ಗೆಳೆಯನ ಕೊಂದವನಿಗೆ ಜೀವಾವಧಿ ಶಿಕ್ಷೆ
ಚನ್ನರಾಯಪಟ್ಟಣ: ಸಾಲದ ವಿಚಾರದಲ್ಲಿ ನಡೆದ ಗಲಾಟೆ ತಾರಕಕ್ಕೇರಿ ಸ್ನೇಹಿತನನ್ನೇ ಕೊಲೆ ಮಾಡಿದ್ದ ಆರೋಪಿಗೆ ಪಟ್ಟಣದ ಶೀಘ್ರ ವಿಲೇವಾರಿ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ತಾಲೂಕಿನ ಸೊಪ್ಪಿನಹಳ್ಳಿ ಗ್ರಾಮದ ಕುಮಾರ್ ಜೀವಾವದಿ ಶಿಕ್ಷೆಗೆ ಗುರಿಯಾದ ಆರೋಪಿ. 2012ರ ಮೇ ತಿಂಗಳಲ್ಲಿ ಕೇವಲ ರು. 800 ಸಾಲ ನೀಡಿದ್ದ ತನ್ನ ಸ್ನೇಹಿತ ಕುಮಾರ್‌ನೊಂದಿಗೆ ಜಗಳದಿಂದ ರೊಚ್ಚಿಗೆದ್ದು, ಚಾಕುವಿನಿಂದ ಹೊಟ್ಟೆಗೆ ಚುಚ್ಚಿದ ಪರಿಣಾಮ ಕುಮಾರ್ (ಇಬ್ಬರ ಹೆಸರೂ ಕುಮಾರ್) ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದನು. ಈ ಸಂಬಂದ ಪಟ್ಟಣದ ಪೋಲಿಸರು ಕುಮಾರ್ ಬಂಧಿಸಿ ಆತನ ವಿರುದ್ಧ ದೂರು ದಾಖಲಿಸಿದ್ದರು. ಈ ಬಗ್ಗೆ ಪಟ್ಟಣದ ಶೀಘ್ರ ವಿಲೇವಾರಿ ನ್ಯಾಯಾಧೀಶರಾದ ಶ್ಯಾಮ್‌ಪ್ರಸಾದ್ ಜೀವಾವಧಿ ಶಿಕ್ಷೆ ವಿಧಿಸಿದರಲ್ಲದೆ ರು. 20 ಸಾವಿರ ದಂಡ ವಿಧಿಸಿ ರು. 10 ಸಾವಿರ ಹಣವನ್ನು ಆರೋಪಿ ಕುಮಾರ್, ಕೊಲೆಯಾದ ಕುಮಾರ್ ಪತ್ನಿಗೆ ನೀಡುವಂತೆ ಆದೇಶಿಸಿದರು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ರಾಜಗೀರ್ ಬೀರಪ್ಪ ವಾದ ಮಂಡಿಸಿದರು.