ಜಿಲ್ಲಾಭಿವೃದ್ಧಿಗೆ ಗೌಡರ ಕೊಡುಗೆ ಶೂನ್ಯ
ಸಕಲೇಶಪುರ: ಎರಡು ದಶಕಗಳಿಂದ ಅಧಿಕಾರ ಅನುಭವಿಸಿದ ದೇವೆಗೌಡರ ಕುಟುಂಬ ಜಿಲ್ಲೆಯ ಅಭಿವೃದ್ಧಿಗೆ ನೀಡಿದ ಕೊಡುಗೆ ಶೂನ್ಯ ಎಂದು ಕಾಂಗ್ರೆಸ್ ಲೋಕಸಭೆ ಅಭ್ಯರ್ಥಿ ಎ. ಮಂಜು ಹೇಳಿದ್ದಾರೆ.
ಗುರುವಾರ ಪಟ್ಟಣದ ಸದಾಶಿವನಗರ ಬಡಾವಣೆಯಲ್ಲಿ ನಡೆದ ಕೆಜೆಪಿ ಕಾಯಕರ್ತರ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 20 ವರ್ಷಗಳ ಜಿಲ್ಲೆಯನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡು ಆಡಳಿತ ನಡೆಸಿರುವ ದೇವೇಗೌಡರ ಕುಟುಂಬ ಜಿಲ್ಲೆಯ ಜನರಿಂದಾಗಿ ಪ್ರಧಾನಿ, ಮುಖ್ಯಮಂತ್ರಿ,ಲೋಕಪಯೋಗಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ಆದರೆ, ಇವರ ಆಡಳಿತದಲ್ಲೂ ಜಿಲ್ಲೆ ಯಾವುದೆ ಅಭಿವೃದ್ಧಿ ಹೊಂದಿಲ್ಲ ಎಂದರು.
ಗೆಲವಿಗೆ ಹೋರಾಡಿ: ಮಲೆನಾಡ ಭಾಗದಲ್ಲಿ ಬಾಧಿಸುತ್ತಿರುವ ಕಾಡಾನೆ ಸಮಸ್ಯೆ, ಟಿಂಬರ್ ನಿಷೇಧ, ಆನೆ ಕಾರಿಡಾರ್ ಗುಮ್ಮವನ್ನು ಸಮರ್ಥವಾಗಿ ಎದುರಿಸದೆ ಚುನಾವಣೆಯ ವೇಳೆ ಕಣ್ಣೀರು ಸುರಿಸುತ್ತ ತಿರುಗುವುದು ದೇವೇಗೌಡರ ಕುಟುಂಬ ಚುನಾವಣೆಯಲ್ಲಿ ಅನುಸರಿಸುತ್ತಿರುವ ಕ್ರಮ. ಆದ್ದರಿಂದ ಇವರ ಕಪಟ ರಾಜಕೀಯವನ್ನು ಈ ಬಾರಿ ತಿರಸ್ಕರಿಸಿ ಕಾಂಗ್ರೆಸ್ ಪಕ್ಷದ ಗೆಲವಿಗಾಗಿ ಹೋರಾಡಬೇಕು ಎಂದು ಕಾರ್ಯಕರ್ತರಿಗೆ ಅವರು ಕರೆ ನೀಡಿದರು.
ಅಭಿವೃದ್ಧಿ ಸಾಧ್ಯ: ಮಾಜಿ ಶಾಸಕ ಎಚ್.ಎಂ ವಿಶ್ವನಾಥ್ ಮಾತನಾಡಿ, ನಂಬಿದವರಿಗೆ ದ್ರೋಹಬಗೆಯುವ ಜೆಡಿಎಸ್ನಲ್ಲಿ ಯಾವುದೇ ರಾಜಕೀಯ ಭವಿಷ್ಯವಿಲ್ಲ. ದುಡಿದು ಪಕ್ಷ ಕಟ್ಟಲು ಬೇರೆಯವರ ಮಕ್ಕಳು, ಅಧಿಕಾರ ಅನುಭವಿಸಲು ತಮ್ಮ ಮಕ್ಕಳು ಎಂಬುದು ದೇವೆಗೌಡರ ಮಂತ್ರ. ಆದ್ದರಿಂದ, ಈ ಬಾರಿ ಕಾಂಗ್ರೆಸ್ ದೇವೇಗೌಡರ ಎದುರು ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಉತ್ಸಾಹಿ ಯುವ ಅಭ್ಯರ್ಥಿಯನ್ನು ಗೆಲ್ಲಿಸಿದರೆ ಜಿಲ್ಲೆಯ ಅಭಿವೃದ್ಧಿ ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಜಿಪಂ ಸದಸ್ಯ ಬೈರಮುಡಿ ಚಂದ್ರು, ಡಿಸಿಸಿ ಬ್ಯಾಂಕ್ ನಿರ್ದೇಶಕ ಅರವೀಂದ್, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಅರೆಕೆರೆ ಬಸವರಾಜು, ತಾಪಂ ಸದಸ್ಯರಾದ ಸಾವಿತ್ರಿ, ಸುಮಂಗಲಿ, ಎಪಿಎಂಸಿ ಮಾಜಿ ಅಧ್ಯಕ್ಷ ಉದಯ್ ಸೇರಿದಂತೆ ನೂರಾರು ಮುಖಂಡರು ಕೆಜೆಪಿ ತೊರೆದು ಕಾಂಗ್ರೆಸ್ ಸೇರಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಎಚ್.ಪಿ. ಕಾಂತರಾಜ್, ತುಳಸಿ ಪ್ರಸಾದ್, ಡಿ.ಸಿ. ಸಣ್ಣಸ್ವಾಮಿ, ಹಾನುಬಾಳ್ ಭಾಸ್ಕರ್, ರೇಹಮತುಲ್, ಅಬ್ದುಲ್ ರಬ್, ಸದಾಶಿವ ಭಂಡಾರಿ ಹಾಗೂ ಇತರರು ಇದ್ದರು.