ಮತ ಜಾಗೃತಿಗೆ ಬೀದಿನಾಟಕ
ಅರಕಲಗೂಡು: ಲೋಕಸಭಾ ಸಾರ್ವತ್ರಿಕ ಚುನಾವಣೆ ಸಲುವಾಗಿ ಭಾರತ ಚುನಾವಣಾ ಆಯೋಗ ಬೀದಿ ನಾಟಕಗಳ ಮೂಲಕ ಮತದಾನ ಜಾಗೃತಿ ಅಭಿಯಾನ ನಡೆಸಿದೆ. ಶುಕ್ರವಾರ ಅರಕಲಗೂಡು ವಿಧಾನ ಸಭಾ ಕ್ಷೇತ್ರದಲ್ಲಿ ತಪ್ಪದೇ ಮತದಾನ ಮಾಡುವಂತೆ ಜಾಗೃತಗೊಳಿಸುವ ಸಲುವಾಗಿ ಬಿ.ಟಿ. ಮಾನವ ಮತ್ತು ತಂಡದವರಿಂದ ಪಟ್ಟಣದ ಅ.ನ.ಕೃ ವೃತ್ತದಲ್ಲಿ ಬೀದಿ ನಾಟಕ ಆಯೋಜಿಸಲಾಗಿತ್ತು.
ಈ ವೇಳೆ ಮಾತನಾಡಿದ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶಿವರಾಂ ಅವರು ಉತ್ತಮ ಸಮಾಜದ ನಿರ್ಮಾಣ ಮತ್ತು ಪ್ರಜಾಪ್ರಭುತ್ವದ ಉಳಿವಿಗಾಗಿ ಉತ್ತಮರನ್ನು ಲೋಕಸಭೆಗೆ ಆಯ್ಕೆ ಮಾಡಲು ತಪ್ಪದೇ ಮತದಾನದಲ್ಲಿ ಪ್ರತಿ ಪ್ರಜೆಯೂ ಪಾಲ್ಗೊಳ್ಳಬೇಕೆಂದರು. ತಾಲೂಕಿನಲ್ಲಿ ಅಭಿಯಾನದ ಉದ್ಘಾಟನೆಯನ್ನು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸುರೇಶ್ ಬಾಬು ನೆರವೇರಿಸಿದರು. ಈ ವೇಳೆ ಪಟ್ಟಣ ಪಂಚಾಯಿತಿ ಎಂಜಿನಿಯರ್, ವಾರ್ತಾ ಮತ್ತು ಪ್ರಚಾರ ಇಲಾಖೆ ಅಧಿಕಾರಿಗಳು ಹಾಜರಿದ್ದರು. ಪಟ್ಟಣದ ಎಚ್.ಎನ್. ನಂಜೇಗೌಡ ವೃತ್ತ, ಕೊಣನೂರು, ರಾಮನಾಥಪುರಗಳಲ್ಲಿ ಬೀದಿ ನಾಟಕ ಪ್ರದರ್ಶನ ಮಾಡಲಾಯಿತು.
ಚಿಣ್ಣರ ಮೇಳಗಳು ನಾಳೆಯಿಂದ
ಮೈಸೂರು: ರಂಗಾಯಣದ ವತಿಯಿಂದ ಏ.13 ರಿಂದ ಮೇ 11 ರವರೆಗೆ 7 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಚಿಣ್ಣರ ಮೇಳ ನಡೆಯಲಿದೆ. ಏ.6ರ ಬೆಳಗ್ಗೆ 10ಕ್ಕೆ ರಂಗಾಯಣದ ಟಿಕೆಟ್ ಕೌಂಟರ್ನಲ್ಲಿ ಪ್ರವೇಶದ ಅರ್ಜಿಗಳನ್ನು ನೀಡಲಾಗುವುದು. ಏ.9ರ ಸಂಜೆ 5ರೊಳಗೆ ಅರ್ಜಿಗಳನ್ನು ಕಚೇರಿ ತಲುಪಿಸಬೇಕು. ಜೆಎಸ್ಎಸ್ ಕಲಾಮಂಟಪದ ವತಿಯಿಂದ ನಡೆಯುವ ಎಳೆಯರ ಮೇಳ 2014ರ ಬೇಸಿಗೆ ಶಿಬಿರ ಏ.6 ರಿಂದ 29 ರವರೆಗೆ ಸರಸ್ವತಿಪುರಂನ ಜೆಎಸ್ಎಸ್ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದೆ. ಹೆಚ್ಚಿನ ಮಾಹಿತಿಗಾಗಿ ಮಂಜುನಾಥ್, ಮೊ. 9620257871 ಸಂಪರ್ಕಿಸಬಹುದು. ನವೋದಯ ಫೌಂಡೇಶನ್ ವತಿಯಿಂದ ಏ.7ರಿಂದ ಬೇಸಿಗೆ ಶಿಬಿರ ಆಯೋಜಿಸಿದೆ. ಶಿಬಿರದಲ್ಲಿ ಕರಕುಶಲ, ಚಿತ್ರಕಲೆ, ಹಾಡು, ನೃತ್ಯ ಇನ್ನಿತರ ವಿಷಯಗಳ ಬಗ್ಗೆ ತರಬೇತಿ ನೀಡಲಿದೆ. ಆಸಕ್ತರು ಏ.6ರೊಳಗೆ ಹೆಸರು ನೋಂದಾಯಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮೊ. 8904204581 ಸಂಪರ್ಕಿಸಬಹುದು.