ಕುಡಿಯುವ ನೀರಿಗಾಗಿ ಗ್ರಾಮ ಪಂಚಾಯ್ತಿಗೆ ಮುತ್ತಿಗೆ
ಆಲೂರು: ಕುಡಿಯುವ ನೀರನ್ನು ಸಮರ್ಪಕವಾಗಿ ನೀಡುವಂತೆ ಆಗ್ರಹಿಸಿ ಪಾಳ್ಯ ಗ್ರಾಮ ಪಂಚಾಯ್ತಿಗೆ ಗ್ರಾಮಸ್ಥರು ಮುತ್ತಿಗೆ ಹಾಕಿ ಖಾಲಿ ಕೊಡ ಪ್ರದರ್ಶಿಸುವ ಮೂಲಕ ಗುರುವಾರ ಪ್ರತಿಭಟಿಸಿದರು.
ಆಲೂರು ತಾಲ್ಲೂಕಿನ ಪಾಳ್ಯ ಹೋಬಳಿ ಸಿಂಗೋಡನಹಳ್ಳಿ, ಹೊಸಕೊಪ್ಪಲು ಗ್ರಾಮದಲ್ಲಿ ಕಳೆದ ಒಂದು ವರ್ಷದಿಂದಲೂ ಕುಡಿಯುವ ನೀರು ಬರದೆ ಜನತೆಗೆ ತೀವ್ರ ತೊಂದರೆ ಉಂಟಾಗಿದೆ. ಅನೇಕ ಬಾರಿ ನೀರಿನ ಸಮಸ್ಯೆ ಬಗ್ಗೆ ಗ್ರಾಮ ಪಂಚಾಯಿತಿಗೆ ತಿಳಿಸಲಾಗಿದ್ದರೂ ಗಮನ ನೀಡಿರುವುದಿಲ್ಲ ಎಂದು ದೂರಿದರು.
ನೀರಿನ ದಾಹ ತೀರಿಸಿಕೊಳ್ಳಲು ನಾವುಗಳು ಹಣ ನೀಡಿ ನೀರನ್ನು ತರಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ನೀರಿನ ಸಮಸ್ಯೆಯನ್ನು ಸರಿಪಡಿಸಿ ಇಲ್ಲವಾದರೇ ಜಿಲ್ಲಾಧಿಕಾರಿಗಳಿಗೂ ವರದಿ ನೀಡುವುದಾಗಿ ಎಚ್ಚರಿಸಿದರು. ಇದೇ ವೇಳೆ ಮಹಿಳೆಯರು ಹಾಗೂ ಪುರುಷರು ಖಾಲಿ ಕೊಡವನ್ನು ಗ್ರಾಪಂ ಕಚೇರಿ ಮುಂದೆ ಪ್ರದರ್ಶಿಸಿದರು.ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ನಾಗರಾಜೇಗೌಡ, ಯೋಗೀಶ್, ಕೃಷ್ಣೇಗೌಡ, ಯೋಗ, ರಮೇಶ್, ಹೊಂಬೇಗೌಡ, ದಿನೇಶ್, ಪಾಪು ಇತರರು ಇದ್ದರು.