ಮೋದಿಗೆ ಶೇ. 80 ಯುವಕರ ಬೆಂಬಲ
ಅರಸೀಕೆರೆ: ಸಮೃದ್ಧ ಭಾರತ ನಿರ್ಮಾಣ ಕಾರ್ಯದಲ್ಲಿ ಯುವ ಜನಾಂಗ ಪ್ರಮುಖ ಪಾತ್ರವನ್ನು ವಹಿಸಬೇಕೆಂಬ ಉದ್ದೇಶದಿಂದ ನಮೋ ಬ್ರಿಗೇಡ್ ತಂಡ ದೇಶದಾದ್ಯಂತ 12.73 ಕೋಟಿ ಹೊಸ ಯುವ ಮತದಾರರ ಹೆಸರುಗಳನ್ನು ನೋಂದಾವಣೆ ಮಾಡಿಸಿದ್ದು, ಇದರಲ್ಲಿ ಶೇ. 80 ಭಾಗದ ಯುವಕರು ನರೇಂದ್ರ ಮೋದಿ ಬೆಂಬಲಿಸಿ ತಮ್ಮ ಮತದಾನ ಮಾಡಲಿದ್ದಾರೆ ಎಂದು ತಾಲೂಕು ನಮೋ ಬ್ರಿಗೇಡ್ ಸಂಚಾಲಕ ಕೆಂಪುಸಾಗರ ಶಿವರಾಜ್ ಕುಮಾರ್ ತಿಳಿಸಿದರು.
ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ತುರ್ತು ಪರಿಸ್ಥ್ಥಿತಿಯ ನಂತರ 1975ರಲ್ಲಿ ನಡೆದ ಜೆ.ಪಿ. ಚಳುವಳಿಯನ್ನು ನೆನಪಿಸುವ ನಿಟ್ಟಿನಲ್ಲಿ ಸಮೃದ್ಧ ಭಾರತ ನಿರ್ಮಾಣಕ್ಕೆ ಸಂಕಲ್ಪ ತೊಟ್ಟಿರುವ ನಮೋ ಬ್ರಿಗೇಡ್ ತಂಡ, ನರೇಂದ್ರ ಮೋದಿ ಅವರನ್ನು ದೇಶದ ಪ್ರಧಾನಿ ಸ್ಥಾನಕ್ಕೆ ಆಯ್ಕೆ ಮಾಡಬೇಕು ಎಂಬ ಸದುದ್ದೇಶ ಹೊಂದಿದೆ. ಈ ಹಿನ್ನೆಲೆಯಲ್ಲಿ, ರಾಷ್ಟ್ರಮಟ್ಟದಲ್ಲಿ ಒಂದು ರೀತಿಯ ಚಳುವಳಿ ಹುಟ್ಟು ಹಾಕಿದೆ ಎಂದರು.
ನಮೋ ಬ್ರಿಗೇಡ್ ವತಿಯಿಂದ ದೇಶದಲ್ಲಿ ಪ್ರಥಮ ಬಾರಿಗೆ ತಮ್ಮ ಮತದಾನದ ಹಕ್ಕನ್ನು ಚಲಾಯಿಸುವ 12.73 ಕೋಟಿ ಯುವ ಮತದಾರರ ಸೇರ್ಪಡೆಗೆ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದರು. ಜಿಲ್ಲೆಯಲ್ಲಿ ಬಹುತೇಕ ಭಾಗಗಳಲ್ಲಿ ಮತದಾರರಿಂದ ಒಳ್ಳೆಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದು, ಕೇಂದ್ರ ಯುಪಿಎ ಸರ್ಕಾರದ ಭ್ರಷ್ಟಾಚಾರ ಆಡಳಿತ ವಿರೋಧಿ ಅಲೆ, ಮತ್ತೊಂದೆಡೆಯಲ್ಲಿ ದೇಶದ ಅಭಿವೃದ್ಧಿಯ ಚಿಂತಕ ನರೇಂದ್ರ ಮೋದಿ ಅವರ ಹೆಸರಿನ ಅಲೆಗಳ ನಡುವೆ ಹಾಸನ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿ.ಎಚ್. ವಿಜಯಶಂಕರ್ ಗೆಲವು ನಿಶ್ಚಿತವಾಗಿದೆ ಎಂಬ ಆಶಾಭಾವನೆಯನ್ನು ಅವರು ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ನಮೋ ಬ್ರಿಗೇಡ್ ತಾಲೂಕು ಸಹ ಸಂಚಾಲಕ ಚಿಕ್ಕಗಂಡಸಿ ವಿನೂ, ನವೀನ್ ಕುಮಾರ್, ಮೋಹನ್ ಇದ್ದರು.