ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಗೌಡರ ಕುಟುಂಬಕ್ಕೆ ಜನಬೆಂಬಲ ಇಲ್ಲ

Rashmi Kasaragodu
Updated On : 5 Apr 2014, 1:54 am

ಚನ್ನರಾಯಪಟ್ಟಣ:  ಜೆಡಿಎಸ್ ದಿನದಿಂದ ದಿನಕ್ಕೆ ತನ್ನ ಅಸ್ತಿತ್ವವನ್ನು ಕಳೆದುಕೊಂಡು ಕೇವಲ ಕುಟುಂಬ ಪಕ್ಷಕ್ಕೆ ಮೀಸಲಾಗಿದ್ದು, ಇದಕ್ಕೆ ಜನತೆ ಬೆಂಬಲ ನೀಡುವುದಿಲ್ಲ ಎಂದು ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎ. ಮಂಜು ತಿಳಿಸಿದರು.
ತಾಲೂಕಿನ ಶ್ರವಣಬೆಳಗೊಳದಲ್ಲಿ ಪ್ರಚಾರ ನಡೆಸಿ ಮಾತನಾಡಿ, ಜನತಾದಳ  ಕೆಲ ಭಾಗದಲ್ಲಿ ಅಲ್ಪ ಸ್ವಲ್ಪ ಉಳಿದಿದ್ದು, ಲೋಕಸಭಾ ಚುನಾವಣೆಯ ನಂತರ ಅದು ನಶಿಸುತ್ತದೆ. ಜೆಡಿಎಸ್ಗೆ ಇದು ಕಡೆಯ ಚುನಾವಣೆಯಾಗಿದೆ ಎಂದು ತಿಳಿಸಿದರು.
ಜೆಡಿಎಸ್ ಕೇವಲ ಒಂದು ಕುಟುಂಬದ ಪಕ್ಷವಾಗಿ ಹೊರಹೊಮ್ಮುತ್ತಿರುವುದರಿಂದ ಅದೊಂದು ಮುಳುಗುತ್ತಿರುವ ಹಡಗಿನ ಪಕ್ಷವಾಗಿದೆ. ಆ ಪಕ್ಷದಿಂದ  ಲೋಕಸಭೆಯಲ್ಲಿ ಯಾವ ಕೆಲಸ ಆಗುವುದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆಯೇ ನೇರ ಹಣಾಹಣಿಯುಂಟಾಗಿದ್ದು, ಜನತೆ ತಮ್ಮ ಪಕ್ಷವನ್ನು ಬೆಂಬಲಿಸಬೇಕೆಂದು ಕೋರಿದರು.
ದೇವೇಗೌಡ ಅವರ ಮೊಸಳೆ ಕಣ್ಣೀರಿಗೆ ಬೆಸ್ತು ಬಿದ್ದ ಜನತೆ ಮಾಜಿ ಪ್ರಧಾನಿ ಎಂಬ ಗೌರವದಿಂದ 4 ಬಾರಿ ಲೋಕಸಭೆಗೆ ಆಯ್ಕೆ ಮಾಡಿದರು. ಜಿಲ್ಲೆಗೆ ಅವರ ಕೊಡುಗೆ ಏನು ಎಂಬುದನ್ನು ಗೌಡರು ಸಾಬೀತು ಮಾಡಲಿ. ನಾಲ್ಕು ವರ್ಷ ಸುಮ್ಮನಿದ್ದು, ಕಡೆಯ ವರ್ಷದಲ್ಲಿ ರೈತರ ಬಳಿ ಹೋಗಿ ಮೊಸಳೆ ಕಣ್ಣೀರು ಸುರಿಸುವುದು ಅವರ ಕೆಲಸ. ತೆಂಗಿಗೆ ಪರಿಹಾರ ಕೊಡಿಸುವ ನಾಟಕವಾಡಿದರು. ಇದನ್ನೇ ನೋಡುತ್ತಿದ್ದ ರೈತರಿಗೆ ಸಿಕ್ಕಿದ್ದೇನು? ಎಂದು ಅವರು ಪ್ರಶ್ನಿಸಿದರು.
ರೇವಣ್ಣರ ಬಗ್ಗೆ ಟೀಕೆ: ಗೌಡರ ಪುತ್ರ ರೇವಣ್ಣ ಕೆಎಂಎಫ್ ಅಧ್ಯಕ್ಷರಾಗಿದ್ದರೂ ಹಾಲಿಗೆ ರು. 4 ಸಹಾಯಧನ ಸಿಗುವಂತಾಗಲು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುವವರೆಗೂ ರೈತರು ಕಾಯಬೇಕಾಯ್ತು ಎಂದು ತಿಳಿಸಿದರು.
ಮಾಜಿ ಶಾಸಕ ಸಿ.ಎಸ್. ಪುಟ್ಟೇಗೌಡ, ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಗೋಪಾಲಸ್ವಾಮಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ನಂಜುಂಡೇಗೌಡ, ರಂಗಸ್ವಾಮಿ, ತಾಲೂಕು ಪಂಚಾಯಿತಿ ಸದಸ್ಯ ರಾಘವೇಂದ್ರ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷರಾದ ಚಂದ್ರಶೇಖರ್, ಎಚ್.ಎಸ್. ವಿಜಯ್ಕುಮಾರ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಲಿತಮ್ಮ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಂಜೇಗೌಡ, ಸಿ.ವಿ ರಾಜಪ್ಪ, ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಶಶಿಕಲಾ, ಶೋಭಾರಾಣಿ ಇದ್ದರು.



'ಸಿದ್ದು ಅವರನ್ನು ತುಳಿದರು'
ಮಾತೆತ್ತಿದರೆ ಸಾಕು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮಿಂದ ರಾಜಕೀಯದಲ್ಲಿ ಬೆಳೆದರು ಎನ್ನು ಅಪ್ಪ- ಮಕ್ಕಳು ಸಿದ್ದರಾಮಯ್ಯ ಅವರ ಬೆಂಬಲವಿಲ್ಲದಿದ್ದರೆ, ದೇವೇಗೌಡ ಮುಖ್ಯಮಂತ್ರಿ, ಪ್ರಧಾನಿಯಾಗುತ್ತಿರಲಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಮಂಜು ತಿಳಿಸಿದರು. ಅಧಿಕಾರದ ಚುಕ್ಕಾಣಿ ಹಿಡಿ ಮೇಲೆ ಬೇರೆಯವರನ್ನು ತುಳಿಯುವುದು ಇವರ ಕೆಲಸವಾದ್ದರಿಂದ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲು ಇಷ್ಟು ದಿನ ಕಾಯಬೇಕಾಯಿತು ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement