ಅಂಬೇಡ್ಕರ್ ಭಾವಚಿತ್ರಕ್ಕೆ ದುಷ್ಕರ್ಮಿಗಳಿಂದ ಚಪ್ಪಲಿ ಹಾರ
ಟಿ.ನರಸೀಪುರ: ತಾಲೂಕಿನ ಇಂಡವಾಳು ಗ್ರಾಮದಲ್ಲಿ ಅಂಬೇಡ್ಕರ್ ಭಾವಚಿತ್ರದ ನಾಮಫಲಕಕ್ಕೆ ಕಿಡಿಗೇಡಿಗಳು ಚಪ್ಪಲಿ ಹಾರ ಹಾಕಿ ಅವಮಾನ ಮಾಡಿರುವ ಘಟನೆ ನಡೆದಿದೆ.
ಗ್ರಾಮದ ಮೈಸೂರು ಮುಖ್ಯರಸ್ತೆಯ ಪಕ್ಕದಲ್ಲಿಯೇ ಇರುವ ಅಂಬೇಡ್ಕರ್ ಭಾವಚಿತ್ರವಿದ್ದ ಯುವಕ ಸಂಘದ ನಾಮಫಲಕಕ್ಕೆ ಶುಕ್ರವಾರ ರಾತ್ರಿ ಕಿಡಿಗೇಡಿಗಳು ಚಪ್ಪಲಿ ಹಾರ ಹಾಕಿದ್ದಾರೆ. ಶನಿವಾರ ಬೆಳಗ್ಗೆ ಘಟನೆ ತಿಳಿಯುತ್ತಿದ್ದಂತೆ ವಿವಿಧ ದಲಿತ ಸಂಘಟನೆಗಳ ಮುಖಂಡರು ಸ್ಥಳಕ್ಕೆ ಧಾವಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಗ್ರಾಮಸ್ಥರೊಂದಿಗೆ ಸೇರಿ ಮೈಸೂರು ಮುಖ್ಯರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದ್ದಾರೆ.
ತಪ್ಪಿತಸ್ಥರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ಮಾಡುವುದಾಗಿ ಪಟ್ಟು ಹಿಡಿದಿದ್ದರಿಂದ ಸ್ಥಳಕ್ಕೆ ಆಗಮಿಸಿದ ಎಎಸ್‌ಪಿ ನಂಜುಂಡಪ್ಪ ಹಾಗೂ ತಹಸೀಲ್ದಾರ್ ರಾಮಪ್ಪ ಅವರು ಪ್ರತಿಭಟನಾಕಾರರ ಮನವೊಲಿಸಿದ್ದಾರೆ. ರಸ್ತೆತಡೆಯಿಂದಾಗಿ ಮೂರ್ನಾಲ್ಕು ಗಂಟೆ ಕಾಲ ಸಂಚಾರ ವ್ಯತ್ಯಯವಾಗಿತ್ತು.