ಬಾಬು ಜಗಜೀವನ ರಾಂ ಜನ್ಮ ದಿನಾಚರಣೆ ಇಂದು
ಹಾಸನ: ನಗರದ ಅಂಬೇಡ್ಕರ್ ಭವನದಲ್ಲಿ ಇರುವ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳ ಕಚೇರಿಯಲ್ಲಿ ಏಪ್ರಿಲ್ 5 ರಂದು ಬೆಳಗ್ಗೆ 11ಕ್ಕೆ ಡಾ. ಬಾಬು ಜಗಜೀವನ್ರಾಂ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವಪೂರ್ವಕವಾಗಿ ಜನ್ಮ ದಿನವನ್ನು ಆಚರಿಸುತ್ತಿದೆ ಎಂದು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.
ಕಾಲೇಜಿನಲ್ಲಿ ರಕ್ತದಾನ ಶಿಬಿರ
ಸಕಲೇಶಪುರ: ನಿಯಮಿತ ರಕ್ತದಾನ ಮಾಡುವ ಮೂಲಕ ಹೃದಯಾಘಾತದಂತಹ ಮಾರಕರೋಗದಿಂದ ಪಾರಾಗಬಹುದಾಗಿದೆ ಎಂದು ರೆಡ್ಕ್ರಾಸ್ ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ ಅನುಗನಾಳು ಕೃಷ್ಣಮೂರ್ತಿ ಹೇಳಿದ್ದಾರೆ. ಬುಧವಾರ ಪಟ್ಟಣದ ಕುಡುಗರಹಳ್ಳಿಯ ಪ್ರಥಮದರ್ಜೆ ಕಾಲೇಜಿನಲ್ಲಿ ಎನ್ಎಸ್ಎಸ್, ರೆಡ್ ರೆಬ್ಬನ್, ರೆಡ್ಕ್ರಾಸ್ ಸಂಸ್ಥೆ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿ, ಯುವಕರು ರಕ್ತದಾನ ಮಾಡಲು ಮುಂದಾಗುವುದರಿಂದ ಅನೇಕ ಅಮಾಯಕರ ಜೀವ ಉಳಿಸಬಹುದಾಗಿದೆ ಎಂದರು.
ರೋಗಗಳಿಂದ ದೂರ: ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಗಳು ಪ್ರತಿನಾಲ್ಕು ತಿಂಗಳಿಗೊಮ್ಮೆ 350 ಮಿಲಿ ಲೀಟರ್ ರಕ್ತದಾನ ಮಾಡಬಹುದಾಗಿದ್ದು ಇದರಿಂದ ರಕ್ತದೊತ್ತಡ, ಸಕ್ಕರೆ ಕಾಯಿಲೆಯಂತಹ ಮಾರಕರೋಗಗಳಿಂದ ದೂರ ಇರಬಹುದಾಗಿದೆ ಎಂದರು.
ದೇಶದಲ್ಲಿ ರಕ್ತದ ಕೊರತೆ ಅತಿಯಾಗಿರುವುದನ್ನು ಮನಗಂಡಿರುವ ರೆಡ್ಕ್ರಾಸ್ ಸಂಸ್ಥೆ ಪ್ರತಿಯೊಂದು ಪ್ರಥಮ ದರ್ಜೆ ಕಾಲೇಜಿನಲ್ಲೂ ರಕ್ತದಾನ ಶಿಬಿರ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಕುಮಾರ್ ಮಾತನಾಡಿ, ಇದೇ ಪ್ರಥಮ ಬಾರಿಗೆ ರೆಡ್ಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದ್ದು ವಿದ್ಯಾರ್ಥಿಗಳು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎಂದರು. ರೆಡ್ಕ್ರಾಸ್ ಸಂಸ್ಥೆಯ ಜಿಲ್ಲಾಧ್ಯಕ್ಷ ಎಚ್.ಎಂ. ಶಿವಣ್ಣ, ಜಿಲ್ಲಾ ಆಸ್ಪತ್ರೆಯ ಹಿರಿಯ ತಂತ್ರಜ್ಞ ಶಿವಸ್ವಾಮಿ, ರೆಡ್ಕ್ರಾಸ್ ಸಂಸ್ಥೆ ತಾಲೂಕು ಅಧ್ಯಕ್ಷೆ ಶಾರದಾ ಗುರುಮೂರ್ತಿ, ಹರೀಶ್ ಆಚಾರಿ, ಸುರೇಶ್ ಹಾಗೂ ಇತರರು ಇದ್ದರು. ಕಾಲೇಜಿನ ಉಪನ್ಯಾಸಕರು, ಎನ್ಎಸ್ಎಸ್ ವಿದ್ಯಾರ್ಥಿಗಳು ಹಾಗೂ ಕಾಲೇಜಿನ ನೂರಾರು ವಿದ್ಯಾರ್ಥಿಗಳು ರಕ್ತದಾನ ಮಾಡಿದರು.
ಲಾರಿ ಉರುಳಿ
ಕಾರ್ಮಿಕ ಸಾವು
ಮೈಸೂರು: ಮರಳು ತುಂಬಿದ ಲಾರಿ ಉರುಳಿ ಬಿದ್ದು ಕೂಲಿ ಕಾರ್ಮಿಕನೊಬ್ಬ ಮೃತಪಟ್ಟು, ಇಬ್ಬರು ಗಾಯಗೊಂಡಿರುವ ಘಟನೆ ಟಿ.ನರಸೀಪುರ ರಸ್ತೆಯಲ್ಲಿರುವ ಆಲನಹಳ್ಳಿ ಬಳಿ ಶುಕ್ರವಾರ ಬೆಳಗ್ಗೆ ನಡೆದಿದೆ. ಟಿ.ನರಸೀಪುರ ತಾಲೂಕಿನ ಇಂಡವಾಳು ಗ್ರಾಮದ ನಿವಾಸಿ ಮೂರ್ತಿ (40) ಮೃತಪಟ್ಟವರು.