ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ದೌರ್ಜನ್ಯ ನಡೆಸುವುದೇ ಕಾಂಗ್ರೆಸ್ ಸಂಸ್ಕೃತಿ

Rashmi Kasaragodu
Updated On : 6 Apr 2014, 12:31 pm

ಹಾಸನ: ದೌರ್ಜನ್ಯ ನಡೆಸುವುದು ಕಾಂಗ್ರೆಸ್‌ನ ಸಂಸ್ಕೃತಿ ಎಂದು ಮಾಜಿ ಸಂಸದೆ ತೇಜಸ್ವಿನಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ಸೋಲಿಸಲು ಹಾಸನಕ್ಕೆ ಬಿಟ್ಟಿರುವ ಗೂಳಿಯ ಕೊಂಬನ್ನು ಮುರಿಯೋದು ನಮಗೆ ಚೆನ್ನಾಗಿ ಗೊತ್ತಿದೆ ಎಂದು ಅವರು ಹೇಳಿದರು.
ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದವತಿಯಿಂದ ನಗರದಲ್ಲಿ ಶನಿವಾರ ನಡೆದ ಮಹಿಳಾ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಗೂಳಿ ಎಂಬುದರ ಅರ್ಥ ಬೇಜಾವಾಬ್ದಾರಿತನ, ಸಮಾಜಕ್ಕೆ ಕಂಠಕವಾದುದು ಮತ್ತು ದೌರ್ಜನ್ಯ ಎಸಗುವಂಥದ್ದು ಎಂದು ಅಭಿಪ್ರಾಯಪಟ್ಟರು.
ನಂತರ, ತಮ್ಮ ಟೀಕಾಸ್ತ್ರವನ್ನು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಕಡೆಗೆ ತಿರುಗಿಸಿದ ಅವರು, ಕಾಂಗ್ರೆಸ್‌ನ ಗೂಳಿ ಇಂಧನ ಖಾತೆಯನ್ನು ಸರಿಯಾಗಿ ನಿರ್ವಹಿಸಲಿ. ಬೆಂಗಳೂರಿನಲ್ಲಿ ವಿದ್ಯುತ್ತನ್ನು ಉದ್ಯಮಿಗಳು ಕದಿಯುತ್ತಿದ್ದಾರೆ. ಹಿಂದೆ ಶೋಭಾ ಕರಂದ್ಲಾಜೆ ಅವರು ಇಂಧನ ಖಾತೆ ಸಚಿವರಾಗಿದ್ದಾಗ ಈ ರೀತಿ ವಿದ್ಯುತ್ ಅಪವ್ಯಯವಾಗುತ್ತಿರಲಿಲ್ಲ. ಆ ಗೂಳಿ ಬಿಜೆಪಿ ತೋಟಕ್ಕೆ ಅಥವಾ ಜೆಡಿಎಸ್ ತೋಟಕ್ಕೆ ನುಗ್ಗಿದರೆ ಅದನ್ನು ಮಟ್ಟಹಾಕಲಾಗುತ್ತದೆ ಎಂದು ಅವರು ಎಚ್ಚರಿಸಿದರು.
ಕಾಂಗ್ರೆಸ್‌ನವರಿಗೆ 122 ಸೀಟು ಬಂದಿರೋದ್ರಿಂದ ಅಹಂಕಾರ ಮತ್ತು ಮದ ಆವರಿಸಿಕೊಂಡಿದೆ ಎಂದ ಅವರು, ಈ ಗೂಳಿ, ದೌರ್ಜನ್ಯ ಸಂಸ್ಕೃತಿಯನ್ನು ಬಿಟ್ಟು ಬಿಡಬೇಕು. ಇಲ್ಲವಾದಲ್ಲಿ ರಾಜ್ಯದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಈ ಬಾರಿ ಬೆಂಗಳೂರು ಗ್ರಾಮಾಂತರದಲ್ಲಿ ಜನರು ಯಾವ ತೀರ್ಪು ನೀಡಲಿದ್ದಾರೆ ಎಂಬುದನ್ನು ಕಾದು ನೋಡಿ ಎಂದ ಅವರು, ದೇವೇಗೌಡರ ವಿರುದ್ಧ ನಾನು ಗೆದ್ದಾಗ ನನ್ನನ್ನು ಗೆಲ್ಲಿಸಿದೆ ಎಂದು ಹೇಳಿಕೊಂಡು ತಿರುಗಾಡುತ್ತಿದ್ದು, ಅಂಥವರಿಗೆ ನಮ್ಮ ಕ್ಷೇತ್ರದ ಜನತೆ ತಕ್ಕ ಉತ್ತರ ನೀಡಲಿದ್ದಾರೆ ಎಂದರು. ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಸುಲೋಚನಾ ಭಟ್, ಜಿಲ್ಲಾ ಪಂಚಾಯ್ತಿ ಸದಸ್ಯೆ ಜ್ಯೋತಿ ಗುರುದೇವ್, ಜಿಲ್ಲಾಧ್ಯಕ್ಷೆ ಸುಶೀಲಾ ಅಣ್ಣಪ್ಪ, ರೇಖಾ ಹುಲಿಯಪ್ಪ, ಜಯಶೀಲಾ, ಅನ್ನಪೂರ್ಣ, ರತ್ನಾ ಪ್ರಕಾಶ್, ಸೌಭಾಗ್ಯ, ಶಾಂತ ಮಣಿ ಹಾಗೂ ಇತರರು ಇದ್ದರು.


ತೇಜಸ್ವಿನಿ ರೋಡ್ ಶೋ
ಹಾಸನ: ಬಿಜೆಪಿ ಮುಖಂಡೆ ತೇಜಸ್ವಿನಿ ರಮೇಶ್ ಅವರು ಶನಿವಾರ ಜಿಲ್ಲಾ ಬಿಜೆಪಿ ಕಾರ್ಯಕರ್ತರೊಂದಿಗೆ ರೋಡ್ ಶೋ ನಡೆಸಿದರು.
ನಗರದ ಬಿಜೆಪಿ ಕಚೇರಿಯಿಂದ ಹೊರಟ ಮೆರವಣಿಗೆ ಎನ್.ಆರ್. ವೃತ್ತ, ಹೇಮಾವತಿ ಪ್ರತಿಮೆ, ಮಹಾವೀರ ವೃತ್ತ, ಸಾಲಗಾಮೆ ರಸ್ತೆ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ಬಂತು. ನಂತರ ಶ್ರೀ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಅಂತ್ಯಗೊಂಡಿತು.


ಸವಾಲು
ತಮ್ಮನ್ನು ಹಲವಾರು ಬಾರಿ ಗೆದ್ದಿರೋ ಹುಲಿ ಎಂದು ಬಿಂಬಿಸಿಕೊಳ್ಳುವಂತರು, ಕುರಿಯನ್ನು ಮುಂದಿಟ್ಟುಕೊಂಡು ಗೆಲ್ಲುವುದೂ ಒಂದು ಗೆಲುವಲ್ಲ. ತಾಕತ್ತಿದ್ದರೆ, ಬಿಜೆಪಿ ಅಭ್ಯರ್ಥಿ ವಿಜಯ ಶಂಕರ್ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ವಿರುದ್ಧ ಗೆಲ್ಲಲಿ ನೋಡೋಣ ಎಂದರು.
ಬಿಜೆಪಿ ಒಡೆಯಲು ಸಾಧ್ಯವಿಲ್ಲ
ಜೆಡಿಎಸ್‌ನಿಂದ ಪುಟ್ಟೇಗೌಡರನ್ನು ಕಾಂಗ್ರೆಸ್‌ಗೆ ಕರೆಸಿಕೊಂಡ ಡಿಕೆಶಿ ಜೆಡಿಎಸ್ಸನ್ನು ಒಡೆಯಲು ಪ್ರಯತ್ನಿಸಿದರು. ಆದರೆ ಯಾವುದೇ ಕಾರಣಕ್ಕೂ ಬಿಜೆಪಿ ಒಡೆಯಲು ಅವರಿಂದ ಸಾಧ್ಯವಿಲ್ಲ ಎಂದರು.
ಇಬ್ರಾಹಿಂಗೆ ಹೋಮದ ದಾರ
ಬಾಯಿಗೆ ಬಂದಂತೆ ಹರಡುವಂತಹ ಸಿ.ಎಂ.ಇಬ್ರಾಹಿಂ ಬಾಯಿಗೆ ಹೋಮದ ದಾರರಿಯಿಂದ ಕಟ್ಟಿ ಹಾಕಬೇಕು. ಮಹಿಳೆಯರಿಗೆ ಗೌರವವಿಲ್ಲದೆ ಮಾತನಾಡುವಂತಹ ಇಬ್ರಾಹಿಂ ಮಾತುಗಾರಿಕೆ ಸರಿ ಇಲ್ಲ ಎಂದು ಕಿಡಿಕಾರಿದರು.
ಹಿಂದುಗಳಿಂದ ತೊಂದರೆ ಆಗಿಲ್ಲ
ರಾಮಮಂದಿರಕ್ಕೆ ಸಂಬಂಧಿಸಿದ ವಿಚಾರ ಕೋರ್ಟ್‌ನಲ್ಲಿ ಇದ್ದ ಸಂದರ್ಭದಲ್ಲಿ ಎಲ್ಲರ ಮತ ಸಿಗಲಿ ಎಂಬ ಕಾರಣಕ್ಕೆ ರಾಮಮಂದಿರದ ಬೀಗವನ್ನು ತೆಗೆದಿಸಿದಂತವರು ರಾಜೀವ್‌ಗಾಂಧಿ. ಯಾವುದೇ ಕಾರಣಕ್ಕೂ ಮುಸ್ಲಿಂ ಬಾಂಧವರಿಗೆ ಹಿಂದುಗಳಿಂದ ತೊಂದರೆಯಾಗಿಲ್ಲ ಎಂದು ಹೇಳಿದರು.
ಶಾಹಿ ಇಮಾಮ್ ಮೊರೆ
ದೇಶದಲ್ಲಿ ಕಾಂಗ್ರೆಸ್‌ಗೆ ಸೋಲು ಕಟ್ಟಿಟ್ಟ ಬುತ್ತಿ ಎಂಬ ಭಯದಿಂದ ಸೋನಿಯಾ ಗಾಂಧಿ ಅವರು ದೆಹಲಿಯ ಜಮಾ ಮಸೀದಿಯ ಶಾಹಿ ಇಮಾಮ್ ಧರ್ಮಗುರು ಸಯ್ಯದ್ ಅಹ್ಮದ್ ಬಖಾರಿ ಅವರ ಕಾಲು ಹಿಡಿದಿದ್ದಾರೆ ಎಂದು ಟೀಕಿಸಿದರು.


ಮೋದಿ ಪ್ರಧಾನಿ ಆಗಬೇಕು
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಮೊದಲು ಸಿಎಂ ಆದಾಗ ಗುಜರಾತ್ ವಿದೇಶಿ ಬ್ಯಾಂಕ್‌ಗಳಿಂದ ರು. 50 ಸಾವಿರ ಕೋಟಿ ಸಾಲ ಮಾಡಿತ್ತು. ಆದರೆ, ಪ್ರಸ್ತುತ ಮೋದಿ ಅವರು ವಿದೇಶಿ ಬ್ಯಾಂಕ್‌ನಲ್ಲಿ ರು. 1 ಲಕ್ಷ ಕೋಟಿ ಹಣ ಠೇವಣಿ ಇಟ್ಟಿದ್ದಾರೆ. ಅದಕ್ಕಾಗಿ ಮೋದಿ ದೇಶದ ಪ್ರಧಾನಿ ಆಗಬೇಕು. ಮೋದಿ ಅವರನ್ನು ಬಲಪಡಿಸಬೇಕಾದರೆ ಹಾಸನ ಲೋಕಸಭಾ ಬಿಜೆಪಿ ಅಭ್ಯರ್ಥಿ ಕುರುಬ ಸಮಾಜದ ದೇಶಪ್ರೇಮಿ ವಿಜಯ ಶಂಕರ್ ಗೆಲವು ಸಾಧಿಸಲು ಸಹಕರಿಸಬೇಕು ಎಂದು ಮನವಿ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement