ನನ್ನನ್ನು ಭೇಟಿ ಮಾಡಿ ಪ್ರಚಾರ ಮಾಡಿ ಎಂದು ಕೇಳಿಲ್ಲ
ಅರಸೀಕೆರೆ: ತಾಲೂಕಿನಲ್ಲಿ ಬಿಜೆಪಿಯನ್ನು ತಳಮಟ್ಟದಿಂದ ಸಂಘಟಿಸಿ ಕಟ್ಟಿ ಬೆಳೆಸಿದ ಹಿರಿಯ ಮುಖಂಡರು ಸೇರಿದಂತೆ ತಮ್ಮನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಮಾಜಿ ಶಾಸಕ ಎ.ಎಸ್.ಬಸವರಾಜ್ ಬೇಸರ ವ್ಯಕ್ತಪಡಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭಗೊಂಡಿದ್ದರೂ ಇದುವರೆಗೆ ಪಕ್ಷದ ಅಭ್ಯರ್ಥಿ ಸೇರಿದಂತೆ ಯಾಮೊಬ್ಬ ಮುಖಂಡರು ತಮ್ಮನ್ನು ಭೇಟಿ ಮಾಡಿ ಪ್ರಚಾರ ನಡೆಸುವಂತೆ ಕೇಳಿಕೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸ್ವಯಂಪ್ರೇರಿತ ಪ್ರಚಾರ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಮೇಲಿರುವ ಅಭಿಮಾನ, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರನ್ನು ಪ್ರಧಾನ ಮಂತ್ರಿ ಮಾಡಬೇಕೆಂಬ ಸಂಕಲ್ಪ ತೊಟ್ಟು ಸ್ವಯಂಪ್ರೇರಿತರಾಗಿ ತಮ್ಮ ಬೆಂಬಲಿಗರೊಂದಿಗೆ ತಾಲ್ಲೂಕು ಹಾಗೂ ಜಿಲ್ಲೆಯಾದ್ಯಂತ ಚುನಾವಣಾ ಪ್ರಚಾರ ನಡೆಸುವುದಾಗಿ ತಿಳಿಸಿದರು.
ಜನಸಂಘದ ಸ್ಥಾಪನೆಯ ಕಾಲದಿಂದಲೂ ಹಂತ ಹಂತವಾಗಿ ಪಕ್ಷವನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಹೋರಾಟ ನಡೆಸಿದ್ದೇನೆ, ಪಕ್ಷದಲ್ಲಿದ್ದು ಹಲವು ಏರು ಪೇರುಗಳನ್ನು ಕಂಡಿದ್ದೇನೆ, ನಾಲ್ಕು ಬಾರಿ ಪರಾಭವಗೊಂಡು 5ನೇ ಬಾರಿಗೆ ಶಾಸಕನಾಗಿ ಆಯ್ಕೆಯಾಗುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ದುಡಿದಿರುವುದಾಗಿ ಹೇಳಿದರು.
ಯಶಸ್ಸು ಕಂಡಿದ್ದೇನೆ: ದೇವಾಲಯಗಳ ಅಭಿವೃದ್ಧಿಗೆ ಕೋಟ್ಯಾಂತರ ರು.ಗಳ ಅನುದಾನ ಬಿಡುಗಡೆ ಮಾಡಿಸಿದ್ದೇನೆ. ಅಲ್ಲದೇ ಸರ್ಕಾರಿ ಪದವಿ ಕಾಲೇಜು, ಮೊರಾರ್ಜಿ ವಸತಿ ಶಾಲೆ, ರಾಷ್ಟ್ರೀಯ ಹೆದ್ದಾರಿ ಅಗಲೀಕರಣ, ಪಶು ವೈದ್ಯಶಾಲೆಗಳ ಆರಂಭಕ್ಕೆ ಸರ್ಕಾರದಿಂದ ಮಂಜೂರಾತಿ ದೊರೆಯುವಂತೆ ಮಾಡುವಲ್ಲಿ ಯಶಸ್ಸು ಕಂಡಿದ್ದೇನೆ. ಆದರೆ, 2008ರ ವಿಧಾನಸಭಾ ಚುನಾವಣೆಯಲ್ಲಿ ತಮಗೆ ಟಿಕೇಟ್ ದೊರೆಯದಂತೆ ಮಾಡಿದರು. ಆದರೂ ಅಭ್ಯರ್ಥಿ ಗೆಲ್ಲಿಸಲು ಸಾಧ್ಯವಾಗಲಿಲ್ಲ. ದೇಶದ ಅಭಿವೃದ್ಧಿಯನ್ನು ಗಮನದಲ್ಲಿಟ್ಟು ಬಿಜೆಪಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡುವುದಾಗಿ ಹೇಳಿದರು.
ಗೋಷ್ಠಿಯಲ್ಲಿ ಅರಸೀಕೆರೆ ರಾಮಚಂದ್ರು, ಜನಜಾಗೃತಿ ವೇದಿಕೆಯ ಎಸ್.ಸಿ. ನವಲಗುಂದ, ಮುಖಂಡರಾದ ಕೆಂಕೆರೆಹಳ್ಳಿ ಶಿವನಂಜೇಗೌಡ, ಅಗ್ಗುಂದ ಗ್ರಾಪಂ ಅಧ್ಯಕ್ಷ ಪ್ರಭಾಕರ್, ರಾಮಣ್ಣ, ಬಿ.ಆರ್. ಗಂಗಾಧರ್, ಶಂಕರಯ್ಯ, ಮಾಜಿ ಸೈನಿಕ ಸದಾನಂದ್, ರುದ್ರಮುನಿಸ್ವಾಮಿ, ಶ್ರೀಧರ್, ಎಚ್.ಎನ್. ನಂಜೇಗೌಡ ಇತರರು ಇದ್ದರು.