ದ್ವೇಷದ ರಾಜಕಾರಣ ದೊರಕದ ಕಾಂಚಾಣ
ಬೇಲೂರು: ಕಾಂಗ್ರೆಸ್ ದ್ವೇಷದ ರಾಜಕಾರಣ ಮಾಡುತ್ತಿದ್ದು ಜಿಲ್ಲೆಗೆ ಅನುದಾನ ನೀಡುತ್ತಿಲ್ಲ. ಕುಡಿಯುವ ನೀರು, ವಿದ್ಯುತ್ ವಿಚಾರದಲ್ಲಿ ಜನರ ಜೀವದೊಂದಿಗೆ ಸರ್ಕಾರ ಚೆಲ್ಲಾಟವಾಡುತ್ತಿದೆ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಕಿಡಿಕಾರಿದರು.
ಮಾಜಿ ಪುರಸಭಾಧ್ಯಕ್ಷ ತಜಮುಲ್ ಪಾಷ ನಿವಾಸದಲ್ಲಿ ಕೆಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ಗೆ ಸೇರ್ಪಡೆಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರವಿದ್ದು, ದಿನದಿಂದ ದಿನಕ್ಕೆ ಸಮಸ್ಯೆ ಉಲ್ಬಣಗೊಳ್ಳುತ್ತಿದೆ. ಈ ಬಗ್ಗೆ ಕುಡಿಯುವ ನೀರು ಸಮಸ್ಯೆ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ದ್ವೇಷದ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ಯಾವುದೇ ಅನುದಾನ ಬಿಡುಗಡೆ ಮಾಡುತ್ತಿಲ್ಲ. ಈ ಹಿಂದೆ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವಂತೆ ರು. 20 ಕೋಟಿ 11 ಲಕ್ಷ ವೆಚ್ಚದ ಯೋಜನಾ ವರದಿಯನ್ನು ಸಿದ್ದಪಡಿಸಲಾಗಿತ್ತು. ಇದರಲ್ಲಿ ಬೇಲೂರು, ಹಳೆಬೀಡು, ಅರಸೀಕೆರೆ, ಚನ್ನರಾಯಪಟ್ಟಣ ಸೇರಿದಂತೆ ಇತರೆ ತಾಲೂಕುಗಳನ್ನು ಸೇರಿಸಲಾಗಿತ್ತು. ಆದರೆ ಕಾಂಗ್ರೆಸ್ ಸರ್ಕಾರ ವರದಿ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ.
ಆಯೋಗಕ್ಕೆ ಪತ್ರ: ಕುಡಿಯುವ ನೀರು ಹಾಗೂ ವಿದ್ಯುತ್ ಸಮಸ್ಯೆ ನಿವಾರಿಸಲು ಕ್ರಮಕೈಗೊಳ್ಳಲು ಅನುಮತಿ ನೀಡಬೇಕೆಂದು ತಾವು ಚುನಾವಣಾ ಆಯೋಗಕ್ಕೆ ಪತ್ರ ಬರೆದಿರುವುದಾಗಿ ರೇವಣ್ಣ ತಿಳಿಸಿದರು. ಕುಡಿಯುವ ನೀರಿಗೆ ಕೊಳವೆಬಾವಿ ಕೊರೆಯಲು ಅನುಮತಿ ನೀಡಬೇಕು ಅಥವಾ ಟ್ಯಾಂಕರ್ ರೂಪದಲ್ಲಾದರೂ ಜನರಿಗೆ ನೀರು ಕೊಡುವಂತೆ ಆಯೋಗಕ್ಕೆ ಬರೆದಿರುವ ಪತ್ರದಲ್ಲಿ ಮನವಿ ಮಾಡಿರುವುದಾಗಿ ಅವರು ವಿವರಿಸಿದರು.
ಕೈತೊಳೆದುಕೊಂಡ ಕಾಂಗ್ರೆಸ್: ತಾಲೂಕಿನ ಜನತೆಗೆ ಹಾಗೂ ಜಮೀನಿಗೆ ನೀರಿನ ಸೌಕರ್ಯ ಸಿಗಲಿ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ರಾಜ್ಯದಲ್ಲಿ ನೀರಾವರಿ ಸಚಿವರಾಗಿದ್ದಾಗ, ಯಗಚಿ ಜಲಾಶಯ ನಿರ್ಮಿಸಿದರು. ತಾವು ಸಚಿವರಾಗಿದ್ದಾಗ ನೆನೆಗುದಿಗೆ ಬಿದ್ದಿದ್ದ ಹಳೇಬೀಡು ಮಾದಿಹಳ್ಳಿ ಏತನೀರಾವರಿ ಯೋಜನೆಗೆ ಚಾಲನೆ ಕೊಟ್ಟು ಕೆ.ಸಿ. ರೆಡ್ಡಿಯವರನ್ನು ಕರೆಸಿ ಮತ್ತೆ ಅದಕ್ಕೆ ಮರುಜೀವ ಕೊಡಲಾಯಿತು. ಆದರೆ ಕಾಂಗ್ರೆಸ್ನವರು ಅಧಿಕಾರಕ್ಕೆ ಬಂದ ಮೇಲೆ ಕೃಷ್ಣಾ, ಕಾವೇರಿ ಎಂದು ನೆಪ ಹೇಳಿ ತಪ್ಪನ್ನು ತಮ್ಮ ಮೇಲೆ ಹಾಕಿ ಕೈ ತೊಳೆದುಕೊಂಡರು ಎಂದು ಟೀಕಿಸಿದರು.
ಶ್ವೇತಪತ್ರ ಹೊರಡಿಸಲಿ: ದೇವೇಗೌಡರ ಕೊಡುಗೆ ಏನು ಎಂದು ಪ್ರಶ್ನಿಸುವ ಶಾಸಕ ಎ. ಮಂಜು ಅರಕಲಗೂಡಿಗೆ ಕೊಟ್ಟಿರುವ ಕೊಡುಗೆಯಾದರೂ ಏನು ಎಂಬುದರ ಬಗ್ಗೆ ಶ್ವೇತಪತ್ರ ಬಿಡುಗಡೆ ಮಾಡಲಿ ಎಂದು ಆಗ್ರಹಿಸಿದ ರೇವಣ್ಣ, ಒಂದು ರಸ್ತೆಗೆ ಡಾಂಬರು ಹಾಕಲು ಅವರಿಗೆ ಸಾಧ್ಯವಾಗಿಲ್ಲ ಎಂದು ಟೀಕಿಸಿದರು.
ಅನುದಾನ ನೀಡುತ್ತಿಲ್ಲ: ತಾವು ಸಚಿವರಾಗಿದ್ದಾಗ ಅರಕಲಗೂಡು ಹಾಸನ ರಸ್ತೆಗೆ ಡಾಂಬರು ಹಾಕಲು ರು. 166 ಕೋಟಿ ಬಿಡುಗಡೆ ಮಾಡಿ ಕಾಮಗಾರಿ ಮಾಡಿಸಿದ್ದೆ. ಆದರೆ, ಇವರು ರಿಪೇರಿಗಾಗಿ ರು. 100 ಕೋಟಿ ಬಿಡುಗಡೆ ಮಾಡಿಸಿಕೊಂಡರು. ಆ ಹಣವನ್ನು ಏನು ಮಾಡಿದರು ಎಂದು ಮಂಜು ವಿವರಣೆ ನೀಡಲಿ ಎಂದು ಆಗ್ರಹಿಸಿದ ರೇವಣ್ಣ, ದೇವೇಗೌಡರು ತಮ್ಮ ರಾಜಕೀಯ ವಿರೋಧಿ ಎಂಬ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಿಲ್ಲೆಗೆ ಯಾವುದೇ ಅನುದಾನ ನೀಡಲು ಹಿಂದೇಟು ಹಾಕುತ್ತಿವೆ ಟೀಕಿಸಿದರು.
ತಾಲೂಕು ಅಧ್ಯಕ್ಷ ತೊ.ಚ. ಅನಂತಸುಬ್ಬರಾಯ, ಜಿಲ್ಲಾ ಪಂಚಾಯ್ತಿ ಸದಸ್ಯ ಚಂದ್ರೇಗೌಡ, ಜಿ.ಟಿ ಇಂದಿರಾ, ಮಾಜಿ ತಾಲೂಕು ಪಂಚಾಯ್ತಿ ಅಧ್ಯಕ್ಷ ಎಂ. ಎ. ನಾಗರಾಜ್, ಜಿಪಂ ಮಾಜಿ ಸದಸ್ಯ ಸಿ.ಎಸ್. ಪ್ರಕಾಶ್, ಮಾಜಿ ಪುರಸಭೆ ಅಧ್ಯಕ್ಷ ತಜಮುಲ್ ಪಾಷ, ವಿಷ್ಣುಕುಮಾರ್ ಇತರರು ಇದ್ದರು.