ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಯಗಚಿಗಾಗಿ 7ರಿಂದ ಅನಿರ್ದಿಷ್ಟ ಪ್ರತಿಭಟನೆ

Rashmi Kasaragodu
Updated On : 4 Apr 2014, 1:59 am

ಕನ್ನಡಪ್ರಭ ವಾರ್ತೆ, ಹಾಸನ, ಏ. 3
ಯಗಜಿ ಏತ ನೀರಾವರಿ ಪೂರ್ಣಗೊಳಿಸಿ ಮಾದಹಳ್ಳಿ ಹಾಗೂ ಇತರೆ ಹಳ್ಳಿಗೆ ಕುಡಿಯುವ ನೀರನ್ನು ಒದಗಿಸದ ಕಾರಣ ಈ ವಿರುದ್ಧ ಏ.7 ರಿಂದ ಮತ್ತೆ ಅನಿರ್ದಿಷ್ಠಾವಧಿ ಪ್ರತಿಭಟನೆ ನಡೆಸುವುದಾಗಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಗುರುವಾರ ಎಚ್ಚರಿಕೆ ನೀಡಿದ್ದಾರೆ.
ರೈತರು ಸಂಘದ ಸದಸ್ಯರು ನಗರದ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್ ಅವರಿಗೆ ಈ ಬಗ್ಗೆ ಮನವಿ ನೀಡಿದರು.
ನಂತರ ಮಾತನಾಡಿದ ಮುಖಂಡರು, ಕಳೆದ ಜನವರಿಯಲ್ಲಿ ಅಹೋರಾತ್ರಿ ಧರಣಿ ನಡೆಸಿದ್ದ ಸಂದರ್ಭದಲ್ಲಿ ಜಿಲ್ಲಾಧಿಕಾರಿ, ಅಧಿಕಾರಿಗಳು, ರೈತರು ಹಾಗೂ ಗ್ರಾಮಸ್ಥರೊಂದಿಗೆ ಸಭೆಯನ್ನು ನಡೆಸಿ ಮಾ. 30ರೊಳಗೆ ಏತ ನೀರಾವರಿ ಕಾಮಗಾರಿ ಪೂರ್ಣಗೊಳಿಸುವ ಭರವಸೆ ನೀಡಿದ್ದರು. ಅಧಿಕಾರಿಗಳು ಸಹ ಮಾದಿಹಳ್ಳಿಗಾದರೂ ನೀರನ್ನು ಹರಿಸುವುದಾಗಿ ಭರವಸೆಯನ್ನು ಸಭೆಯಲ್ಲಿ ನೀಡಿದ್ದರು. ಆದರೆ, ಅಂತಿಮ ಗಡುವು ಮುಗಿದು 3 ದಿನವಾಗಿದ್ದರೂ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ರೈತರು ಆರೋಪಿಸಿದರು.
ಮತ್ತೆ ಪ್ರತಿಭಟನೆ: ಜಿಲ್ಲಾಧಿಕಾರಿಯನ್ನು ಭೇಟಿ ನೀಡಿದ ಸಂದರ್ಭದಲ್ಲಿ ಅವರು ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಈ ಯೋಜನೆಯ ಬಗ್ಗೆ ಮಾತನಾಡಲು ಆಗುವುದಿಲ್ಲ. ಆದ್ದರಿಂದ ಈ ಯೋಜನೆಯ ಬಗ್ಗೆ ಚುನಾವಣೆ ಕಳೆಯುವವರೆಗೂ ಮಾತನಾಡಲು ಬರುವುದಿಲ್ಲ ಎಂದಿದ್ದಾರೆ. ಇದು ಕಾಮಗಾರಿ ಸದ್ಯದಲ್ಲಿ ಮುಗಿಯುವುದಿಲ್ಲ ಎನ್ನುವುದನ್ನು ಸ್ಪಷ್ಟಪಡಿಸುತ್ತದೆ. ಈ ಹಿನ್ನೆಲೆಯಲ್ಲಿ, ಮತ್ತೆ ಪ್ರತಿಭಟನೆಗೆ ಕೂರುವ ಅನಿರ್ವಾಯತೆ ನಿರ್ಮಾಣವಾಗಿದೆ. ಆದ್ದರಿಂದ ಕಾವೇರಿ ನೀರಾವರಿ ನಿಗಮ ದ ಬೇಲೂರು ವಿಭಾಗ ಕಾರ್ಯಪಾಲಕ ಅಭಿಯಂತರ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ರೈತ ಸಂಘಟನೆಯ ತಾಲೂಕ ಸಂಘಟನಾ ಕಾರ್ಯದರ್ಶಿ ಬೆಳ್ಳೂರು ಸ್ವಾಮಿಗೌಡ ಹಾಗೂ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement