ಮತ ಬಹಿಷ್ಕಾರದ ಕೂಗು
ಕನ್ನಡಪ್ರಭ ವಾರ್ತೆ, ಹಾಸನ, ಏ. 5
ಗ್ರಾಮಕ್ಕೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಲ್ಲಿ ವಿಫಲವಾಗಿರುವುದರಿಂದ ಈ ಬಾರಿ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿಯ ಗೊರವನಹಳ್ಳಿ ಮತ್ತು ಹೊಸಹಳ್ಳಿ ಗ್ರಾಮಸ್ಥರು ತಿಳಿಸಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗ್ರಾಮಸ್ಥ ಧರ್ಮಪ್ಪ, ಗೊರವನಹಳ್ಳಿ ಹಾಗೂ ಹೊಸಹಳ್ಳಿ ಗ್ರಾಮಗಳು ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿ ವ್ಯಾಪ್ತಿಗೆ ಒಳಪಟ್ಟಿದ್ದು, ಶೇ. 90ಕ್ಕೂ ಹೆಚ್ಚು ಪರಿಶಿಷ್ಟ ಜಾತಿಯವರು ವಾಸವಾಗಿದ್ದಾರೆ.
ಗ್ರಾಮದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದ್ದು, ಗ್ರಾಮಕ್ಕೆ ಸರಿಯಾದ ರಸ್ತೆ ಸಂಪರ್ಕ, ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲು ಸರ್ಕಾರಕ್ಕಾಗಲೀ ಅಥವಾ ಜನಪ್ರತಿನಿಧಿಗಳಿಗಾಗಲೀ ಸಾಧ್ಯವಾಗಿಲ್ಲ ಎಂದು ಆರೋಪಿಸಿದರು.
ಹುಸಿ ಭರವಸೆ: ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ರಾಜ್ಯ ಹಾಗೂ ರಾಷ್ಟ್ರ ರಾಜಕಾರಣಕ್ಕೆ ಮತದಾನನ ಮಾಡುವ ಮೂಲಕ ನಾಯಕರನ್ನು ಆಯ್ಕೆ ಮಾಡಿ ಕಳುಹಿಸಿದ್ದೇವೆ. ನಮ್ಮಿಂದ ಮತವನ್ನು ಪಡೆದು ಗೆದ್ದು ಹೋಗುವ ನಾಯಕರು ಮೂಲಭೂತ ಸೌಕರ್ಯ ಕಲ್ಪಿಸುವುದಾಗಿ ಭರವಸೆ ನೀಡುತ್ತಾರೆ. ಆದರೆ, ಚುನಾವಣೆಯ ನಂತರ ಇತ್ತ ಸುಳಿಯುವುದಿಲ್ಲ.
ಮೂಲಭೂತ ಸೌಕರ್ಯಕ್ಕಾಗಿ ನಾನು ಅವರಬಳಿ ಭಿಕ್ಷೆ ಬೇಡುವಂತಾಗಿರುವುದರಿಂದ ಸಂವಿಧಾನಾತ್ಮಕ ಹಕ್ಕನ್ನು ನ್ಯಾಯಯುತವಾಗಿ ಪಡೆಯಲು ಸಾಧ್ಯವಾಗಿಲ್ಲ ಎಂದರು.
ವ್ಯರ್ಥವಾದ ಪ್ರತಿಭಟನೆಗಳು: ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳು ದೈನಂದಿನ ಕೆಲಸ ಕಾರ್ಯಗಳಿಗಾಗಿ ಬೇಲೂರು ತಾಲೂಕು ಕೇಂದ್ರಕ್ಕೆ ತೆರಳಬೇಕಾಗಿದೆ. ಬೇಲೂರಿಗೆ ಸಂಪರ್ಕಿಸಲು ಎತ್ತಿನಗಾಡಿ, ಖಾಸಗಿ ಜಾಗದ ರಸ್ತೆಯು ತೀರಾ ಶೋಚನೀಯ ಸ್ಥಿತಿಯಿಂದಾಗಿ ಬೇಸತ್ತು ಜನಪ್ರತಿನಿಧಿಗಳಿಗೆ ಮನವಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹಲವಾರು ಬಾರಿ ಪ್ರತಿಭಟನೆ ನಡೆಸಿದರೂ ಪ್ರಯೋಜನವಾಗಿಲ್ಲ ಎಂದರು.
ಒಮ್ಮತದ ನಿರ್ಧಾರ: ಗ್ರಾಮಗಳಿಗೆ ಕನಿಷ್ಟ ಸುಸಜ್ಜಿತ ರಸ್ತೆ ಸಂಪರ್ಕ ಕಲ್ಪಿಸಲು ಹಾಗೂ ಯೋಗ್ಯ ಕುಡಿಯುವ ನೀರಿನ ಸೌಲಭ್ಯ ಒದಗಿಸುವಲ್ಲಿ ವಿಫಲವಾಗಿರುವುದರಿಂದ ಈ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಿದ್ದು, ಚುನಾವಣೆಯಲ್ಲಿ ಮತದಾನ ಮಾಡುವುದಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಾರ್ವೆ ಗ್ರಾಮಪಂಚಾಯ್ತಿ ಸದಸ್ಯೆ ಸೌಭಾಗ್ಯ, ಗ್ರಾಮಸ್ಥರಾದ ಪ್ರವೀಣ್‌ಗೌಡ, ಯೋಗೇಶ್, ಸುಬ್ರಹ್ಮಣಿ ಹಾಗೂ ಇತರರು ಇದ್ದರು.