಿ ಮತದಾನ ಬಹಿಷ್ಕಾರದಂತಹ ಪ್ರಕರಣಗಳು ನಡೆಯಬಾರದು ಎಂದು ಅಧಿಕಾರಿಗಳಿಗೆ ತಿಳಿಸಿರುವುದಾಗಿ ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್ ತಿಳಿಸಿದ್ದಾರೆ. ಮತದಾನ ಬಹಿಷ್ಕರಿಸುವುದಾಗಿ ತಿಳಿಸಿದ್ದ ಕೆಲ ಪ್ರದೇಶಗಳಿಗೆ ನಮ್ಮ ಅಧಿಕಾರಿಗಳನ್ನು ಕಳುಹಿಸಿ ಪರಿಶೀಲಿಸುವಂತೆ ಸೂಚಿಸಲಾಗಿದೆ ಎಂದ ಅವರು, ಒಟ್ಟಾರೆಯಾಗಿ 11 ಸಾವಿರ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ ಎಂದರು.