ಸಿಎಂ ಹೇಳಿಕೆ ದುರದೃಷ್ಟಕರ
ಕ.ಪ್ರ.ವಾರ್ತೆ ಟಿ ಹಾಸನ ಟಿ ಏ.3
ಬೆಳಗಾವಿ ರೈತ ವಿಠಲ್ ಅರಭಾವಿ ಆತ್ಮಹತ್ಯೆ ಸಂಬಂಧ ಸಿಎಂ ಸಿದ್ದರಾಮಯ್ಯ ಅವರು ನೀಡಿರುವ ಹೇಳಿಕೆಗೆ ದುರದೃಷ್ಟಕರ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ವಿಷಾದಿಸಿದ್ದಾರೆ.
ರೈತರ ಸಾವಿನಂತಹ ಘಟನೆಗಳಿಗೆ ಸರ್ಕಾರದ ಲೋಪದೋಷಗಳೂ ಕಾರಣವಾಗಿದ್ದು, ಜವಾಬ್ದಾರಿ ಸ್ಥಾನದಲ್ಲಿ ಇರುವವರು ತಮ್ಮ ಸರ್ಕಾರದ ನ್ಯೂನತೆಗಳನ್ನು ಸರಿಪಡಿಸಿಕೊಳ್ಳುವ ಬದಲು ಇಲ್ಲ ಸಲ್ಲದ ಸಬೂಬು ಹೇಳಿ ಸಮರ್ಥಿಸಿಕೊಳ್ಳುವುದು ಸರಿಯಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಅಸಮಾಧಾನ ವ್ಯಕ್ತಪಡಿಸಿದರು.
ಪರಿಹಾರ ಹುಡುಕುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಆಲೋಚಿಸಬೇಕೇ ಹೊರತು, ಸಮರ್ಥನೆ ಮಾಡಿಕೊಳ್ಳಲು ಸಬೂಬು ಹೇಳಬಾರದು. ನನ್ನ ಅವಧಿಯಲ್ಲಿ ಇಂಥ ಘಟನೆ ನಡೆದರೆ ರಾತ್ರಿಯಿಡೀ ನಿದ್ರೆ ಮಾಡುತ್ತಿರಲಿಲ್ಲ. ಅದನ್ನು ಹೇಗೆ ಸರಿಪಡಿಸಬೇಕು ಎಂದು ಯೋಚಿಸುತ್ತಿದ್ದೆ. ಈ ಕಾರಣದಿಂದಲೇ ರಾಮಕೃಷ್ಣ ಹೆಗಡೆಯವರು ನನ್ನನ್ನು 24 ಗಂಟೆ ರಾಜಕಾರಣಿ ಎನ್ನುತ್ತಿದ್ದರು ಎಂದು ಹಿಂದಿನ ಸಂದರ್ಭಗಳನ್ನು ನೆನಪು ಮಾಡಿಕೊಂಡರು.
ತೇಜೋವಧೆ ಮಾಡಲ್ಲ: ಸಿದ್ದರಾಮಯ್ಯ ನಾನು ಒಟ್ಟಿಗೇ ಇದ್ದಾಗ ಎಸ್.ಎಂ. ಕೃಷ್ಣ ಅವಧಿಯಲ್ಲಿ ಹೆಚ್ಚು ರೈತರ ಆತ್ಮಹತ್ಯೆ ನಡೆದಿತ್ತು. ಆಗ ದೆಹಲಿಗೆ ನಿಯೋಗ ಕರೆದುಕೊಂಡು ಹೋಗಲಾಗಿತ್ತು. ಇದಕ್ಕೆ ಪ್ರೇರಣೆ ಯಾರದೇ ಇರಲಿ, ರೈತರ ಸ್ಥಿತಿಗತಿ ನನಗೆ ಗೊತ್ತಿದೆ ಎಂದರು. ಹಿಂದೆ ಸಿದ್ದರಾಮಯ್ಯ ಅವರು ನಮ್ಮ ಪಕ್ಷದಲ್ಲಿದ್ದಾಗ ಏನೆಲ್ಲಾ ಹೇಳಿಕೆ ನೀಡಿದ್ದರು ಎಂಬುದಕ್ಕೆ ಸಾಕ್ಷಿಯಾಗಿ ಪೇಪರ್ ಕಂಟಿಂಗ್ಸ್ ನನ್ನ ಬಳಿ ಇವೆ. ಅವರು ಏನು ಹೇಳಿದ್ದರು ಅನ್ನೋದನ್ನು ಈಗ ನಾನು ಹೇಳಬಹುದು. ಆದರೆ ಸುಖಾಸುಮ್ಮನೆ ನಾನು ವ್ಯಕ್ತಿ ತೇಜೋವಧೆ ಮಾಡಲು ಹೋಗಲ್ಲ. ಜನರೇ ತೀರ್ಮಾನ ಮಾಡುತ್ತಾರೆ ಎಂದು ಕುಟುಕಿದರು. ನನ್ನನ್ನು ಪದೇ ಪದೇ ಬೈಯ್ಯುವುದರಿಂದ ಅವರ ವರ್ಚಸ್ಸು ಹೆಚ್ಚುವುದಾದರೆ ಕಠಿಣವಾದ ಪದ ಪ್ರಯೋಗ ಮಾಡಲಿ, ನಾನೇನು ವ್ಯಥೆ ಪಡುವುದಿಲ್ಲ ಎಂದು ತಿರುಗೇಟು ನೀಡಿದರು.
ಅವಾಚ್ಯ ಶಬ್ದ ಸಲ್ಲದು: ನಾನು ಯಾವತ್ತೂ ಅವಾಚ್ಯ ಶಬ್ದ ಬಳಕೆ ಮಾಡಿಲ್ಲ. ರಾಜಕೀಯದಲ್ಲಿ ತಾಳ್ಮೆ ಕಳೆದುಕೊಂಡರೆ ನಡೆಯಬಾರದ ಅವಾಂತರಗಳು ನಡೆದು ಹೋಗುತ್ತವೆ. ರಾಜಕಾರಣಿಗಳು ತಾವಾಡುವ ಮಾತಿಗೆ ಲೆಕ್ಕವೇ ಇಲ್ಲ ಎಂಬಂತೆ ಮಾತನಾಡುತ್ತಿರುವುದು ದೇಶದ ಸಂಸ್ಕೃತಿ, ಪ್ರಜಾಸತ್ತೆ ಅಗೌರವ ತಂದಂತೆ. ವಿದೇಶಗಳಲ್ಲಿ ನಮ್ಮ ಗೌರವ ನಾವೇ ಕಳೆದುಕೊಂಡಂತೆ ಎಂದು ಎಚ್ಚರಿಸಿದರು.
ನಾನು ಪ್ರಶ್ನಾತೀತ: ನರೇಂದ್ರ ಮೋದಿಗೆ ಬೆಂಬಲ ಕೊಡುವ ಪ್ರಶ್ನೆಯೇ ಇಲ್ಲ ಎಂದ ದೇವೇಗೌಡರು, ನಾನು ಅವಕಾಶವಾದಿ ರಾಜಕಾರಣ ಮಾಡಲ್ಲ. ಈ ಹಿಂದೆ ನಾನು ಪ್ರಧಾನಿ ಹುದ್ದೆಯಿಂದ ಕೆಳಗಿಳಿದಾಗ ವಾಜಪೇಯಿ ಸೇರಿದಂತೆ ಅನೇಕರು ಬೆಂಬಲ ಕೊಡಲು ಮುಂದೆ ಬಂದವರೂ ನಾನು ಒಪ್ಪಲಿಲ್ಲ ಎಂದರು. ನಾನು ಎಲ್ಲೂ ಅಕ್ರಮ ಆಸ್ತಿ ಮಾಡಿಲ್ಲ. ದೇಶದಲ್ಲೇ ಒಬ್ಬ ಪ್ರಶ್ನಾತೀತ ನಾಯಕ ಎಂದು ಉದ್ಗರಿಸಿದರು.
ಪ್ರಯೋಜನವಿಲ್ಲ: ಕಾಂಗ್ರೆಸ್ ನಾಯಕರು ದೇಶ ಮತ್ತು ರಾಜ್ಯದಲ್ಲಿ ಅಗ್ಗದ ಯೋಜನೆ ಘೋಷಣೆಯಿಂದ ಚುನಾವಣೆಯಲ್ಲಿ ಲಾಭವಾಗುತ್ತದೆ ಎಂದುಕೊಂಡಿದ್ದಾರೆ. ಆದರೆ ಇದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಭವಿಷ್ಯ ನುಡಿದರು.
ಇದೇ ವೇಳೆ ಜೆಡಿಎಸ್ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿರುವ ಕಾಂಗ್ರೆಸ್ ನಾಯಕರು ನನ್ನಿಂದ ಸಿದ್ದರಾಮಯ್ಯ, ಎಂಪಿ ಪ್ರಕಾಶ್ ಅವರನ್ನು ದೂರ ಮಾಡಿ ಜೆಡಿಎಸ್ ಮುಗಿಸುವ ಹುನ್ನಾರ ಮಾಡಿದ್ದರು. ಅದು ಸಾಧ್ಯವಾಯಿತೇ ಅನ್ನೋದನ್ನು ಕುತಂತ್ರಿಗಳು ನೆನಪಿಸಿಕೊಳ್ಳಬೇಕು ಎಂದು ಲೇವಡಿ ಮಾಡಿದರು.
ಮಾಜಿ ಪ್ರಧಾನಿ ಉವಾಚ...
ಪರಿಹಾರ ಹುಡುಕುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಆಲೋಚಿಸಬೇಕೇ ಹೊರತು, ಸಮರ್ಥನೆ ಮಾಡಿಕೊಳ್ಳಲು ಸಬೂಬು ಹೇಳಬಾರದು.
ಹಿಂದೆ ಸಿದ್ದರಾಮಯ್ಯ ಅವರು ನಮ್ಮ ಪಕ್ಷದಲ್ಲಿದ್ದಾಗ ಏನೆಲ್ಲಾ ಹೇಳಿಕೆ ನೀಡಿದ್ದರು ಎಂಬುದಕ್ಕೆ ಸಾಕ್ಷಿಯಾಗಿ ಪೇಪರ್ ಕಂಟಿಂಗ್ಸ್ ನನ್ನ ಬಳಿ ಇವೆ.
ರೈತರ ಬಗ್ಗೆ ಅವರು ಏನು ಹೇಳಿದ್ದರು ಅನ್ನೋದನ್ನು ಈಗ ನಾನು ಹೇಳಬಹುದು. ನಾನು ವ್ಯಕ್ತಿ ತೇಜೋವಧೆ ಮಾಡಲು ನಾನು ಹೋಗಲ್ಲ.
ನನ್ನನ್ನು ಪದೇ ಪದೇ ಬೈಯ್ಯುವುದರಿಂದ ಅವರ ವರ್ಚಸ್ಸು ಹೆಚ್ಚುವುದಾದರೆ ಬೈಯ್ಯಲಿ. ನಾನೇನು ವ್ಯಥೆ ಪಡುವುದಿಲ್ಲ. ರಾಜಕೀಯದಲ್ಲಿ ತಾಳ್ಮೆ ಕಳೆದುಕೊಂಡರೆ ಅವಾಂತರಗಳು ನಡೆದು ಹೋಗುತ್ತವೆ.