ಬೋರ್ವೆಲ್ಗೆ ಅನುಮತಿ ನೀಡಿ
ಕ.ಪ್ರ.ವಾರ್ತೆ ಟಿ ಹಾಸನ ಟಿ ಏ. 3
ಇನ್ನು ನೀರಿನ ಸಮಸ್ಯೆ ಇರುವ ಕಡೆಗಳಲ್ಲಿ ಚುನಾವಣಾ ನೀತಿ ಸಂಹಿತೆ ಇದೆ ಅಂತ ಬೋರ್ವೆಲ್ಗಳನ್ನು ಕೊರೆಯುತ್ತಿಲ್ಲ. ಇದರಿಂದ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಚುನಾವಣಾ ಆಯೋಗ ಈ ಬಗ್ಗೆ ಕಾಳಜಿವಹಿಸಿ ನೀರು ಒದಗಿಸಲು ಅವಕಾಶ ಕಲ್ಪಿಸಬೇಕು ಅಥವಾ ಟ್ಯಾಂಕರ್ ಮೂಲಕ ನೀರು ಒದಗಿಸುವ ವ್ಯವಸ್ಥೆ ಮಾಡಬೇಕು ಎಂದು ಜೆಡಿಎಸ್ ಮುಖಂಡ, ಮಾಜಿ ಸಚಿವ ಎಚ್.ಡಿ. ರೇವಣ್ಣ ಒತ್ತಾಯಿಸಿದ್ದಾರೆ.
ಗುರುವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರಸೀಕೆರೆ, ದುದ್ದ, ಶಾಂತಿಗ್ರಾಮ, ಬೇಲೂರು, ಹಳೇಕೋಟೆ, ಹಳ್ಳಿ ಮೈಸೂರು ಸೇರಿದಂತೆ ನಾನಾ ಕಡೆಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಹೆಚ್ಚಾಗಿದೆ. ವಿದ್ಯಾರ್ಥಿಗಳ ಪಾಲಿಗೆ ಇದು ಪರೀಕ್ಷಾ ಸಮಯವಾದ್ದರಿಂದ, ಪ್ರತಿನಿತ್ಯ ಬೆಳಗ್ಗೆ 5ರಿಂದ 7 ಮತ್ತು ಸಂಜೆ 6ರಿಂದ 11 ಗಂಟೆವರೆಗೆ ವಿದ್ಯುತ್ತನ್ನು ಕಡ್ಡಾಯವಾಗಿ ನೀಡಬೇಕು ಎಂದು ಅವರು ಆಗ್ರಹಿಸಿದರು. ರೇವಣ್ಣನವರ ಆಗ್ರಹ ಬರೀ ಇಷ್ಟೇ ಆಗಿರಲಿಲ್ಲ. ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಹಾಸನ ಜಿಲ್ಲೆಯ ವಿಷಯದಲ್ಲಿ ಪಕ್ಷಬೇಧ ನೀತಿ ಅನುಸರಿಸುತ್ತಿದೆ ಎಂಬುದೂ ಅವರ ಮಾತಿನ ತಾತ್ಪರ್ಯವಾಗಿತ್ತು.
ಇದನ್ನೇ ತಮ್ಮ ಮಾತುಗಳಲ್ಲಿ ವಿಷದೀಕರಿಸಿದ ಅವರು, ರಾಜ್ಯ ಸರ್ಕಾರದ ವಿರುದ್ಧ ಟೀಕೆ ಮಾಡಿದರು. ಜಿಲ್ಲೆಯಲ್ಲಿ ಜೆಡಿಎಸ್ನ ಸಂಸದ ಹಾಗೂ ಐವರು ಜೆಡಿಎಸ್ ಶಾಸಕರಿದ್ದಾರೆಂಬ ಕಾರಣಕ್ಕೆ ರಾಜ್ಯ ಸರ್ಕಾರ ಸಮರ್ಪಕ ವಿದ್ಯುತ್ ನೀಡ ಜಿಲ್ಲೆಯಲ್ಲಿ ಸಂಸದರು ಹಾಗೂ ಐವರು ಶಾಸಕರು ಇದ್ದಾರೆ ಎಂಬ ಕಾರಣಕ್ಕೆ ಸರ್ಕಾರ ಸಮರ್ಪಕವಾಗಿ ನೀರು ಹಾಗೂ ವಿದ್ಯುತ್ ನೀಡುತ್ತಿಲ್ಲ ಎಂದು ಆರೋಪಿಸಿದರು.
ಕೇವಲ ಜೆಡಿಎಸ್ ಪಕ್ಷದ ಜನ ಮಾತ್ರ ನೀರು ಕುಡಿಯುವುದಿಲ್ಲ ಎಂದು ಕಿಡಿಕಾರಿದ ಅವರು, ಜಿಲ್ಲೆಯಲ್ಲಿ ಎಲ್ಲಾ ಪಕ್ಷದ ಜನರಿದ್ದಾರೆ. ಈ ಬಗ್ಗೆ ಸರ್ಕಾರ ಅರಿತುಕೊಳ್ಳಬೇಕು ಎಂದು ರೇವಣ್ಣ ಮನವರಿಕೆ ಮಾಡಲೆತ್ನಿಸಿದರು.
ಅಲ್ಲದೇ, ತಮ್ಮ ಮನವಿಗೆ ಸ್ಪಂದಿಸುವಂತೆ ಚುನಾವಣಾ ಆಯೋಗಕ್ಕೆ, ಮುಖ್ಯ ಕಾರ್ಯದರ್ಶಿ ಹಾಗೂ ಜಿಲ್ಲಾಡಳಿತಕ್ಕೆ ಪತ್ರ ಬರೆಯುವುದಾಗಿ ಅವರು ತಿಳಿಸಿದರು.
ಚುನಾವಣೆಯ ಸಂದರ್ಭದಲ್ಲಿ ಜಿಲ್ಲೆಯಲ್ಲಿ ವಿದ್ಯುತ್ ಮತ್ತು ಕುಡಿಯುವ ನೀರಿ ಸಮಸ್ಯೆ ಉಲ್ಬಣಿಸಿದರೆ, ಜನ ಜೆಡಿಎಸ್ ವಿರುದ್ಧ ತಿರುಗಿಬೀಳುತ್ತಾರೆಂಬ ಲೆಕ್ಕಾಚಾರ ಕಾಂಗ್ರೆಸ್ಗೆ ಇದೆ ಎಂದ ಅವರು, ಈ ಕಾರಣಕ್ಕಾಗಿಯೇ ರಾಜ್ಯ ಸರ್ಕಾರ ಜಿಲ್ಲೆಯ ನೀರಿನ ಹಾಗೂ ವಿದ್ಯುತ್ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ವಿದ್ಯುತ್ನಲ್ಲೂ ರಾಜಕೀಯ: ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಅಭಾವದ ಸಮಸ್ಯೆಗಳ ಬಗ್ಗೆ ಮಾತನಾಡಿದ ರೇವಣ್ಣ, ಟ್ರಾನ್ಸ್ಫಾರ್ಮರ್ (ಟಿಸಿ)ಗಳನ್ನು ಹಾಕುವಂತೆ ವಿದ್ಯುತ್ ಇಲಾಖೆಗೆ ತಿಳಿಸಿದರೆ, 15 ದಿನಗಳಾದರೂ ಹಾಕುತ್ತಿಲ್ಲ. ಇದರಿಂದ ಕರ್ನಾಟಕ ಕಗ್ಗತ್ತಲಿನಲ್ಲಿ ಕಾಲ ಕಳೆಯುವಂತಾಗಿದೆ. ಬೆಂಗಳೂರು ಗ್ರಾಮಾಂತರದ ಕೆಲವು ಕಡೆಗಳಲ್ಲಿ ಪ್ರತಿನಿತ್ಯ 12 ತಾಸುಗಳ ಕಾಲ ವಿದ್ಯುತ್ ನೀಡಲಾಗುತ್ತಿದೆ. ಆದರೆ, ಹಾಸನ ಜಿಲ್ಲೆಗೆ 3 ತಾಸುಗಳಷ್ಟೂ ವಿದ್ಯುತ್ ನೀಡಲಾಗುತ್ತಿಲ್ಲ. ಈ ಬಗ್ಗೆ ಚುನಾವಣಾ ಆಯೋಗ ಗಮನ ಹರಿಸಬೇಕು. ಯಾವ ಜಿಲ್ಲೆಗಳಲ್ಲಿ ಎಷ್ಟೆಷ್ಟು ವಿದ್ಯುತ್ ನೀಡಲಾಗುತ್ತಿದೆ ಎಂಬುದನ್ನು ಪರಿಶೀಲಿಸಬೇಕು ಎಂದರು.
ಪರೋಕ್ಷ ಟೀಕೆ
ಏಳು ವರ್ಷಗಳ ಕಾಲ ಹಣಕಾಸು ಸಚಿವರಾಗಿದ್ದ ಅನುಭವ ಹೊಂದಿರುವ ಆಡಳಿತಾರೂಢ ನಾಯಕರಿಗೆ ರೈತರ ಬಗ್ಗೆ ನಿಜವಾಗಿಯೂ ಕಾಳಜಿ ಇದ್ದಿದ್ದರೆ, ರೈತರ ಸಾಲ ಮನ್ನಾ ಮಾಡುತ್ತಿದ್ದರು. ಆದರೆ, ಅವರು ಸಾಲ ಮನ್ನಾ ಮಾಡಿಲ್ಲ. 1 ರು.ಗೆ ಕೆಜಿ ಅಕ್ಕಿ ನೀಡುತ್ತಿರುವುದು ಕೇವಲ ಚುನಾವಣೆ ಗಿಮಿಕ್. ಚುನಾವಣೆ ನಂತರ, ಅದು ಮುಂದುವರಿಯುವ ನಂಬಿಕೆ ಇಲ್ಲ ಎಂದು ಸಿಎಂ ಸಿದ್ದರಾಮಯ್ಯನವರ ಹೆಸರು ಹೇಳದೇ ಪರೋಕ್ಷವಾಗಿ ಟೀಕಿಸಿದರು.
ಕಾಂಗ್ರೆಸ್ನಿಂದ ಅಧಿಕಾರ ದುರುಪಯೋಗ
ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್, ತನ್ನ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ಅಕ್ರಮಗಳನ್ನು ಎಸಗುತ್ತಿದೆ ಎಂದು ರೇವಣ್ಣ ಪುನರುಚ್ಚರಿಸಿದ್ದಾರೆ. ಇತ್ತೀಚೆಗಷ್ಟೇ ಈ ಆರೋಪ ಮಾಡಿದ್ದ ಅವರು, ಗುರುವಾರದ ಸುದ್ದಿಗೋಷ್ಠಿಯಲ್ಲೂ ಮತ್ತೆ ಅದನ್ನೇ ಆರೋಪಿಸಿದರು.
ಜಿಲ್ಲೆಗೆ ಆಂಬುಲೆನ್ಸ್ ಹಾಗೂ ಪೊಲೀಸ್ ಜೀಪ್ಗಳ ಮೂಲಕ ಹಣ ಸಾಗಣೆ ಮಾಡಲಾಗುತ್ತಿದೆ. ಈ ಬಗ್ಗೆ ಚುನಾವಣಾ ಆಯೋಗ ಹದ್ದಿನ ಕಣ್ಣು ಇಡಬೇಕಾಗಿದೆ ಎಂದು ಅವರು ಆಗ್ರಹಿಸಿದರು. ಈ ಬಗ್ಗೆ ನಮ್ಮ ಕಾರ್ಯಕರ್ತರಿಗೆ ಗಮನಿಸುವಂತೆ ತಿಳಿಸಿದ್ದೇನೆ ಎಂದ ಅವರು, ಅಕ್ರಮಗಳಲ್ಲಿ ಸಿಕ್ಕಿ ಹಾಕಿಕೊಳ್ಳುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.