ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ವಿದ್ಯುತ್ ನೀಡಿಕೆಯಲ್ಲಿ ತಾರತಮ್ಯ ಧೋರಣೆ

Rashmi Kasaragodu
Updated On : 6 Apr 2014, 12:32 pm

ಹಾಸನ: ಜಿಲ್ಲೆಗೆ ವಿದ್ಯುತ್ ಸರಬರಾಜು ಮಾಡುವಲ್ಲಿ ಚುನಾವಣಾ ಉಸ್ತುವಾರಿ ವಹಿಸಿರುವ ಇಂಧನ ಸಚಿವರು ತಾರತಮ್ಯ ಧೋರಣೆ ತಾಳಿದ್ದಾರೆ ಎಂದು ಜೆಡಿಎಸ್ ಮುಖಂಡ ಹಾಗೂ ಶಾಸಕ ಎಚ್.ಡಿ. ರೇವಣ್ಣ ಆರೋಪಿಸಿದ್ದಾರೆ.
ಶನಿವಾರ ಹಳ್ಳಿಮೈಸೂರು ಹೋಬಳಿಯ ಗ್ರಾಮಗಳ ಮನೆ ಮನೆಗಳಿಗೆ ತೆರಳಿ ದೇವೇಗೌಡರ ಪರ ಮತ ಯಾಚಿಸಿದ ರೇವಣ್ಣ, ಆನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಬೆಂಗಳೂರು ಗ್ರಾಮಾಂತರಕ್ಕೆ 15 ತಾಸುಗಳ ಕಾಲ ವಿದ್ಯುತ್ ವಿತರಣೆ ಮಾಡುತ್ತಿದೆ.  ಹಾಸನದಲ್ಲಿ ಜೆಡಿಎಸ್ ಶಾಸಕರು ಮತ್ತು ಸಂಸದರು ಇದ್ದಾರೆ ಎಂಬ ಕಾರಣಕ್ಕೆ ವಿದ್ಯುತ್ ಕಡಿತಗೊಳಿಸುತ್ತಿದ್ದಾರೆ ಎಂದರು.
ಹಿಡಿ ಶಾಪ: ಕೆಲವು ಗ್ರಾಮಗಳು ಜೆಡಿಎಸ್‌ಗೆ ಸಂಪೂರ್ಣವಾಗಿ ಬೆಂಬಲ ನೀಡುತ್ತಿರುವುದರಿಂದ ಆ ಗ್ರಾಮಗಳಿಗೆ ಟಿಸಿ (ಟ್ರಾನ್ಸ್‌ಫಾರ್ಮರ್) ಅಳವಡಿಸುವುದರಲ್ಲಿ ವಿಳಂಬ ಮಾಡುತ್ತಿದ್ದು, ಅಲ್ಲಿಯ ಜನರ ಕುಡಿಯುವ ನೀರಿಗೆ ತೊಂದರೆ ಉಂಟಾಗುತ್ತಿದೆ. ಕಾಂಗ್ರೆಸ್ ಮುಖಂಡರು ಮಲತಾಯಿ ಧೋರಣೆಯಿಂದ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಪಡುವಂತಾಗಿದ್ದು, ಕಾಂಗ್ರೆಸ್ ಸರ್ಕಾರದ ವಿರುದ್ಧ ಜನತೆ ಹಿಡಿಶಾಪ ಹಾಕುತ್ತಿದ್ದಾರೆ ಎಂದರು.
ಒತ್ತಾಯ: ಈ ಸಂಬಂಧವಾಗಿ ವಿದ್ಯುತ್ ವಿತರಣೆ ಹಾಗೂ ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಈಗಾಗಲೇ ಪತ್ರ ಬರೆದಿದ್ದು, ಜಿಲ್ಲಾಧಿಕಾರಿ ಹಾಗೂ ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಈ ಸಂಬಂಧ ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.
ಜನರ ಸಹಕಾರ: ಹಳ್ಳಿಮೈಸೂರು ಹೋಬಳಿಯು ಹೊಳೆನರಸೀಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇದ್ದಾಗ ನಾನು ಮಾಡಿದ ಅಭಿವೃದ್ಧಿ ಕೆಲಸಗಳನ್ನು ಬಿಟ್ಟರೆ, ಈಗ ಅರಕಲಗೂಡು ಕ್ಷೇತ್ರಕ್ಕೆ ಸೇರಿದ ನಂತರ, ಈ ಕ್ಷೇತ್ರದಲ್ಲಿ ಶಾಸಕ ಎ. ಮಂಜು ಯಾವುದೇ ಕೆಲಸಕಾರ್ಯಗಳನ್ನು ಮಾಡಿಲ್ಲ. ಈಗಿರುವಾಗ ತನ್ನ ಸ್ವಕ್ಷೇತ್ರದ ಅಭಿವೃದ್ಧಿಪಡಿಸದವರು ಜಿಲ್ಲೆಗೆ ಯಾವ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡುತ್ತಾರೆ ? ಎಂದು ಅವರು ಪ್ರಶ್ನಿಸಿದರು. ಇದನ್ನು ಮನಗಂಡಿರುವ ಹಳ್ಳಿ ಮೈಸೂರು ಹೋಬಳಿ ಜನತೆ ಈ ಬಾರಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಅತಿ ಹೆಚ್ಚಿನ ಮತಗಳನ್ನು ನೀಡಿ ಗೆಲುವಿಗೆ ಸಹಕರಿಸಲಿದ್ದಾರೆ ಎಂದು ಆಶಿಸಿದರು.
ಅಕ್ರಮ ಹಣ ತಡೆಗಟ್ಟಿ: ಜಿಲ್ಲೆಯ ಚುನಾವಣಾ ಉಸ್ತುವಾರಿ ವಹಿಸಿರುವ ಸಚಿವರು ತಮ್ಮ ಕಾರಿನಲ್ಲೇ ಅಕ್ರಮವಾಗಿ ಹಣವನ್ನು ತಂದು ಹಂಚುತ್ತಿದ್ದಾರೆ. ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳು ಕೂಡಲೇ ಈ ವಿರುದ್ಧ ಪರಿಶೀಲಿಸಿ ಹಂಚುತ್ತಿರುವ ಅಕ್ರಮ ಹಣವನ್ನು ತಡೆಗಟ್ಟಬೇಕು ಹಾಗೂ ಇದನ್ನು ಗಂಭೀರವಾಗಿ ಪರಿಗಣಿಸುವಂತೆ ಒತ್ತಾಯಿಸಿದರು.
ಕಾಂಗ್ರೆಸ್- ಬಿಜೆಪಿ ಒಳ ಒಪ್ಪಂದ: ಜಿಲ್ಲೆಯಲ್ಲಿ ಕಾಂಗ್ರೆಸ್‌ನವರು ಬಿಜೆಪಿಯೊಂದಿಗೆ ಒಳಒಪ್ಪಂದ ಮಾಡಿಕೊಂಡು ಬಿಜೆಪಿ ನಾಯಕರ ಮನೆಗೆ ತೆರಳಿ ಕಾಂಗ್ರೆಸ್ ಬೆಂಬಲಿಸುವಂತೆ ಬೇಡಿಕೊಳ್ಳುತ್ತಿದ್ದಾರೆ. ಜಿಲ್ಲೆಯಲ್ಲಿ ಬಿಜೆಪಿಯಲ್ಲಿ ಅನೇಕ ನಾಯಕರಿದ್ದರೂ ಕೂಡ ಹೊರ ಜಿಲ್ಲೆಯ ನಾಯಕರನ್ನು ಕರೆತಂದು ಕಳಣಕ್ಕೆ ಇಳಿಸುವ ಮೂಲಕ ಜಿಲ್ಲೆಯಲ್ಲಿ ಜೆಡಿಎಸ್ ಪ್ರಾಬಲ್ಯ ಮುರಿಯಲು ಮುಂದಾಗಿದ್ದಾರೆ. ಆದರೆ ಜಿಲ್ಲೆಯ ಜನತೆ ದೇವೇಗೌಡರನ್ನು ಬೆಂಬಲಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ, ಜಿಲ್ಲಾ ಪಂಚಾಯ್ತಿ ಸದಸ್ಯರು, ತಾಲೂಕು ಹಾಗೂ ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು, ಜೆಡಿಎಸ್ ಮುಖಂಡರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement